ಗುರುವಾರ , ನವೆಂಬರ್ 14, 2019
18 °C

`ಪ್ರಣಾಳಿಕೆ: ಮಕ್ಕಳ ಹಕ್ಕು ನಿರ್ಲಕ್ಷ್ಯ'

Published:
Updated:

ಗುಲ್ಬರ್ಗ: ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಚಕಾರವೆತ್ತಿಲ್ಲ ಎಂದು ಸಾಮಾಜಿಕ ಪರಿವರ್ತನಾ ಜನಾಂದೋಲನ ಖಂಡಿಸಿದೆ.ಜನಸಂಖ್ಯೆಯಲ್ಲಿ ಶೇ 45ರಷ್ಟಿರುವ 18 ವರ್ಷದೊಳಗಿನ ಮಕ್ಕಳ ಸಮಸ್ಯೆಗಳ ಕುರಿತು ಎಲ್ಲ ರಾಜಕೀಯ ಪಕ್ಷಗಳು ನಿರ್ಲಕ್ಷ ತೋರಿಸುತ್ತಿವೆ ಎಂದು ಸಾಮಾಜಿಕ ಪರಿವರ್ತನಾ ಜನಾಂದೋಲನದ ವಲಯ ಸಂಘಟಕ ವಿಠಲ್ ಚಿಕಣಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.ರಾಜ್ಯದ ಮಕ್ಕಳ ಅಪೌಷ್ಟಿಕತೆಯನ್ನು ಹೋಗಲಾಡಿಸಲು ನ್ಯಾಯಮೂರ್ತಿ ಎನ್.ಕೆ. ಪಾಟೀಲ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಜಾರಿಗೊಳಿಸಲು ಬದ್ಧರಾಗಿರುವುದಾಗಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಅಥವಾ ಮುಚ್ಚುವ ಶಿಫಾರಸಿನ ಪ್ರೊ.ಆರ್. ಗೋವಿಂದ್ ವರದಿ ಜಾರಿಗೊಳಿಸುವುದಿಲ್ಲ ಎಂದು ಜನರಿಗೆ ಬಹಿರಂಗವಾಗಿ ಹೇಳಬೇಕು ಎಂದ ಅವರು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕನ್ನು ಸಮರ್ಪಕವಾಗಿ ಜಾರಿಗೆ ತಂದರೆ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ ಸಾರ್ವತ್ರಿಕ ಶಿಕ್ಷಣ ಪದ್ಧತಿಯನ್ನು ಸಂರಕ್ಷಿಸಲು ಸಾಧ್ಯ ಎಂದರು.ಅಂಗನವಾಡಿ ಕೇಂದ್ರಗಳಲ್ಲಿ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ. ಮಕ್ಕಳ ಅಪೌಷ್ಟಿಕತೆ ಮತ್ತು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಣೆಗೆ ನೇಮಿಸಿದ ಸಮಿತಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಲಕ್ಷಾಂತರ ಮಕ್ಕಳು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.ಈ ಕುರಿತು ರಾಜ್ಯ ಘಟಕದ ವತಿಯಿಂದ ಎಲ್ಲ ರಾಜಕೀಯ ಪ್ಷಗಳಿಗೆ ಮನವಿ ಸಲ್ಲಿಸಿದ್ದು ಅವರು ಗಂಭೀರವಾಗಿ ಪರಿಗಣಿಸಿಲ್ಲ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಕ್ಕಳ ಹಕ್ಕುಗಳಿಗೆ ಆದ್ಯತೆ ನೀಡುವಂತೆ ಎಲ್ಲ ಮತಕ್ಷೇತ್ರದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದೆಂದು ಅವರು ತಿಳಿಸಿದರು.ಅತ್ಯಾಚಾರ- ಖಂಡನೆ: ನವದೆಹಲಿಯಲ್ಲಿ ಈಚೆಗೆ 5 ವರ್ಷದ ಬಾಲಕಿ ಮೇಲೆ ನಡೆದ ಅತ್ಯಚಾರ ಘಟನೆಯನ್ನು ಸಾಮಾಜಿಕ ಪರಿವರ್ತನಾ ಜನಾಂದೋಲನ ಖಂಡಿಸಿತು. ಪದೇಪದೇ ಮರುಕಳಿಸುತ್ತಿರುವ ಇಂತಹ ಘಟನೆಗಳಿಂದ ಮಹಿಳೆಯರಿಗೆ, ಹೆಣ್ಮಕ್ಕಳಿಗೆ ಈ ದೇಶದಲ್ಲಿ ರಕ್ಷಣೆಯೇ ಇಲ್ಲದಂತಾಗಿದೆ. ಅಲ್ಲಿನ ಪೊಲೀಸ್ ಅಧಿಕಾರಿಗಳನ್ನು ವಜಾ ಮಾಡಬೇಕು. ಮುಖ್ಯಮಂತ್ರಿ ಶೀಲಾ ದೀಕ್ಷಿತ್ ರಾಜೀನಾಮೆ ನೀಡಬೇಕು ಎಂದ ವಿಠಲ ಚಿಕಣಿ, ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳನ್ನು ಬಂಧಿಸಿ ಕೂಡಲೇ ಉಗ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.

ಸಿಸ್ಟರ್ ಐರಿನ್ ಲೋಬೊ, ಆನಂದರಾಜ, ರಾಹುಲ ಉಪಾಕಿ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)