ಮಂಗಳವಾರ, ನವೆಂಬರ್ 12, 2019
19 °C
ರಾಜಕೀಯ ವ್ಯವಸ್ಥೆ ಪ್ರಜೆಗಳಿಗೆ ಪೂರಕವಾಗಿ ಸಂರಚಿತವಾಗಬೇಕಾದರೆ ಚುನಾವಣಾ ಆಯೋಗದ ಸ್ವಾತಂತ್ರ್ಯ 324(5)ನೇ ವಿಧಿಗೆ ತಿದ್ದುಪಡಿಯಾಗಬೇಕು

ಪ್ರಜಾ ಪಾಲ್ಗೊಳ್ಳುವಿಕೆ ವಿವಿಧ ಕಾಲಘಟ್ಟಗಳಲ್ಲಿ...

Published:
Updated:

ಭಾರತದ  ಎಲ್ಲಾ ಕ್ಷೇತ್ರಗಳ ಸಮಸ್ಯೆಗಳಿಗೆ ರಾಜಕೀಯ ಅಸ್ಥಿರತೆಯೇ ಮೂಲ. 1950ರ ಕಾಲಘಟ್ಟದಲ್ಲಿ ರಾಜಕೀಯ ವ್ಯವಸ್ಥೆ  ಒಂದು ಸಿದ್ಧಾಂತದ ಅಡಿಯಲ್ಲಿ ಸಂರಚಿತವಾಗಿತ್ತು. 1951 ರಲ್ಲಿ ಜೀಪು ಹಗರಣದ ಮುಖೇನ ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದ್ದರೂ ಕೂಡ, ಅದರ ತೀವ್ರತೆ ಅತ್ಯಂತ ತೀಕ್ಷ್ಣವಾಗಿತ್ತು. ತದನಂತರ 1970 ರ ಕಾಲಘಟ್ಟ ಅಧಿಕಾರದ ಹಪಹಪಿಸುವಿಕೆಗೆ ಸಾಕ್ಷಿಯಾಯಿತು.ಈ ಕಾಲಘಟ್ಟದಲ್ಲಿ ಅಧಿಕಾರಕ್ಕಾಗಿ  ಭಾರತದ ಶ್ರೇಷ್ಠ ಸಂವಿಧಾನವನ್ನು ದುರ್ಬಳಕೆ ಮಾಡಿಕೊಳ್ಳುವ ಹಲವಾರು ಪ್ರಯತ್ನಗಳು ಘಟಿಸಿದವು. ಉದಾಹರಣೆಗೆ ಅಂದಿನ ಸಂಸತ್ತಿನ ಸಾರ್ವಭೌಮತ್ವಕ್ಕಾಗಿ ಹೊರಡಿಸಿದ ಹಲವು ಸುಗ್ರೀವಾಜ್ಞೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. (111ನೇ ವಿಧಿಯ ಬಳಕೆ). 1960 ರ ನಂತರದ ಚುನಾವಣೆಗಳು ಸಿದ್ಧಾಂತ ರಹಿತವಾಗಿ ನಡೆಯುತ್ತಿರುವುದು ವಾಸ್ತವ. 1950 ರಿಂದ ಪ್ರಸ್ತುತದವರೆಗೆ ನಡೆದಿರುವ ಅಧಿಕೃತ ಚುನಾವಣಾ ಅಕ್ರಮಗಳು ಇದಕ್ಕೆ ಕೈಗನ್ನಡಿಯಾಗಿವೆ.ವಿಶ್ವದ ಅತಿದೊಡ್ಡ ಮತದಾರರ ಸಂಖ್ಯೆ ಹೊಂದಿರುವ ಭಾರತದ ಮತದಾರರಲ್ಲಿ (78 ಕೋಟಿ, 2011 ರ ಜನಗಣತಿಯ ಆಧಾರ) ಶೇ 60 ರಷ್ಟು ಪ್ರಜ್ಞಾವಂತಿಕೆ ಇಲ್ಲದವರು ಹಾಗೂ ಶೇ 20 ರಷ್ಟು ಮಂದಿ ನಿರ್ಲಕ್ಷ್ಯ ಮನೋಭಾವನೆ ಹೊಂದಿದವರು.  ಜಗತ್ತಿನಲ್ಲೆೀ ಅತ್ಯಂತ ಕಡಿಮೆ ಪ್ರಜಾ ಪಾಲ್ಗೊಳ್ಳುವಿಕೆ ಹೊಂದಿರುವ ರಾಷ್ಟ್ರ ಭಾರತ. ಪಾಕಿಸ್ತಾನದಂತಹ ಅಸ್ಥಿರ ರಾಷ್ಟ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಪದವಿ ಕಡ್ಡಾಯ, ಆದರೆ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಶೈಕ್ಷಣಿಕ ಅರ್ಹತೆ  ನಿಗದಿ ಮಾಡದಿರುವುದು ಬಹುದೊಡ್ಡ ನ್ಯೂನತೆ.ರಾಜಕೀಯ ಜ್ಞಾನವಿಲ್ಲದ ಪ್ರಜೆಗಳ ಅಸ್ತಿತ್ವ ಪ್ರಜಾಪ್ರಭುತ್ವದ ಆಯಾಮಗಳು ಕ್ಷೀಣಿಸಲು ಕಾರಣೀಭೂತವಾಗಿದೆ. ಭಾರತದಲ್ಲಿ ರಾಷ್ಟಪತಿ ಚುನಾವಣೆಯಿಂದ ಕೌನ್ಸಿಲರ್ ಚುನಾವಣೆಯವರೆಗೂ, ಸಾಂವಿಧಾನಿಕ ಮಿತಿಗಳಿವೆ. ಜೊತೆಗೆ ಸಾಕಷ್ಟು ಬಾರಿ ದುರುಪಯೋಗವಾದ ಉದಾಹರಣೆಗಳಿವೆ. ನಾವು ಐರ್ಲೆಂಡ್ ರಾಷ್ಟ್ರಾಧ್ಯಕ್ಷರ ಚುನಾವಣಾ ಮಾದರಿ ಅನುಸರಿಸುತ್ತಿದ್ದೇವೆ. ಬದಲಿಗೆ ಅಮೆರಿಕಾ ಮಾದರಿಯ ಚುನಾವಣೆ ಅನುಸರಿಸುವುದು ಸೂಕ್ತ.ಭಾರತದಲ್ಲಿ ದಾಖಲೆಗಳ ಪ್ರಕಾರ ಶೇ 74.06 ಸಾಕ್ಷರತೆ ಇದೆ. ಆದರೆ ವಾಸ್ತವವಾಗಿ ಅಂಕಿ ಅಂಶದಡಿಯಲ್ಲಿಯೇ ಬರುವವರೆಲ್ಲರೂ ರಾಜಕೀಯ ಮೌಲ್ಯಗಳನ್ನು ಪರಾಮರ್ಶಿಸಿ ಮತ ನೀಡುವಷ್ಟು ಸಮರ್ಥರಲ್ಲ ಎಂಬುದು ಸತ್ಯ ಸಂಗತಿ. ಇತ್ತೀಚಿನ ಚುನಾವಣೆಗಳಲ್ಲಿ ಚುನಾವಣಾ ಆಯೋಗ ಏನೆಲ್ಲಾ ಕಠಿಣ ಕ್ರಮಗಳನ್ನು ತೆಗೆದುಕೊಂಡರೂ ಅಕ್ರಮಗಳು ನಡೆಯುತ್ತಲೇ ಇವೆ.ಇದಕ್ಕೆ ಕೇವಲ ಜನಪ್ರತಿನಿಧಿಗಳು ಕಾರಣವಲ್ಲ. ಬದಲಿಗೆ ಅಕ್ರಮವನ್ನು ಸ್ವೀಕಾರಗೊಳಿಸುವ ಭ್ರಷ್ಟಾಚಾರವನ್ನು ಮಾನ್ಯಮಾಡುವ ಮನೋಭಾವನೆ ಜನರಲ್ಲಿರುವುದು ದುರದೃಷ್ಟಕರ. ಜನಸೇವೆಗೆಂದು ಆಯ್ಕೆಯಾದ ಜನಪ್ರತಿನಿಧಿಗಳು ರಸ್ತೆಯಲ್ಲಿ ಪಿಸ್ತೂಲ್  ತೋರಿಸುತ್ತಾರೆ. ರೈತರ ಬಗ್ಗೆ ಅಸಡ್ಡೆಯ  ನುಡಿಗಳನ್ನಾಡುತ್ತಾರೆ. ಅತ್ಯಾಚಾರದಂತಹ ಗುರುತರ ಆರೋಪಗಳಿಗೆ ಭಾಜನರಾಗುತ್ತಾರೆ. ಸಾಂವಿಧಾನಿಕ ಸಂಸ್ಥೆಗಳ (ಆಡಿಟರ್ ಅಂಡ್ ಕಂಟ್ರೋಲರ್ ಜನರಲ್-148), ಚುನಾವಣಾ ಆಯೋಗದ ಔಚಿತ್ಯವನ್ನು ಪ್ರಶ್ನೆ ಮಾಡುತ್ತಾರೆ.ಬೊಫೋರ್ಸ್ ಹಗರಣ ಮರೆತ ಜನ, ಕಲ್ಲಿದ್ದಲು ಹಗರಣವನ್ನು ಮರೆಯುತ್ತಾರೆ ಎಂಬ ಉಡಾಫೆ ಹೇಳಿಕೆ ನೀಡುವಾಗಲು ಅವರನ್ನೇ ಪ್ರಶ್ನಿಸದ, ಅವರನ್ನು ಧಿಕ್ಕರಿಸದ ಜನರಿರುವಾಗ, ಭಾರತದ ರಾಜಕೀಯ ವ್ಯವಸ್ಥೆಯ ಸಕ್ರಮ ಸ್ಥಿರತೆ ನಿರೀಕ್ಷಿಸುವುದಾದರು ಹೇಗೆ? ಭಾರತದ ರಾಜಕೀಯ ವ್ಯವಸ್ಥೆ ಪ್ರಜೆಗಳಿಗೆ ಪೂರಕವಾಗಿ ಸಂರಚಿತವಾಗಬೇಕಾದರೆ ಚುನಾವಣಾ ಆಯೋಗದ ಸ್ವಾತಂತ್ರ್ಯ 324(5) ನೇ ವಿಧಿಗೆ ತಿದ್ದುಪಡಿಯಾಗಬೇಕು. ಮುಖ್ಯ ಆಯುಕ್ತರ ನೇಮಕಕ್ಕೆ ಸೇವಾ ಹಿರಿತನವನ್ನು ಮಾನದಂಡವನ್ನಾಗಿಸಬೇಕು.ಪಕ್ಷಾಂತರ ನಿಷೇಧ ಕಾಯಿದೆಯ 101, 102/2 ಮತ್ತು 190,191/2 ವಿಧಿಗಳಿಗೆ ಕಠಿಣ ಮಾದರಿಯ ತಿದ್ದುಪಡಿಯಾಗಬೇಕು. ಜನಪ್ರತಿನಿಧಿತ್ವದ ಅವಧಿ 5 ವರ್ಷವನ್ನು ಕಡ್ಡಾಯಗೊಳಿಸಬೇಕು. ಒಂದು ವೇಳೆ ಅದಕ್ಕೂ ಮುನ್ನ ರಾಜಿನಾಮೆ ನೀಡಿದರೆ ಉಪಚುನಾವಣೆಗೆ ಬೇರೆ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನಿರ್ಬಂಧಿಸಬೇಕು. 2008-2013ರ ಅವಧಿಯಲ್ಲಿ 32 ಉಪಚುನಾವಣೆಗಳು ನಡೆದಿವೆ (192 ಕೋಟಿ ಅನಗತ್ಯ ವೆಚ್ಚ). ಪ್ರಸ್ತುತ ಯಾವುದೇ ಅಪರಾಧಕ್ಕಾಗಿ ಶಿಕ್ಷೆ ಅನುಭವಿಸಿದವರಿಗೆ ಮೂರು ವರ್ಷಗಳ ಕಾಲ ಚುನಾವಣಾ ನಿರ್ಬಂಧ ಹೇರಲಾಗಿದೆ. ಆದರೆ ಆರೋಪದ ಅವಧಿಯಲ್ಲಿಯೂ ಆತನಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನಿರ್ಬಂಧಿಸಬೇಕು.ಬಹಳ ಮುಖ್ಯವಾಗಿ ಸ್ವಿಟ್ಜರ್‌ಲೆಂಡ್ ಮಾದರಿಯ `ರೀ ಕಾಲಿಂಗ್ ಸಿಸ್ಟಮ್' ಅಳವಡಿಕೆ  ಹಾಗೂ `ನೆಗೆಟಿವ್ ವೋಟಿಂಗ್ ಸಿಸ್ಟಮ್' ಗೆ ಅವಕಾಶ ಕಲ್ಪಿಸಬೇಕು. ಎಲ್ಲಾ ಕೆಳಸ್ತರದ ನಿರ್ಲಕ್ಷ್ಯಕ್ಕೆ ಒಳಗಾದ ವರ್ಗಗಳು ಚುನಾವಣೆಯಲ್ಲಿ ಪ್ರತಿನಿಧಿಸಬೇಕು. (ಬಳ್ಳಾರಿಯಲ್ಲಿ  ಮಂಗಳ ಮುಖಿ ವಿಜಯ ಚನ್ನಗಿರಿಯ ಅಲೆಮಾರಿ ಗೋಸಂಗಿ ಜನಾಂಗದ ಮಮತ. ಆರ್.ಸ್ಪರ್ಧೆ).ಭಾರತಕ್ಕೆ ಅಮೆರಿಕ, ಬ್ರಿಟನ್ ಮಾದರಿಯ  ದ್ವಿಪಕ್ಷ ಪದ್ದತಿ ಸೂಕ್ತ. (ಪ್ರಾದೇಶಿಕ ಪಕ್ಷಗಳ ಅನಗತ್ಯ ಸಂರಚನೆ ತಮಿಳುನಾಡು, ಉತ್ತರ ಪ್ರದೇಶ, ಆಂಧ್ರ) ಒಟ್ಟಿನಲ್ಲಿ ಎಲ್ಲಿಯವರೆಗೆ ಆಳಿಸಿಕೊಳ್ಳುವವರ ಮನೋಪ್ರವೃತ್ತಿ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಆಳುವವರ ಮನಸ್ಥಿತಿ ಬದಲಾಗಲು ಸಾಧ್ಯವಿಲ್ಲ . 

                                                                

 

 

ಪ್ರತಿಕ್ರಿಯಿಸಿ (+)