ಗುರುವಾರ , ಮೇ 6, 2021
33 °C

ಪ್ರಜು ಹೊಸ ರುಜು!

-ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ದಿನಾಲ್ಕನೇ ವರ್ಷಕ್ಕೇ ರೂಪದರ್ಶಿಯಾಗಿ ಕ್ಯಾಮೆರಾ ಬೆಳಕಿಗೆ ಮುಖವೊಡ್ಡಿದ ಕೊಡಗಿನ ಬೆಡಗಿ ಈಗ ಚಂದನವನದಲ್ಲಿ ವಿಹರಿಸುತ್ತಿದ್ದಾರೆ. ಹೊಸ ದಾರಿಯ ಪಯಣ ಅವರಲ್ಲಿ ಹೊಸ ಕನಸುಗಳಿಗೆ ಬಣ್ಣ ಕೊಡುತ್ತಿದೆ. ಇಲ್ಲಿಯೇ ಮನೆ ಮಾಡಿ ನೆಲೆಸುವ ಆಸೆ ಅವರದು. ಆ ಕನಸಿಗೆ ರೆಕ್ಕೆ ಪುಕ್ಕ ಮೂಡುವಂತೆ ಅವಕಾಶಗಳು ಅವರ ಮುಂದೆ ಸಾಲುಗಟ್ಟತೊಡಗಿವೆ.ಅಣಜಿ ನಾಗರಾಜ್ ನಿರ್ಮಾಣದ ಚಿತ್ರದ ಮೂಲಕ ಬೆಳ್ಳಿಪರದೆಗೆ ಪದಾರ್ಪಣೆ ಮಾಡುವ ಅದೃಷ್ಟ ಪ್ರಜು ಪೂವಯ್ಯ ಅವರದ್ದು. ಅದರ ಬೆನ್ನಹಿಂದೆಯೇ ಮತ್ತೊಂದು ಚಿತ್ರದ ನಾಯಕಿ ಪಟ್ಟವೂ ಅವರಿಗೆ ಒಲಿದಿದೆ. ಮೂಲತಃ ಕೊಡಗಿನವರಾದರೂ ಬೆಳೆದದ್ದು ಮಂಗಳೂರಿನಲ್ಲಿ. ತಂದೆ ಸೇನೆಯಲ್ಲಿ ಅಧಿಕಾರಿಯಾಗಿದ್ದವರು.

ಆಟ-ಪಾಠ ಎಲ್ಲದಕ್ಕೂ ಮಂಗಳೂರು ತವರು. ಸಂಖ್ಯಾಶಾಸ್ತ್ರದ ಬೆನ್ನುಹತ್ತಿ ಮಾನ್ಶ್ ಪೂವಯ್ಯ ಎಂದು ಹೆಸರು ಬದಲಿಸಿಕೊಂಡಿದ್ದರೂ, ಆ ಹೆಸರು ರುಚಿಸದೆ ತಮ್ಮ ಮೂಲ ಹೆಸರಿಗೇ ಪ್ರಜು ಮರಳಿದ್ದಾರೆ. ಜಾಹೀರಾತು ಲೋಕಕ್ಕೆ ಕಾಲಿಟ್ಟದ್ದು ಏಳನೇ ತರಗತಿಯಲ್ಲಿದ್ದಾಗ. ಶಾಲಾ ಕಾರ್ಯಕ್ರಮವೊಂದರಲ್ಲಿ ಪ್ರಜು ಅವರನ್ನು ಕಂಡ ಸ್ಥಳೀಯ ಟೀವಿ ಚಾನೆಲ್‌ನ ಸಿಬ್ಬಂದಿಯೊಬ್ಬರು ಮಾಡೆಲಿಂಗ್ ಜಗತ್ತನ್ನು ಪರಿಚಯಿಸಿದರು.

ಅಲ್ಲಿಂದ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಬಾಲ್ಯದಲ್ಲಿಯೇ ಭರತನಾಟ್ಯದ ಕಲಿಕೆಯಲ್ಲಿ ಆಸಕ್ತಿ ವಹಿಸಿದ್ದ ಅವರು, ಮೂರು ವರ್ಷ ಪಾಶ್ಚಿಮಾತ್ಯ ನೃತ್ಯ ಶೈಲಿಯನ್ನೂ ಕರಗತ ಮಾಡಿಕೊಂಡಿದ್ದಾರೆ. ಹಾಕಿ ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ತಂಡವನ್ನು ಪ್ರತಿನಿಧಿಸಿದ ಹೆಮ್ಮೆಯೂ ಅವರದು.ಚಿತ್ರರಂಗಕ್ಕೆ ಕಾಲಿಟ್ಟದ್ದು ಆಕಸ್ಮಿಕ. ಸಿನಿಮಾ ಸೆಳೆತ ಇರದಿದ್ದರೂ ತಾನಾಗಿಯೇ ಬಂದ ಅವಕಾಶವನ್ನು ಬೇಡವೆನ್ನಲಿಲ್ಲ.

ಪ್ರಜು ಫೋಟೊ ನೋಡಿದ್ದ ಅಣಜಿ ನಾಗರಾಜ್ ತಮ್ಮ ನಿರ್ಮಾಣದ, ರಾಕೇಶ್ ನಾಯಕರಾಗಿರುವ `ಕಿತ್ತೋದ್ ಲವ್ ಸ್ಟೋರಿ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಮಾಡಿದರು. ಒಂದು ಹಂತದ ಚಿತ್ರೀಕರಣ ಮುಗಿಸಿರುವ ಈ ಚಿತ್ರತಂಡ ಎರಡನೇ ಹಂತಕ್ಕೆ ಸಿದ್ಧತೆ ನಡೆಸಿದೆ. ಇಬ್ಬರು ಸ್ನೇಹಿತರ ನಡುವೆ ಹುಟ್ಟಿಕೊಳ್ಳುವ ಪ್ರೀತಿಯ ಕಥೆಯಿದು.

ತಂದೆ ತಾಯಿಯಿಲ್ಲದೆ, ಅಜ್ಜಿಯ ಆಶ್ರಯದಲ್ಲಿ ಬೆಳೆವ ಮುಗ್ಧ ಹುಡುಗಿಯಾಗಿ ಪ್ರಜು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ತಮಿಳಿನ ಯಶಸ್ವಿ ಚಿತ್ರ `ಏಪ್ರಿಲ್ ಮದತ್ತಿಲ್'ನ ಕನ್ನಡ ಅವತರಣಿಕೆ `ಆದರ್ಶ'ದಲ್ಲಿ ಪ್ರಜು, ನಟ ನಾಗ್‌ಕಿರಣ್‌ಗೆ ನಾಯಕಿ. ತಾಯಿ ಪ್ರೀತಿಯಿಲ್ಲದೆ, ಶ್ರೀಮಂತ ತಂದೆಯ ನೆರಳಲ್ಲಿ ಒಂಟಿಯಾಗಿ ಬೆಳೆಯುವ ಮೃದು ಸ್ವಭಾವದ ಮಗಳ ಪಾತ್ರ ಅವರದು.ಮೂರನೇ ಸೆಮಿಸ್ಟರ್ ಎಂಜಿನಿಯರಿಂಗ್ ಓದುತ್ತಿರುವಾಗ ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳಬಾರದೆಂದು ಪ್ರಜು ಓದಿಗೆ ತಿಲಾಂಜಲಿಯಿಟ್ಟು ಚಿತ್ರರಂಗದತ್ತ ಮುಖಮಾಡಿದರು. ಕಡಲ ತೀರದಲ್ಲಿ ಸಿನಿಮಾ ಸಂಸ್ಕೃತಿ ಪ್ರಭಾವ ಕಡಿಮೆ ಎಂಬ ಕಾರಣಕ್ಕೆ ಈಗ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಮಾಡೆಲಿಂಗ್‌ಗೆ ಅನುಕೂಲವಾಗಲಿ ಎಂದು ಮುಂಬೈನ ಸುಭಾಷ್‌ಘಾಯ್ ಸಂಸ್ಥೆಯಲ್ಲಿ ಕೆಲ ತಿಂಗಳು ಅಭಿನಯ ಕಲಿತದ್ದು ಸಿನಿಮಾಕ್ಕೂ ನೆರವಾಗಿದೆ.

ಅಲ್ಲಿ ಶಾರೂಕ್ ಖಾನ್, ಬಿಪಾಶಾ ಬಸು, ಪ್ರಿಯಾಂಕ ಚೋಪ್ರಾ ಅಂಥವರಿಂದ ಸಲಹೆ ಪಡೆಯುವ ಅವಕಾಶ ಅವರಿಗೆ ದೊರೆತಿತ್ತಂತೆ.ಎರಡು ಸಿನಿಮಾಗಳು ಕೈಯಲ್ಲಿದ್ದಾಗಲೇ ಹಲವು ಅವಕಾಶಗಳು ಕದ ತಟ್ಟಿದ್ದಿದೆ. ತಮ್ಮ ಪಾತ್ರ ಮತ್ತು ಕಥೆ ಎರಡೂ ಮನಸ್ಸಿಗೆ ಹಿಡಿಸಬೇಕು ಎಂಬ ನೀತಿ ಪ್ರಜು ಅವರದು. ಹಿಡಿಸದ ಸಿನಿಮಾಗಳನ್ನು ತಿರಸ್ಕರಿಸಿದ್ದಾರೆ. ಎಲ್ಲಾ ಖ್ಯಾತನಾಮ ನಟರೊಟ್ಟಿಗೆ ತೆರೆಹಂಚಿಕೊಳ್ಳುವ ಬಯಕೆ ಅವರದಲ್ಲಿದೆ.

ಪ್ರತಿಭೆಗೆ ಸವಾಲೊಡ್ಡುವ ಪಾತ್ರಗಳಿಗೆ ಅವರ ಆದ್ಯತೆ. ಕಥೆಗೆ ಪೂರಕವಾದ ಗ್ಲಾಮರಸ್ ಪಾತ್ರಗಳಿಗೆ ಅವರಲ್ಲಿ ಅಭ್ಯಂತರವಿಲ್ಲ. ಆದರೆ ಅನಗತ್ಯ ಮತ್ತು ಅತಿಯಾದ ಗ್ಲಾಮರ್‌ಗೆ ಪ್ರಜು ಒಲ್ಲೆ ಎನ್ನುತ್ತಾರೆ.     

 -ಅಮಿತ್ ಎಂ.ಎಸ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.