ಶುಕ್ರವಾರ, ನವೆಂಬರ್ 22, 2019
25 °C

ಪ್ರಣಾಳಿಕೆ ಎಂಬ ಮಂಕುಬೂದಿ

Published:
Updated:

ನಮ್ಮ ದೇಶದಲ್ಲಿ ರಾಜಕಾರಣಿಗಳು ಭರವಸೆಗಳನ್ನು ನೀಡುವಷ್ಟು ಧಾರಾಳವಾಗಿ ಬೇರೆ ಏನನ್ನೂ ಕೊಡುವುದಿಲ್ಲ. ಚುನಾವಣೆಯ ಸಮಯದಲ್ಲಿ ಓತಪ್ರೋತವಾದ ಭರವಸೆಗಳಿಂದ ಕೂಡಿದ ಎಲ್ಲ ಪಕ್ಷಗಳ ಪ್ರಣಾಳಿಕೆಗಳನ್ನು ಗಮನಿಸಿದರೆ ಇದರ ಒಳಾರ್ಥ ತಿಳಿಯುತ್ತದೆ.ಎಲ್ಲ ಪ್ರಮುಖ ಪಕ್ಷಗಳು ಜನತೆಯ ಮುಂದೆ ಭರವಸೆಗಳ ಮಹಾಪೂರವನ್ನೇ ಹರಿಯಬಿಟ್ಟಿದ್ದಾರೆ. ಚುನಾವಣೆಯಲ್ಲಿ ಶತಾಯಗತಾಯ ಗೆದ್ದು ಗದ್ದುಗೆ ಹಿಡಿಯಲು ರಾಜಕೀಯ ಪಕ್ಷಗಳು ಮತದಾರರ ಮೇಲೆ ಭರವಸೆಗಳ ಮಂಕುಬೂದಿ ಎರೆಚುವ ಪರಿಪಾಠ ಬೆಳೆಸಿಕೊಂಡಿರುವುದು ಹೊಸದೇನಲ್ಲ.ಹಾಗೆಂದು ಪ್ರಣಾಳಿಕೆ ನೋಡಿ ಜನರು ಮತಚಲಾಯಿಸಿ ಬಿಡುತ್ತಾರೆ ಎಂಬ ಭರವಸೆ ಯಾವ ಪಕ್ಷಕ್ಕೂ ಇಲ್ಲ. ಪ್ರಣಾಳಿಕೆಗಳು ಜಾರಿಗೆ ಬರುತ್ತವೆ ಎನ್ನುವ ಭರವಸೆಯೂ ಮತದಾರರಿಗೆ ಇಲ್ಲ. ಹೀಗಾಗಿ ಚುನಾವಣಾ ಪ್ರಣಾಳಿಕೆ ಎನ್ನುವುದು ಒಂದು ಸಂಪ್ರದಾಯವಾಗಿ ಬಿಟ್ಟಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ, ರೈತರಿಗೆ ದಿನದ ಇಪ್ಪತ್ತನಾಲ್ಕು ಗಂಟೆ ವಿದ್ಯುತ್ ಪೂರೈಸುವ ಭರವಸೆ ನೀಡಿತ್ತು. ಈಗ ಏನಾಗಿದೆ? ರಾಜ್ಯದ ಮುಕ್ಕಾಲುಪಾಲು ಭಾಗ ಕತ್ತಲಲ್ಲಿದೆ.ಇಂತಹ ಪೊಳ್ಳುಭರವಸೆಗಳಿಂದಾಗಿ ಪ್ರಣಾಳಿಕೆಗಳು ಮಹತ್ವ ಕಳೆದುಕೊಂಡಿವೆ. ಎಷ್ಟೇ ಆಕರ್ಷಕ ಪ್ರಣಾಳಿಕೆ ಪ್ರಕಟಿಸಿದರೂ ಅದಕ್ಕೆ ಕವಡೆ ಕಿಮ್ಮತ್ತಿಲ್ಲ. ಸ್ವಾರಸ್ಯವೆಂದರೆ ಈ ಸಲದ ಪ್ರಣಾಳಿಕೆಯಲ್ಲಿಯೂ ಬಿಜೆಪಿ 24 ಗಂಟೆ ನಿರಂತರ ವಿದ್ಯುತ್ ನೀಡುವ ಭರವಸೆ ನೀಡಿದೆ. ಕಾಂಗ್ರೆಸ್ ಕೂಡ ಹಿಂದೆ ಬೀಳದೆ ರೈತರ ಪಂಪ್‌ಸೆಟ್‌ಗೆ ಎಂಟುಗಂಟೆ ವಿದ್ಯುತ್ ಹರಿಸುವ ಭರವಸೆ ಕೊಟ್ಟಿದೆ. ಗ್ರಾಮೀಣ ಜನತೆಗೆ ಬೇಕಾಗಿರುವುದು ಶುದ್ಧ ಕುಡಿಯುವ ನೀರು, ವಿದ್ಯುತ್, ರಸ್ತೆ, ಶೌಚಾಲಯ, ಶಾಲೆ, ಆಸ್ಪತ್ರೆ ಮತ್ತಿತರ ಮೂಲಭೂತ ಸೌಲಭ್ಯಗಳು.ಆದರೆ ದೇಶದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು, ಪ್ರಸಕ್ತ ಚುನಾವಣೆಯವರೆಗೆ ಎಲ್ಲ ರಾಜಕೀಯ ಪಕ್ಷಗಳು ಗ್ರಾಮೀಣ ಅಭಿವೃದ್ಧಿ ಮಂತ್ರ ಜಪಿಸುತ್ತಲೇ ಇವೆ. ಭರವಸೆಗಳನ್ನು ನೀಡುತ್ತಲೇ ಇವೆ. ಹಳ್ಳಿಗಳೆಲ್ಲಾ ಅಭಿವೃದ್ಧಿಯ ಬೆಳಕು ಕಾಣದೆ ಕತ್ತಲಲ್ಲೇ ಇವೆ.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ರೂಪಾಯಿಗೆ ಒಂದು ಕೆಜಿ ಅಕ್ಕಿ ವಿತರಿಸಲು ಮುಂದಾಗಿರುವುದು ಒಂದು ಗಿಮಿಕ್, ಬಡವರ ಮತದ ಮೇಲೆ ಕಣ್ಣಿಟ್ಟು ರೂಪಿಸಿದ ಯೋಜನೆ.ಜೆಡಿಎಸ್ ಕೂಡ ಇಪ್ಪತ್ತನಾಲ್ಕು ಗಂಟೆಗಳಲ್ಲಿ  ರೈತರ ಸಾಲಮನ್ನಾ ಮಾಡಲು ಮುಂದಾಗಿರುವುದೂ ಅದೇ ತಂತ್ರ. ನೀರಾವರಿಗೆ ಕಾಂಗ್ರೆಸ್ ಹತ್ತು ಸಾವಿರ ಕೋಟಿ, ಜೆಡಿಎಸ್ 65 ಸಾವಿರ ಕೋಟಿ ಮೀಸಲಿಟ್ಟಿವೆ. ಬಡವರಿಗೆ ಮನೆ ನೀಡಲು ಎಲ್ಲ ಪಕ್ಷಗಳೂ ಪ್ರಣಾಳಿಕೆಯಲ್ಲಿ ಹಾತೊರೆಯುತ್ತಿವೆ. ಇನ್ನೂ ಸ್ವಾರಸ್ಯವೆಂದರೆ  ಪಿಯುಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಹಾಗೂ ಡಿಜಿಟಲ್ ನೋಟ್‌ಬುಕ್ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ.ಬಿಜೆಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್ ಹಾಗೂ ಟ್ಯಾಬ್ಲೆಟ್‌ಗಳನ್ನು ನೀಡಲು ಮುಂದಾಗಿರುವುದು ಹಾಸ್ಯಾಸ್ಪದ. ಏಕೆಂದರೆ ಪ್ರೌಢಶಾಲೆಯಲ್ಲಿ ಅರ್ಧಕ್ಕೇ ಶಾಲೆ ಬಿಡುವ ಮಕ್ಕಳ ಸಮಸ್ಯೆಯನ್ನೇ ನಾವಿನ್ನೂ ಬಗೆಹರಿಸಿಲ್ಲ. ಅಭಿವೃದ್ಧಿಯ ದಿಕ್ಕನ್ನು ಪಲ್ಲಟ ಮಾಡುವಂತಹ ಇಂತಹ ಚಿಂತನೆಗಳಿಂದ ಯಾವ  ಪುರುಷಾರ್ಥ ಸಾಧನೆಯಾದಂತಾಗುತ್ತದೆ ಎನ್ನುವುದು ಅರ್ಥವಾಗುತ್ತಿಲ್ಲ.ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಇಲ್ಲ, ದೀಪ ಬೆಳಗಿಸಿ ವಿದ್ಯಾಭ್ಯಾಸ ನಡೆಸುವುದೇ ದುಸ್ತರವಾಗಿರುವಾಗ ಲ್ಯಾಪ್‌ಟ್ಯಾಪ್ ಚಾರ್ಜ್ ಮಾಡಲು ಕರೆಂಟ್ ಎಲ್ಲಿಂದ ತರುವುದು? ಲ್ಯಾಪ್‌ಟ್ಯಾಪ್ ಕಂಪೆನಿಗಳಿಗಷ್ಟೇ ಲಾಭದಾಯಕವಾಗಬಹುದಾದ ಇಂತಹ ಯೋಜನೆಗಳು ಕೃತಕ ಆಕರ್ಷಣೆಗಳಷ್ಟೆ. ಮತ್ತೊಂದು ವಿವೇಚನಾರಹಿತ ಚಿಂತನೆ ಎಂದರೆ ಬಿಜೆಪಿ, ಡಬ್ಬಿಂಗ್ ಚಿತ್ರಗಳನ್ನು ನಿಯಂತ್ರಿಸುತ್ತೇನೆ ಎಂದು ಹೇಳಿಕೊಂಡಿರುವುದು. ಅಂಗೈಯಲ್ಲಿ ಅರಮನೆ ತೋರಿಸುವ ಎಲ್ಲ ಪಕ್ಷಗಳ ಕಪಟನಾಟಕವನ್ನು ಮತದಾರರು ಅರಿಯಲಾರದಷ್ಟು ಮುಗ್ಧರಲ್ಲ.

ಪ್ರತಿಕ್ರಿಯಿಸಿ (+)