ಪ್ರಣವ್ ಸುಗಮ ಆಯ್ಕೆಗೆ ಪ್ರಾರ್ಥನೆ;ಸೊಸೆ, ಮೊಮ್ಮಗನ ಪೂಜೆ

7

ಪ್ರಣವ್ ಸುಗಮ ಆಯ್ಕೆಗೆ ಪ್ರಾರ್ಥನೆ;ಸೊಸೆ, ಮೊಮ್ಮಗನ ಪೂಜೆ

Published:
Updated:
ಪ್ರಣವ್ ಸುಗಮ ಆಯ್ಕೆಗೆ ಪ್ರಾರ್ಥನೆ;ಸೊಸೆ, ಮೊಮ್ಮಗನ ಪೂಜೆ

ಬೀದರ್: ರಾಷ್ಟ್ರಪತಿ ಹುದ್ದೆಗೆ ಏರಲು ಕೇಂದ್ರದ ಮಾಜಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು, ನವದೆಹಲಿಯಲ್ಲಿ ಗುರುವಾರ ನಾಮಪತ್ರ ಸಲ್ಲಿಸುತ್ತಿದ್ದಂತೆ, ಅವರ ಸುಗಮ ಆಯ್ಕೆಗೆ ಪ್ರಾರ್ಥಿಸಿ ಗಡಿ ಜಿಲ್ಲೆ ಬೀದರ್‌ನ ದೇವಸ್ಥಾನವೊಂದರಲ್ಲಿ ಪ್ರಣವ್ ಮುಖರ್ಜಿ ಸೊಸೆ ಮತ್ತು ಮೊಮ್ಮಗ ವಿಶೇಷ ಪೂಜೆ ಸಲ್ಲಿಸಿದರು.ಜಿಲ್ಲೆಯ ಹುಮನಾಬಾದ್ ತಾಲ್ಲೂಕು ರೇಕುಳಗಿ ಗ್ರಾಮದಲ್ಲಿರುವ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದ ಪ್ರಣವ್ ಮುಖರ್ಜಿ  ಸೊಸೆ ಚಿತ್ರಲೇಖಾ ಮತ್ತು ಮೊಮ್ಮಗ ಅರ್ಜುನ್ ಮುಖರ್ಜಿ ಪೂಜೆ ಸಲ್ಲಿಸಿದರು. ದೇಗುಲದ ನರಸಾರೆಡ್ಡಿ ಭೀಮರೆಡ್ಡಿ ಈ ಕುಟುಂಬದ ಪರವಾಗಿ ವಿಶೇಷ ಅಭಿಷೇಕ ಮಾಡಿದರು.

ರೇಕುಳುಗಿ ಗ್ರಾಮದ ಈ ದೇವಸ್ಥಾನದ ಬಗ್ಗೆ ಪ್ರಣವ್ ಮುಖರ್ಜಿ ಅವರಿಗೆ ವಿಶೇಷ ಒಲವು ಇದ್ದು, ಎರಡು ವರ್ಷದ ಹಿಂದೆ ಅವರು ಕೇಂದ್ರ ಸಚಿವರಾಗಿ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದರು.ಬುಧವಾರ ರಾತ್ರಿ ಬೀದರ್‌ಗೆ ಆಗಮಿಸಿ ತಂಗಿದ್ದ ಚಿತ್ರಲೇಖಾ, ಅವರ ಪುತ್ರ ಅರ್ಜುನ್ ಬೆಳಿಗ್ಗೆ ವಾಹನದಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಅವರು ತಾಲ್ಲೂಕಿನ ಸಿಂಗೋಳ್ ಗ್ರಾಮದಲ್ಲಿರುವ ಪಂಚಲಿಂಗೇಶ್ವರ ದೇವಸ್ಥಾನಕ್ಕೂ ತೆರಳಿದ್ದರು. ಚಿತ್ರಲೇಖಾ ಅವರು ಪ್ರಣವ್ ಮುಖರ್ಜಿ ಅವರ ಪುತ್ರ, ಪಶ್ಚಿಮ ಬಂಗಾಳದ ಶಾಸಕ ಅಭಿಜಿತ್ ಪತ್ನಿಯಾಗಿದ್ದಾರೆ.ಸುಮಾರು ಒಂದು ಗಂಟೆ ಕಾಲ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿದ್ದ ಅವರು ಆತ್ಮೀಯರ ಜೊತೆಗೂಡಿ ಪೂಜೆ ಸಲ್ಲಿಸಿದರು. ಸಂಸದ ಎಚ್.ವಿಶ್ವನಾಥ್, ತಮಿಳುನಾಡಿನ ಅರುಣ್ ರಾಶಿ ಮತ್ತು ಸಾಕ್ಷರತಾ ಮಿಷನ್‌ನ ಮಾಜಿ ಅಧ್ಯಕ್ಷ ನಾರಾಯಣ ಅವರೂ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry