ಭಾನುವಾರ, ಮೇ 16, 2021
21 °C

ಪ್ರಣವ್-ಚಿದಂಬರಂ ಭಿನ್ನಾಭಿಪ್ರಾಯ ತಾರಕಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಐಎಎನ್‌ಎಸ್):  2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಇಬ್ಬರು ಪ್ರಭಾವಿ ಸಚಿವರಾದ ಪ್ರಣವ್ ಮುಖರ್ಜಿ ಮತ್ತು ಚಿದಂಬರಂ ಅವರ ಮಧ್ಯೆ ಎದ್ದಿರುವ ವಿವಾದ ತಣ್ಣಗಾಗಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಧ್ಯ ಪ್ರವೇಶಿಸಿದ್ದಾರೆ.ಇತ್ತೀಚೆಗಷ್ಟೇ ಚಿಕಿತ್ಸೆ ಪಡೆದು ವಿದೇಶದಿಂದ ವಾಪಸ್ ಆಗಿರುವ ಸೋನಿಯಾ, ಸಚಿವರ ಮಧ್ಯೆ ತಲೆದೋರಿರುವ ಬಿಕ್ಕಟ್ಟು ನಿವಾರಣೆಗೆ ಸರ್ವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.ಕಳೆದ ಮಾರ್ಚ್‌ನಲ್ಲಿ ಮುಖರ್ಜಿ ಅವರು ಪ್ರಧಾನಿ ಕಚೇರಿಗೆ ಟಿಪ್ಪಣಿಯೊಂದನ್ನು ಕಳುಹಿಸಿ, `2008ರಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರು ತರಂಗಾಂತರವನ್ನು ಹರಾಜು ಮೂಲಕ ವಿತರಿಸಲು ಮುಂದಾಗಬೇಕಿತ್ತು~ ಎಂದು ತಿಳಿಸಿದ ವಿಚಾರ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯ ಮೂಲಕ ಬಹಿರಂಗಗೊಂಡು ವಿವಾದ ಸೃಷ್ಟಿಯಾಗಿದೆ.ಇಬ್ಬರು ಹಿರಿಯ ಸಚಿವರ ಮಧ್ಯೆ ಉತ್ತಮ ಸಂಬಂಧವಿಲ್ಲ ಎಂಬುದು ಬಹಿರಂಗವಾಗುವುದರ ಜತೆಗೆ ಚಿದಂಬರಂ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸತೊಡಗಿವೆ. ಇದರಿಂದ ಚಿದಂಬರಂ ಅವರ ವರ್ಚಸ್ಸಿಗಷ್ಟೇ ಅಲ್ಲ ಕಾಂಗ್ರೆಸ್ ವರ್ಚಸ್ಸಿಗೂ ಧಕ್ಕೆಯಾಗುತ್ತದೆ ಎಂಬುದು ಸೋನಿಯಾ ಅವರ ಆತಂಕ.ಈ ಹಿನ್ನೆಲೆಯಲ್ಲಿ ಅವರು ಪ್ರಧಾನಿಯಿಂದ ಹಿಡಿದು ಪಕ್ಷದ ವಕ್ತಾರರವರೆಗೆ ಎಲ್ಲರೂ ಚಿದಂಬರಂ ಅವರನ್ನು ಬೆಂಬಲಿಸಬೇಕು ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.ಪ್ರಧಾನಿ ವಿದೇಶದಿಂದ ವಾಪಸ್ ಆಗುವವರೆಗೂ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಚಿದಂಬರಂ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಕಂಪೆನಿ ವ್ಯವಹಾರ ಸಚಿವ ವೀರಪ್ಪ ಮೊಯಿಲಿ ಅವರು ಗೃಹ ಸಚಿವರನ್ನು ಬಲವಾಗಿ ಸಮರ್ಥಿಸಿಕೊಂಡು ಮಾತನಾಡಿದ್ದಾರೆ.ಮುಖರ್ಜಿ ಮತ್ತು ಚಿದಂಬರಂ ಮಧ್ಯೆ ಕಳೆದ ಎರಡು ವರ್ಷಗಳಿಂದಲೂ ಭಿನ್ನಾಭಿಪ್ರಾಯವಿದೆ. ಈ ವಿಚಾರ ಸೋನಿಯಾ ಅವರಿಗೂ ಗೊತ್ತು. ಅವರು ಆಗಾಗ ಮಧ್ಯ ಪ್ರವೇಶಿಸಿ ಭಿನ್ನಾಭಿಪ್ರಾಯ ತಣಿಸಲು ಪ್ರಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.ಅಣ್ಣಾ ಹಜಾರೆ ಅವರನ್ನು ಚಿದಂಬರಂ ಅವರ ಆದೇಶದ ಮೇಲೆ ಬಂಧಿಸಿದ್ದರಿಂದ ದೇಶದಾದ್ಯಂತ ಜನ ತಿರುಗಿಬಿದ್ದರು. ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಇದರಿಂದ ಧಕ್ಕೆ ಉಂಟಾಯಿತು. ಆಗ ಮುಖರ್ಜಿ ಮತ್ತು ಸಲ್ಮಾನ್ ಖುರ್ಷಿದ್ ಅವರು ಹಜಾರೆ ಸತ್ಯಾಗ್ರಹ ಅಂತ್ಯಗೊಳಿಸಲು ಮಧ್ಯಸ್ಥಿಕೆ ವಹಿಸಿದರು ಎಂದು ಮೂಲಗಳು ತಿಳಿಸಿವೆ.ಈ ಮಧ್ಯೆ ಬಿಜೆಪಿ ಮತ್ತು ಎಐಎಡಿಎಂಕೆ ಮುಖಂಡರು ಚಿದಂಬರಂ ರಾಜೀನಾಮೆ ಆಗ್ರಹವನ್ನು  ಪುನರುಚ್ಚರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.