ಪ್ರಣವ್ ಅವಿರೋಧ ಆಯ್ಕೆಯಾಗಬೇಕಿತ್ತು- ಬಿಎಸ್‌ವೈ

ಭಾನುವಾರ, ಜೂಲೈ 21, 2019
27 °C

ಪ್ರಣವ್ ಅವಿರೋಧ ಆಯ್ಕೆಯಾಗಬೇಕಿತ್ತು- ಬಿಎಸ್‌ವೈ

Published:
Updated:

ಬೆಂಗಳೂರು: `ಪ್ರಣವ್ ಮುಖರ್ಜಿ ಅವರನ್ನು ಅವಿರೋಧವಾಗಿ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಬೇಕಿತ್ತು. ಆದರೆ, ಮುಂದಾಲೋಚನೆಯ ಕೊರತೆ ಮತ್ತು ವಿಭಿನ್ನ ಅಭಿಪ್ರಾಯಗಳಿಂದಾಗಿ ಅದು ಸಾಧ್ಯವಾಗಿಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಮುಖರ್ಜಿ ಅವರನ್ನು ಅಭಿನಂದಿಸುವ ಪ್ರಸ್ತಾವವನ್ನು ಬೆಂಬಲಿಸಿ ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, `ಅನಿವಾರ್ಯ ಕಾರಣಗಳಿಂದಾಗಿ ಚುನಾವಣೆ ನಡೆದಿದೆ. ಪ್ರಣವ್ ಅವರಂತಹ ಮೇರು ವ್ಯಕ್ತಿ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಬಾಬು ರಾಜೇಂದ್ರ ಪ್ರಸಾದ್, ಡಾ.ಎಸ್.ರಾಧಾಕೃಷ್ಣನ್ ಮತ್ತು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ನಂತರ ದೇಶ ಒಬ್ಬ ಅಪರೂಪದ ವ್ಯಕ್ತಿಯನ್ನು ರಾಷ್ಟ್ರಪತಿಯನ್ನಾಗಿ ಪಡೆದಿದೆ~ ಎಂದರು.`ಈಗ ಚುನಾವಣೆ ಮುಗಿದಿದೆ. ಪ್ರಣವ್ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಮುಂದೆ ಪ್ರಣವ್ ಆಯ್ಕೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸುವ ದುಸ್ಸಾಹಸಕ್ಕೆ ಕೈಹಾಕಬೇಡಿ ಎಂದು ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಪಿ.ಎ.ಸಂಗ್ಮಾ ಅವರಿಗೆ ನಾನು ಮನವಿ ಮಾಡುತ್ತೇನೆ. ರಾಷ್ಟ್ರಪತಿ ಆಯ್ಕೆಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ಭಾರತೀಯರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಎದುರಿಸಬೇಕಾಗುತ್ತದೆ. ಅಂತಹ ಹಾದಿ ಹಿಡಿಯುವುದು ಬೇಡ ಎಂದು ಮನವಿ ಮಾಡಿ ನಾನು ಸಂಗ್ಮಾ ಅವರಿಗೆ ಪತ್ರ ಬರೆಯುತ್ತೇನೆ~ ಎಂದು ಹೇಳಿದರು.ಸುವರ್ಣಸೌಧ ಉದ್ಘಾಟನೆಗೆ: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, `ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಮುಖರ್ಜಿ ಅವರು, ರಾಷ್ಟ್ರಪತಿ ಭವನದಲ್ಲಿ ಬಾಕಿ ಇರುವ ವಿಷಯಗಳನ್ನು ಇತ್ಯರ್ಥಪಡಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಬಿಜೆಪಿ ಕೇವಲ ಸ್ಪರ್ಧೆಗಾಗಿ ಸಂಗ್ಮಾ ಅವರನ್ನು ಬೆಂಬಲಿಸಿತ್ತು. ಈಗ ಅತ್ಯಧಿಕ ಮತಗಳೊಂದಿಗೆ ಮುಖರ್ಜಿ ಗೆಲುವು ಸಾಧಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಭಾರತವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರೆ~ ಎಂದರು.ಬೆಳಗಾವಿಯ ಸುವರ್ಣಸೌಧದ ಕಾಮಗಾರಿ ಅಂತಿಮ ಹಂತದಲ್ಲಿದೆ. ಆಗಸ್ಟ್‌ನಲ್ಲಿ ಈ ಸೌಧವನ್ನು ಉದ್ಘಾಟಿಸುವ ಯೋಚನೆ ಇದೆ. ನೂತನ ರಾಷ್ಟ್ರಪತಿಯವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ಶೆಟ್ಟರ್ ಪ್ರಕಟಿಸಿದರು.ಶಾಸಕರಿಗೂ ಅಭಿನಂದನೆ: `ರಾಜ್ಯದಲ್ಲಿ ಕಾಂಗ್ರೆಸ್‌ನ ಸದಸ್ಯಬಲ ಕಡಿಮೆ ಇತ್ತು. ಆದರೂ ಬಿಜೆಪಿಯ ಹಲವು ಶಾಸಕರು ಪ್ರಣವ್ ಮುಖರ್ಜಿ ಅವರನ್ನು ಬೆಂಬಲಿಸಿರುವುದರಿಂದ ಇಲ್ಲಿಯೂ ಬಹುಮತ ದೊರೆತಿದೆ. ಬಿಜೆಪಿಯ 12 ಶಾಸಕರು ಮುಖರ್ಜಿ ಅವರಿಗೆ ಮತ ನೀಡಿದ್ದಾರೆ. ಅವರನ್ನೂ ನಾನು ಅಭಿನಂದಿಸುತ್ತೇನೆ~ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.ಪ್ರಣವ್ ಐದು ದಶಕಗಳಿಗೂ ಹೆಚ್ಚು ಅವಧಿಯ ರಾಜಕೀಯ ಅನುಭವ ಹೊಂದಿದ್ದಾರೆ. ರಾಜಕಾರಣ ಮತ್ತು ಆಡಳಿತದಲ್ಲಿ `ಸಂಕಷ್ಟ ನಿವಾರಕ~ ಎಂಬ ಖ್ಯಾತಿ ಪಡೆದವರು. ದೇಶದ ಸಂವಿಧಾನವನ್ನು ಎತ್ತಿ ಹಿಡಿಯುತ್ತಾರೆ ಮತ್ತು ಘನತೆಯನ್ನು ರಕ್ಷಿಸುತ್ತಾರೆ ಎಂಬ ಭರವಸೆ ಎಲ್ಲರಿಗೂ ಇದೆ. ಈ ಕಾರಣಕ್ಕಾಗಿಯೇ ಯುಪಿಎ ಮೈತ್ರಿಕೂಟದಿಂದ ಹೊರಕ್ಕಿರುವ ಪಕ್ಷಗಳೂ ಅವರನ್ನು ಬೆಂಬಲಿಸಿವೆ ಎಂದರು.ಪರಿಷತ್ತಿನಲ್ಲಿಯೂ ಅಭಿನಂದನೆ: ರಾಷ್ಟ್ರಪತಿ ಸ್ಥಾನಕ್ಕೆ ಬಹುಮತದಿಂದ ಆಯ್ಕೆಯಾಗಿರುವ ಪ್ರಣವ್ ಅವರಿಗೆ ವಿಧಾನ ಪರಿಷತ್ತಿನಲ್ಲಿಯೂ ಸೋಮವಾರ ಅಭಿನಂದನೆ ಸಲ್ಲಿಸಲಾಯಿತು.ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕಾಂಗ್ರೆಸ್‌ನ ಹಿರಿಯ ಸದಸ್ಯ ಎಂ.ವಿ. ರಾಜಶೇಖರನ್, ಜೆಡಿಎಸ್‌ನ ಹಿರಿಯ ಸದಸ್ಯ ಎಂ.ಸಿ. ನಾಣಯ್ಯ ಮಾತನಾಡಿ, ಪ್ರಣವ್ ವ್ಯಕ್ತಿತ್ವದ ಗುಣಗಾನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry