ಮಂಗಳವಾರ, ನವೆಂಬರ್ 12, 2019
19 °C

ಪ್ರಣಾಳಿಕೆ : ಜೇಟ್ಲಿ ಬೆಂಗಳೂರಿಗೆ

Published:
Updated:

ಬೆಂಗಳೂರು: ಬಿಜೆಪಿ ಚುನಾವಣಾ ಕಾರ್ಯತಂತ್ರ ಕುರಿತು ಚರ್ಚೆ ಮತ್ತು ಚುನಾವಣಾ ಪ್ರಣಾಳಿಕೆಗೆ ಅಂತಿಮ ರೂಪ ನೀಡುವ ಸಂಬಂಧ ಚರ್ಚಿಸಲು ಪಕ್ಷದ ಹಿರಿಯ ಮುಖಂಡ ಅರುಣ್ ಜೇಟ್ಲಿ ಮಂಗಳವಾರ ಬೆಂಗಳೂರಿಗೆ ಬಂದರು.2 ದಿನ ನಗರದಲ್ಲೇ ಉಳಿಯುವ ಅವರು ಚುನಾವಣಾ ಸಿದ್ಧತೆ ಕುರಿತು ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ. ಮಂಗಳವಾರ ಇಡೀ ದಿನ ಪ್ರಣಾಳಿಕೆ ಸಮಿತಿ ಸೇರಿದಂತೆ ಇತರ ಸಮಿತಿಗಳ ಪ್ರಮುಖರ ಜತೆ ಸಮಾಲೋಚನೆ ನಡೆಸಿದರು.2008ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಿವಿಧ ಹಂತಗಳಲ್ಲಿ ಪಕ್ಷವನ್ನು ಸಜ್ಜುಗೊಳಿಸುವ ಜವಾಬ್ದಾರಿ ಜೇಟ್ಲಿ ಅವರದಾಗಿತ್ತು. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ಪ್ರಹ್ಲಾದ ಜೋಶಿ ಜೊತೆ ಜೇಟ್ಲಿ ಅವರು ಮಂಗಳವಾರ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.`ಕಳೆದ ಐದು ವರ್ಷಗಳ ಅವಧಿಯಲ್ಲಿ ಪಕ್ಷ ಹಲವು ಸವಾಲುಗಳನ್ನು ಎದುರಿಸಿರುವುದು ನಿಜ. ಆದರೆ ಅವುಗಳನ್ನು ಪಕ್ಷ ಈಗ ನಿವಾರಿಸಿಕೊಂಡಿದೆ' ಎಂದು ಸುದ್ದಿಗಾರರಿಗೆ ಜೇಟ್ಲಿ ತಿಳಿಸಿದರು. ಚುನಾವಣೆಯಲ್ಲಿ ಪಕ್ಷ ಗಮನಾರ್ಹ ಸಾಧನೆ ತೋರಲಿದೆ ಎಂದರು.ಪಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಕಳೆದುಕೊಂಡಿದೆಯೇ ಎಂಬ ಪ್ರಶ್ನೆಗೆ, `ನಡೆದು ಹೋದ ಸಂಗತಿಗಳ ಬಗ್ಗೆ ಈಗ ಚರ್ಚೆ ಅನಗತ್ಯ' ಎಂದು ಉತ್ತರಿಸಿದರು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಆಡಳಿತ ಇರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ನಾಯಕರು ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.`ಮೋದಿ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರು. ಅವರ ಮಾತುಗಳನ್ನು ಅತ್ಯಂತ ಗಂಭೀರವಾಗಿ ಮತ್ತು ವಿಶ್ಲೇಷಣಾತ್ಮಕವಾಗಿ ಕೇಳುವ ದೊಡ್ಡ ವರ್ಗ ಇದೆ. ಮೋದಿ ಜನಪ್ರಿಯತೆಗೆ ಇದೇ ಸಾಕ್ಷಿ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ದೇಶದಾದ್ಯಂತ ಮೋದಿ ಅಲೆ ಎದ್ದಿದೆ. ಕಾಂಗ್ರೆಸ್‌ನವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವವರೆಗೂ, ತನ್ನ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸಬಾರದು ಎಂಬ ನಿಲುವನ್ನು ಬಿಜೆಪಿ ಹೊಂದಿದೆಯೇ?' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಬಿಜೆಪಿ ನಾಯಕರು ಸದ್ಯಕ್ಕೆ ಯಾವ ವ್ಯಕ್ತಿಯನ್ನೂ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ' ಎಂದರು.

ಪ್ರತಿಕ್ರಿಯಿಸಿ (+)