ಪ್ರಜ್ವಲಿಸಿದ ಪಿಟೀಲು

7

ಪ್ರಜ್ವಲಿಸಿದ ಪಿಟೀಲು

Published:
Updated:

‘ಪಿಟೀಲು’ ಒಂದು ಪಕ್ಕವಾದ್ಯವಾಗೂ. ‘ತನಿ’ ವಾದ್ಯವಾಗೂ ಭಾರತೀಯ ಅದರಲ್ಲೂ ವಿಶೇಷವಾಗಿ ಕರ್ನಾಟಕ ಸಂಗೀತದಲ್ಲಿ ಬಳಕೆಯಲ್ಲಿದೆ. ‘ತತ’ (ತಂತಿ) ವಾದ್ಯಗಳಲ್ಲಿ ಕಮಾನಿನಿಂದ ನುಡಿಸುವ, ಮೆಟ್ಟಲು ಇಲ್ಲದ ವಾದ್ಯಗಳ ಗುಂಪಿಗೆ ಸೇರುತ್ತದೆ.ಪಾಶ್ಚಾತ್ಯರಿಂದ ತಯಾರಾದ ಪಿಟೀಲು ವಾದ್ಯವನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿದ ಕೀರ್ತಿ ಬಾಲಸ್ವಾಮಿ ದೀಕ್ಷಿತರಿಗೆ ಸಲ್ಲಬೇಕು. ತಿರುಮಕೂಡಲು ಹಾಗೂ ಶ್ರೀರಂಗಪಟ್ಟಣಗಳಲ್ಲಿರುವ ಐತಿಹ್ಯಗಳು ನಮ್ಮಲ್ಲಿನ ಪಿಟೀಲಿನ ಪ್ರಾಚೀನತೆಯನ್ನು ಸಾರುತ್ತಿವೆ. ರಾವಣಹಸ್ತ, ಧನುರ್ವೀಣೆ ಎಂದೂ ಕರೆಯಲ್ಪಡುತ್ತಿದ್ದ ಪಿಟೀಲು, ಕರ್ನಾಟಕ ಸಂಗೀತದ ಇಂದಿನ ಬಹು ಜನಪ್ರಿಯ ಪಕ್ಕವಾದ್ಯವೂ ಹೌದು. ಪಿಟೀಲಿನ ಕುಟುಂಬಕ್ಕೆ ಸೇರಿದ ಅನೇಕ ವಾದ್ಯಗಳು ಶಾಸ್ತ್ರೀಯವಲ್ಲದೆ ಜಾನಪದ ಸಂಗೀತಗಳಲ್ಲೂ ಬೆಳಗುತ್ತಿವೆ.ಪಾಶ್ಚಾತ್ಯ ಸಂಗೀತದಲ್ಲಿ ಪಿಟೀಲು ಬಹು ಗಣ್ಯ ವಾದ್ಯ. ತನಿಯಾಗೂ ವಾದ್ಯಗೋಷ್ಠಿಯಲ್ಲೂ ಜನಪ್ರಿಯ. ಆಂಟೊನಿಯಸ್ ಸ್ಟ್ರಾಡಿವೇರಿಯಸ್ ಬಹು ಪ್ರಸಿದ್ಧ ಪಿಟೀಲು ತಯಾರಕ. ಅವನು ತಯಾರಿಸಿದ ಮಾದರಿಯಲ್ಲೇ ಇಂದು ಪಿಟೀಲು ತಯಾರಾಗುತ್ತಿರುವುದು!ಈಚೆಗೆ ಬೆಂಗಳೂರಲ್ಲಿ ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಪ್ರಾಯೋಜಕತ್ವದಲ್ಲಿ ಲಕ್ಷ್ಮೀನಾರಾಯಣ ಪ್ರತಿಷ್ಠಾನ ಆಯೋಜಿಸಿದ್ದ ‘ಶಾಂತಿಗಾಗಿ ಪಿಟೀಲು’ ಸಂಗೀತೋತ್ಸವದಲ್ಲಿ ಭಿನ್ನ ದೇಶಗಳ, ಬಹು ಬಗೆಯ ಪಿಟೀಲಿನ ಪರಿಚಯವಾಯಿತು. ಅಮೇರಿಕ, ರಷ್ಯ, ಅಲ್ಜೀರಿಯ, ನಾರ್ವೆ ಹಾಗೂ ಭಾರತದ ಕಲಾವಿದರು ಪಿಟೀಲು ಪ್ರಖರವಾಗಿ ಪ್ರಜ್ವಲಿಸುವಂತೆ ಮಾಡಿದರು. ಭಿನ್ನ ಬಗೆಯ ಕಮಾನು, ಪ್ರಗಲ್ಪ ನಾದ, ವೈವಿಧ್ಯಮಯ ರಚನೆಗಳು, ಹತ್ತು ರುಚಿ, ಹಲವು ಬಣ್ಣ!‘ಪಿಟೀಲು ವೈಭವ’ಕ್ಕೆ ನಾಂದಿ ಹಾಕಿದ ಆಲ್ಜೀರಿಯಾದ ಖೇರ್ ಎಡಿಸಿ ಪಿಟೀಲನ್ನು ಊರ್ಧ್ವಮುಖವಾಗಿ ನಿಲ್ಲಿಸಿಕೊಂಡು ನುಡಿಸಿದರು. ತಮ್ಮ ದೇಶದ ಸಾಂಪ್ರದಾಯಿಕ ರಚನೆಯಲ್ಲಿ ರಾಗಮಾಲಿಕೆಯಂಥ ಭಾವವನ್ನು ಹೊಮ್ಮಿಸಿದರು. ಕಷ್ಟ ಸಂಗತಿಗಳನ್ನೂ ಸುಲಲಿತವಾಗಿ ನುಡಿಸಿ, ನಾಂದಿ ಹಾಕಿದರು.ನಾರ್ವೆ ದೇಶದ ಬೆನೆಡಿಕ್ಟ್ ಮೌರ್ಸೆಟ್ ಅವರದು ಹಾರ್ಡೆಂಗರ್ ಫಿಡಲಿನಲ್ಲಿ ವಿಶೇಷ ಸಾಧನೆ. ರಂಗ ಸಂಗೀತದಲ್ಲೂ ನಿಷ್ಣಾತೆ. ಆಕೆಯ ಫಿಡಲಿನಲ್ಲಿ ಸಾಂಪ್ರದಾಯಿಕ ಜಾನಪದ ಸೊಗಡಿತ್ತು. ನಂತರ ಅವರ ವಿನಿಕೆಯೊಂದಿಗೆ ಗಿಟಾರ್ ಸಹ ಮಿಳಿತವಾಯಿತು. 2007ರ ‘ವರ್ಷದ ಕಲಾವಿದೆ’ ಪ್ರಶಸ್ತಿ ಗಳಿಸಿರುವ ಮೌರ್ಸೆಟ್ ವಿನಿಕೆ ಸಂಯಮಪೂರ್ಣವಾದರೂ ಪ್ರಖರ.20 ಲಕ್ಷ ಸಿ.ಡಿ.ಗಳ ಪ್ರಸರಣವಾಗಿರುವ, ಗ್ರಾಮಿ ಪ್ರಶಸ್ತಿ ಗಳಿಸಿರುವ ಮಾರ್ಕ್ ಕಾನರ್ ಬಹು ನಿರೀಕ್ಷೆ ಹುಟ್ಟಿಸಿದ್ದ ಕಲಾವಿದ! ಶಾಸ್ತ್ರೀಯ ರಚನೆಯಿಂದ ಪ್ರಾರಂಭಿಸಿ, ಜಾಸನ್ನು ಹಿತಮಿತವಾಗಿ ಸೇರಿಸಿ ಹೊಮ್ಮಿಸಿದ ನಾದ ಮಾಧುರ್ಯ ಪ್ರೌಢ, ಪ್ರಬಲ ಹಾಗೂ ಪ್ರಶಸ್ತ.ಇನ್ನೂ ಎಳೆ ಪ್ರಾಯದ ಮಾಸ್ಟರ್ ಅಂಬಿ ಕರ್ನಾಟಕ ಸಂಗೀತದ ಕೀರವಾಣಿ ರಾಗವನ್ನು ಆಯ್ದುಕೊಂಡ. ಒಳ್ಳೆಯ ನಾದ. ಪ್ರಪುಲ್ಲ ಪಿಟೀಲು. ನಿರ್ಭಯ ನಿರೂಪಣೆ. ಜೊತೆಗೆ ಮೃದಂಗ (ವಿ. ರಾಮಮೂರ್ತಿ), ಡೋಲು (ಕೆ. ಶೇಖರ್) ಹಾಗೂ ಮೋರ್ಚಿಂಗ್ (ಜಿ. ಸತ್ಯಸಾಯಿ) ಲಯವಾದ್ಯಗಳು ಸೇರಿ ರಂಜಿಸಿದವು. ರಷ್ಯದ ‘ಲೋಯ್‌ಕೊ’ ಒಂದು ಜಿಪ್ಸಿ ಬ್ಯಾಂಡ್. ಸೆರ್ಗೆ ಎರ್ಡೆಂಕೊ, ವ್ಲಾಡಿಮಿರ್ ಬೆಸ್ಸೊನೊವ್ ಮತ್ತು ಮೈಕೆಲ್ ಸವಿಚೆವ್ ಅವರನ್ನೊಳಗೊಂಡ ಲೊಕ್ಯೊ ತಂಡ 3 ವಾದ್ಯಗಳಲ್ಲಿ ಹೊರಡಿಸಿದ ನಾದ ಉತ್ಸಾಹಪೂರ್ಣ. ಕೆಲವೊಮ್ಮೆ ಸಂಚಿನ ನಾದ ಬಂದರೆ ಮತ್ತೆ ಕೆಲವೆಡೆ ಸಬಲ ಸ್ವರ! ಗಾಯನದಲ್ಲಿದ್ದ ಜೀರು ಕಂಠ, ಹಿನ್ನೆಲೆಯ ದ್ರುತಗತಿಯ ವಾದನಗಳು ಒಂದು ಭಿನ್ನ ರುಚಿಯನ್ನು ಕೊಟ್ಟವು!ನಾರ್ವೆಯ ಕ್ಯಾಥರಿನ್ ಚೆನ್ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ವಾದಕಿ. ತನಿಯಾಗೂ, ಗೋಷ್ಠಿಯಲ್ಲೂ ನುಡಿಸಿರುವ ಅನುಭವಸ್ಥೆ. ಫಿಲಿಡೆಲ್ಫಿಯಾದಲ್ಲಿ ಸ್ನಾತಕೋತ್ತರ ಪದವಿಧರೆ. ಇತರರಂತೆ ನಿಂತುಕೊಂಡೇ ಪಿಟೀಲು ನುಡಿಸಿದ ಅವರು, ದ್ರುತ ಕಾಲದಲ್ಲೂ ತೋರಿದ ವಿರಳತೆ ಗಮನಾರ್ಹ. ಸುನಾದದಿಂದ ಮಂದಸ್ಮಿತರಾಗಿ ನುಡಿಸಿದರು. ವಾದ್ಯದ ತಂತ್ರವೂ ಸೇರಿ, ಒಳ್ಳೆಯ ಸಂಗೀತ ಸೃಷ್ಟಿಯಾಯಿತು.

ಬೆಂಗಳೂರಿನ ಬೆತೆಲ್ ತೆರೀ ಅವರು ಪಿಯಾನೊದಲ್ಲಿ ಡಾ. ಎಲ್. ಸುಬ್ರಹ್ಮಣ್ಯಂ ಅವರ ಒಂದು ರಚನೆ (ವೇದರಿಂಗ್ ಮೈಂಡ್ಸ್) ಹಿತವಾಗಿ ನುಡಿಸಿದರು.ಕಾರ್ಯಕ್ರಮಕ್ಕೆ ಶಿಖರಪ್ರಾಯವಾಗಿದ್ದು ವಾದಕ, ವಾಗ್ಗೇಯಕಾರ, ನಿರ್ದೇಶಕ ಡಾ. ಎಲ್. ಸುಬ್ರಹ್ಮಣ್ಯಂ ನೇತೃತ್ವದ ನಾದ ಝರಿ. ಆಲಾಪನೆ, ದೃಢವಾದ ಬುನಾದಿಯಿಂದ ವಾದ್ಯಗೋಷ್ಠಿಗೆ ದಕ್ಷ ಚಾಲನೆ. 10 ತಂತಿ ವಾದ್ಯಗಳು, ಪಿಯಾನೊ, ಹಾಗೂ 3 ಲಯ ವಾದ್ಯಗಳು ಹೊರಡಿಸಿದ ನಾದ ಅನುಪಮ. ಒಂದೊಂದು ಚರಣವನ್ನು ಒಬ್ಬೊಬ್ಬರು ತನಿಯಾಗಿ ನುಡಿಸಿ, ಪಲ್ಲವಿಯನ್ನು ಒಟ್ಟು ಸೇರಿ ವಿನಿಕೆ ಮಾಡಿದರು. ಭೋರ್ಗರೆದ ನಾದ. ಕೇಳುಗರ ದೀರ್ಘ ಕರತಾಡನ. ಹರ್ಷೋದ್ಗಾರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry