ಗುರುವಾರ , ಮೇ 13, 2021
16 °C

ಪ್ರಣಯದ ಪಕ್ಷಿಗಳ ದರಿಂಗ್‌ಬಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದರಿಂಗ್‌ಬಡಿ ಒಡಿಶಾ ರಾಜ್ಯದ ಏಕೈಕ ಗಿರಿಧಾಮ. ಇದು ಪ್ರಣಯ ಪಕ್ಷಿಗಳಿಗೆ, ವಿಶೇಷವಾಗಿ ನವ ವಿವಾಹಿತರಿಗೆ ನೆಚ್ಚಿನ ತಾಣ.ಮುಗಿಲೆತ್ತರಕ್ಕೆ ಬೆಳೆವ ಪೈನ್ ಮರಗಳ ದಟ್ಟ ಕಾಡನ್ನು ಹಾದು ಈ ಗಿರಿಧಾಮ ಮುಟ್ಟಬೇಕು. ಸಮುದ್ರ ಮಟ್ಟದಿಂದ 914 ಮೀಟರ್ ಎತ್ತರದಲ್ಲಿ ಇರುವ ಇದು ಕಂದಾಮಾಲ್ ಜಿಲ್ಲೆಗೆ ಸೇರಿದೆ. ಫುಲ್‌ಬನಿಯಿಂದ 100 ಕಿ.ಮೀ, ಬಲಿಗುಡದಿಂದ 50 ಕಿ.ಮೀ, ಭುವನೇಶ್ವರದಿಂದ 251 ಕಿ.ಮೀ, ಬೆರ್ಮಾಂಪುರದಿಂದ 127 ಕಿ.ಮೀ. ದೂರದಲ್ಲಿ ಇರುವ ಈ ಗಿರಿಧಾಮದಲ್ಲಿ ಸುಂದರ ಕಣಿವೆಗಳು, ಕಾಫಿ ತೋಟಗಳು, ನೀರಿನ ಝರಿಗಳು, ದಟ್ಟ ಕಾಡು ಇದೆ. ಮಳೆಕಾಡುಗಳಿಂದ ಆವೃತವಾದ ಪ್ರಶಾಂತ, ಮಾಲಿನ್ಯ ಮುಕ್ತ ಜಾಗದಲ್ಲಿ ಕರಿಮೆಣಸು, ಅರಿಶಿಣದ ತೋಟಗಳೂ ಇವೆ.ಚಳಿಗಾಲದಲ್ಲಿ ಮುಂಜಾನೆ ಸೊನ್ನೆ ಡಿಗ್ರಿ ಉಷ್ಣಾಂಶ ಇರುವುದು ದರಿಂಗ್‌ಬಡಿಯಲ್ಲಿ ಸಾಮಾನ್ಯ. ಆ ಕಾರಣದಿಂದಲೇ ಸೂಕ್ಷ್ಮ ದೇಹ ಪ್ರಕೃತಿ ಇರುವವರಿಗೆ ಚಳಿ ಮತ್ತು ಮಳೆಗಾಲದಲ್ಲಿ ಈ ಗಿರಿಧಾಮ ಹೇಳಿ ಮಾಡಿಸಿದ ಜಾಗವಲ್ಲ. ಮಳೆಗಾಲದಲ್ಲಿ ಭೂಕುಸಿತವೂ ಇಲ್ಲಿ ಸಾಮಾನ್ಯ. ಆ ವೇಳೆಯಲ್ಲಿ ಪ್ರವಾಸಿಗರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.ಬೇಸಿಗೆ ಕಾಲದಲ್ಲಿ ದರಿಂಗ್‌ಬಡಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು. ಅಲ್ಲಿಗೆ ಪ್ರಯಾಣ ಹೊರಡುವುದೇ ಅದ್ಭುತ ಅನುಭವ. ಅರಣ್ಯ ಇಲಾಖೆ ನಿರ್ವಹಿಸುತ್ತಿರುವ ತೋಟಗಳೂ ಅಲ್ಲಿವೆ. ಖಾಸಗಿಯವರ ತೋಟಗಳೂ ಇವೆ. ಗಿರಿಧಾಮದ ಉದ್ದಕ್ಕೂ ಹರಿದು ಸಾಗುವ ಡೊಲುರಿ ನದಿ ಗಿರಿಧಾಮದ ಮತ್ತೊಂದು ಆಕರ್ಷಣೆ. ಈ ನದಿ ದಟ್ಟ ಕಾಡಿನೊಳಗೆ ಹರಿದು ಹೋಗಿ ಮೋಹಕ ಜಲಪಾತವನ್ನು ಸೃಷ್ಟಿಸಿದೆ. ಆದರೆ, ಅಲ್ಲಿಗೆ ತಲುಪಲು ಅರಣ್ಯ ಇಲಾಖೆಯ ಮಾರ್ಗದರ್ಶಕರು ಬೇಕು. ಇಲ್ಲದೆ ಹೋದಲ್ಲಿ ದಾರಿತಪ್ಪುವ ಸಾಧ್ಯತೆ ಇದೆ.ಗಿರಿಧಾಮದ ಸಮೀಪದಲ್ಲಿಯೇ ಬೆಲಘಾರ್ ಪಕ್ಷಿಧಾಮ ಇದೆ. ಅಲ್ಲಿಗೆ ದರಿಂಗ್‌ಬಡಿಯಿಂದ ಅರ್ಧ ತಾಸಿನ ಪ್ರಯಾಣ. ಅದು ರಕ್ಷಿತ ಅರಣ್ಯ ಎನಿಸಿಕೊಂಡಿದ್ದು ಅಪರೂಪದ ಮತ್ತು ವಲಸಿಗ ಪಕ್ಷಿಗಳಿಗೆ ನೆಲೆ ನೀಡಿದೆ. ದಟ್ಟಕಾಡಿನ ಒಳಗೆ ಹುಲಿ, ಆನೆ, ಜಿಂಕೆ, ನರಿಗಳು, ಸರೀಸೃಪಗಳಿವೆ.ಡೊಗ್ರಿಯಾ ಖೊಂಡ್ ಎಂಬ ಬಡಕಟ್ಟು ಜನರೂ ಅರಣ್ಯ ಪ್ರದೇಶದಲ್ಲಿ ತಾವು ಕಂಡುಕೊಂಡಿದ್ದಾರೆ. ಅವರ ವಿಶಿಷ್ಟ ಜೀವನ ಶೈಲಿಯ ಬಗ್ಗೆ ಮಾಹಿತಿ ಪಡೆಯುವುದೂ ಕೂಡ ಒಂದು ಅದ್ಭುತ ಅನುಭವ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.