ಮಂಗಳವಾರ, ನವೆಂಬರ್ 12, 2019
19 °C

`ಪ್ರಜ್ಞಾವಂತ' ಮತದಾರ...

Published:
Updated:
`ಪ್ರಜ್ಞಾವಂತ' ಮತದಾರ...

ಪ್ರಭ್ಯಾ ಇಲ್ಲೇ ಸಿಕ್ತಾನ ಅನ್ನೊ ಗ್ಯಾರಂಟಿ ಮ್ಯಾಗ್ ಗಡಂಗು ಹೊಕ್ಕೆ. `ಜೇನಿನ ಹೊಳೆಯೊ  ಹಾಲಿನ ಹೊಳೆಯೊ, ಸು... ಎಂದು ಹಾಡು ಗುನುಗುನಿಸುತ್ತ ಮೂಲೆಯಲ್ಲಿ ಮದಿರೆ ಗುಟುಕರಿಸುತ್ತಿದ್ದವನ ಹಾಡಿಗೆ ಅರ್ಧಕ್ಕೆ ಕಲ್ಲು ಹಾಕಿ, ... `ಸುರೆಯೊ ಕನ್ನಡ ಸವಿ ನುಡಿಯೊ...' ಎಂದು ಪೂರ್ಣ ಮಾಡುತ್ತಲೇ ಅವನ ಎದುರಿನ ಕುರ್ಚಿಯಲ್ಲಿ ಕುಕ್ಕರುಬಡಿದೆ.`ಏನಪಾ, ಎಷ್ಟ್ ಪೆಗ್ ಹಾಕಿ, ಯಾವ್ ಯಾವ್ ಬ್ರಾಂಡ್‌ನ ಬ್ರ್ಯಾಂಡಿ ಕುಡಿದಿ' ಎಂದು ಪೀಠಿಕೆ ಹಾಕಿದೆ.`ಇದು ನೋಡಪಾ ದಳ ದಳ ಉದುರ್ತಾ ಇರೋ ಪಕ್ಷದ್ದು, ಇದು ಎರಡು ಹೋಳಾಗಿರುವ ಟೆಂಗಿನಕಾಯಿ, ಇದು ಅಂಗೈ ತೋರಿಸಿ ಅವಲಕ್ಷಣಾ ಮಾಡಿಕೊಳ್ತಾ ಇರೊ ಹಸ್ತದ್ದು, ಇದು ಆಳದ ಗಣಿಯಿಂದ ತೆಗೆದ ಅಪ್ಪಟ ಕದ್ದ ಮಾಲು, ಇದು ಜಾತ್ಯತೀತ ಬ್ರಾಂಡ್ ಎಂದು ಐದಾರು ಬಾಟಲಿ ತೋರಿಸಿದ.`ಅಲ್ಲೊ  ಮಾರಾಯಾ, ಒಂದ್ ಬ್ರಾಂಡ್‌ನ ಕುಡಿಯೋದು ಬಿಟ್ಟು ಹಿಂಗ್ ಸಿಕ್ಕ ಸಿಕ್ಕ ಕುತ್ತಾಛಾಪ್‌ನ `ಎಣ್ಣೆ' ಕುಡಿದ್ರ ನಿನ್ನ ಆರೋಗ್ಯದ ಗತಿ ಏನಪಾ' ಎಂದೆ.ನನ್ನ ಆರೋಗ್ಯದ ಚಿಂತಿ ಬಿಡಪಾ.  ಹಿಂಗ್ ಮದಿರಾ ದೇವಿ ಆರಾಧನೆ  ದಿನಾ ಸಿಕ್ತದೇನ್. ಯಾರ್ ಮನಸ್ಸನ್ನೂ ನೋಯಿಸದ ಹೆಂಗರುಳು ನಂದು. ಹಿಂಗಾಗಿ ಯಾರ್ ಕೊಟ್ರೂ ಬ್ಯಾಡ ಅನ್ನೋದಿಲ್ಲ. ನಮ್ಮಂತವರ ಪಾಲಿಗೆ ಎಲ್ರೂ  ಸಮಾನರು ನೋಡಪಾ' ಎಂದ.

`ಆಯ್ತಪ್ಪ, ಇಷ್ಟು ಬಗೆಯ  ಬ್ರ್ಯಾಂಡಿ ಕುಡಿದು ನೀ ಯಾರಿಗೆ ವೋಟ್ ಹಾಕಾಂವ' ಎಂದು ಪ್ರಶ್ನಿಸಿದೆ.`ಪರಮಾತ್ಮ ಆಡಿಸಿದ್ಹಂಗ ಆಡುವೆ ನಾನು' ಎಂದು ಹಾಡಿನ್ಯಾಗ ಉತ್ರಾ ಕೊಟ್ಟ. `ಅದೆಲ್ಲಾ ಅವತ್ ನಾನು ಎಷ್ಟ್ ಟೈಟ್ ಆಗಿರ‌್ತೀನೊ ಅದರ್ ಮ್ಯಾಲ್ ಎಲ್ಲಾ ನಿರ್ಧಾರಾಗೋದು ನೋಡಪ. ಒಟ್ಟನ್ಯಾಗ್ ಒಂದು ಗುಂಡಿ ಒತ್ತೋದು ಅಷ್ಟ ಹೌದಲ್ಲ. ಯಾರಿಗರ ಬೀಳಲಿ. ನನಗೇನು' ಎಂದು ವೇದಾಂತಿಯಂತೆ ನುಡಿದ.`ಮೈಮ್ಯಾಗ ಸ್ವಲ್ಪು ಖಬರು ಇಟ್ಕೊಂಡು  ವೋಟ್ ಮಾಡಬೇಕೊ' ಎಂದು ಬುದ್ಧಿ ಮಾತು ಹೇಳಿದೆ.`ಖಬರು, ಯಾರಿಗೆ? ಎಣ್ಣೆ ಹಂಚೋರಿಗೆ ಇಲ್ಲದ ಖಬರು ನನಗ್ಯಾಕೊ. ಯಾರರ ಗೆದ್ದ ಬರ್ಲಿ. ನಂಗೇನ್ ಆಗಬೇಕಾಗೈತಿ'

ಇವುಗಳ ವಿಶೇಷತೆಗಳೇನ್‌ಪಾ  ಎಂದು ಬಾಟ್ಲಿಗಳತ್ತ ಬೊಟ್ಟು ಮಾಡಿ ಕೇಳಿ ವಿಷಯಾಂತರ ಮಾಡಿದೆ.`ನೋಡಪಾ, ಈ ಬ್ರಾಂಡ್ ಕುಡುದ್ರ ಕೈ ಕಾಲುಗಳೆಲ್ಲ ಬ್ಯಾರೆ ಆದಂಗ   ಭಾಸಆಗ್ತದ. ಇದನ್ನು ಕುಡಿದ್ರೆ ಮೈಯೆಲ್ಲ ಬಂಡಾಯದ ಭಾವ ಮೂಡ್ತದ. ಇದರಲ್ಲಿ ಬರೀ ಮಣ್ಣಿನ ವಾಸನೆ. ಇದ್ರಲ್ಲಂತೂ ಗೋವಾ ಫೆನ್ನಿಯಂತೆ ಗಣಿ ದುರ್ವಾಸನೆ ಮೂಗಿಗೆ ಬಡೀತದ. ಇದರಾಗ ತೆಂಗಿನೆಣ್ಣೆ  ವಾಸನೆ ಅದ ನೋಡಪ..' ಎಂದು ಬಣ್ಣಿಸಿದ.`ಇದ್ಕ ಏನರ್ ಪರಿಹಾರ ಹುಡುಕಬೇಕಲ್ಲೋ' ಎಂದೇ.`ಎದ್ಕ' ಎಂದು ತುಟಿ ಸೊಟ್ಟ ಮಾಡ್ದ. `ಅದೇನಪಾ, ಕುಡುಕರಲ್ಲೂ ಮತದಾನದ ಅರಿವು ಮೂಡಿಸುವ ಕೆಲ್ಸ ಯಾರರ ಮಾಡಬೇಕಲ್ಲ' ಎಂದು ಸ್ವಗತಕ್ಕೆ ನುಡಿದೆ.

`ಪರಮಾತ್ಮ'ನ ಪ್ರವೇಶವಾಗಿದ್ದರೂ ಪ್ರಭ್ಯಾನ ಕಿವಿ ಚುರುಕಾಗಿಯೇ ಇದ್ದವು.`ಹಾಲಿನ ಪಾಕೀಟ್ ಮ್ಯಾಲ್ ಮತದಾರ ಜಾಗೃತಿ ಸಂದೇಶ ಪ್ರಿಂಟ್ ಮಾಡಿದ್ಹಾಂಗ್, ಅಲ್ಕೊಹಾಲಿನ ಬಾಟ್ಲಿ ಮ್ಯಾಗೂ ಪ್ರಿಂಟ್ ಹಾಕಾಕ್ ಏನ್ ಧಾಡಿ ಇವ್ರಿಗೆ' ಎಂದ.ಜಾಗೃತ ಮತದಾರನಂತೆ, ಕುಡುಕರ `ಪರಮಾತ್ಮ'ನೂ ಸಾಕಷ್ಟು ಜಾಗೃತ ಆಗಿರುವಂತೆ ಭಾಸವಾಯಿತು.ನಿಶೆದಾಗಿದ್ರು ಇವ್ನ ಆರನೇ ಇಂದ್ರಿಯ ಜಾಗೃತ ಇರೋದು ನೋಡಿ ಅಚ್ಚರಿಯಾದ್ರು ತೋರಿಸಿಕೊಳ್ದ, `ಖರೆ ನೋಡು. ನಿನ್ನ ಮಾತ್ನಾಗೂ ಸಾಕಷ್ಟು ``ದಂ'' ಐತಿ' ಬಿಡು ಎಂದೆ.`ಕೊನೆಗೂ ನನ್ನಲ್ಲೂ ಅಷ್ಟಿಷ್ಟು `ದಂ' ಐತಿ ಅಂತ ಒಪ್ಕೊಂಡ್ಯಲ್ಲ ಸಾಕು ಬಿಡು..`ಕುಡಿದು ಮತದಾನ ಮಾಡಬೇಡಿ...

ಕುಡಿದು ಬಂದು ಮತ ಕುಲಗೆಡಿಸಬೇಡಿ...

ಮತದಾನಕ್ಕೆ 12 ಗಂಟೆ ಮುಂಚೆಯೇ ಕುಡಿತಕ್ಕೆ ಕಡಿವಾಣ ಹಾಕಿ...ಅನ್ನೊ ಸಂದೇಶಾನ್ನ ಹೆಂಡ, ಸಾರಾಯಿ ಪ್ಯಾಕೆಟ್, ಬ್ರ್ಯಾಂಡಿ, ರಮ್ ಬಾಟ್ಲಿ ಮ್ಯಾಲ್  ಪ್ರಿಂಟ್ ಹಾಕಿದ್ರ ಕುಡುಕ ಮತದಾರರಲ್ಲೂ ಖಂಡಿತವಾಗ್ಲೂ ಅಷ್ಟಿಷ್ಟು ಜಾಗೃತಿ ಮೂಡ್ತದ ನೋಡಪಾ' ಅಂದ.ಕುಡುಕರಲ್ಲೂ ಒಂದಿಷ್ಟು ಜಾಗೃತಿ ಮೂಡಿಸುವ ಸಲಹೆ ಜಾರಿಯ ಸಾಧ್ಯಾ ಸಾಧ್ಯತೆ ಚಿಂತಿಸುತ್ತಲೇ, ಕುಡುಕನ ನಿಶೆದಾಗಿನ ಮಾತನ್ನ ಕಿಸೆದಾಗ್ ಇಟ್ಕೊಂಡು ಚುನಾವಣಾ ಆಯೋಗದ ಕಚೇರಿ ಕಡೆ ಜೋಲಿ ತಪ್ಪದಂತೆ ಹೆಜ್ಜೆ ಹಾಕಿದೆ.

 

ಪ್ರತಿಕ್ರಿಯಿಸಿ (+)