ಗುರುವಾರ , ಜೂನ್ 17, 2021
23 °C
ಮೈಸೂರು– ಕೊಡಗು ಕ್ಷೇತ್ರ

ಪ್ರತಾಪ್‌ ಸ್ಪರ್ಧೆಗೆ ತೀವ್ರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು– ಕೊಡಗು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪತ್ರಕರ್ತ ಪ್ರತಾಪ್‌ ಸಿಂಹ ಅವರನ್ನು ಕಣಕ್ಕಿಳಿಸುವುದಕ್ಕೆ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ತೀವ್ರ ವಿರೋಧ ವ್ಯಕ್ತಪಡಿಸಿದರು.ವರಿಷ್ಠರ ನಿರ್ಧಾರದಿಂದಾಗಿ ಕಾರ್ಯ­ಕರ್ತರಲ್ಲಿ ಗೊಂದಲ ಉಂಟಾಗಿದೆ. ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕಿಳಿಸು­ವುದನ್ನು ಬಿಟ್ಟು ಹೊರಗಿನವರಿಗೆ ಮಣೆ ಹಾಕಿರುವುದು ತರವಲ್ಲ. ಇದರಿಂದಾಗಿ ಪಕ್ಷಕ್ಕೆ ಹಿನ್ನಡೆ­ಯಾಗುವ ಸಾಧ್ಯತೆಗಳೇ ಹೆಚ್ಚು. ಮೈಸೂರು– ಕೊಡಗು ಪ್ರತಿಷ್ಠಿತ ಕ್ಷೇತ್ರವಾಗಿದ್ದು, ವಿಧಾನ ಪರಿಷತ್‌ ಸದಸ್ಯ ಸಿ.ಎಚ್‌. ವಿಜಯಶಂಕರ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಆರ್‌. ಮಲ್ಲಿಕಾರ್ಜುನಪ್ಪ, ವಿರಾಜ­ಪೇಟೆ ಶಾಸಕ ಅಪ್ಪಚ್ಚು ರಂಜನ್‌ - ಇವರಲ್ಲಿ ಒಬ್ಬರನ್ನು ಪರಿಗಣಿಸ­ಬೇಕಿತ್ತು ಎಂದು ನಗರದ ಬಿಜೆಪಿ ಕಚೇರಿ­ಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಪಕ್ಷದ ಕಾರ್ಯಕರ್ತರಾಗಿ ದುಡಿ­ಯದ ಮತ್ತು ಕ್ಷೇತ್ರದ ಕಾರ್ಯಕರ್ತರು ಯಾರು ಎಂಬುದೇ  ಗೊತ್ತಿಲ್ಲ­ದವರನ್ನು ಪಕ್ಷದ ಅಭ್ಯರ್ಥಿ ಎಂದು ಹೇಳಿಕೊಂಡು ಮತ ಯಾಚಿಸುವುದು ಕಷ್ಟವಾಗುತ್ತದೆ ಎಂದು ಅಸಮಾ­ಧಾನ ವ್ಯಕ್ತಪಡಿಸಿದರು.ಪಕ್ಷದ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಹೇಮಂತ­ಕುಮಾರ್‌ ಗೌಡ ಮತ್ತು ನಗರ ಘಟಕದ ಅಧ್ಯಕ್ಷ ಇ.ಮಾರುತಿರಾವ್‌ ಪವಾರ್‌ ಮತ್ತು ಇತರ ಪದಾಧಿಕಾರಿಗಳು ಕಾರ್ಯಕರ್ತರನ್ನು ಸಮಾಧಾನ­ಗೊಳಿಸಿದರು.ಪ್ರತಾಪ್, ಶ್ರೀರಾಮುಲು ಇಂದು ಬಿಜೆಪಿಗೆ

ಬೆಂಗಳೂರು: ಬಿ.ಎಸ್‌.ಆರ್‌ ಕಾಂಗ್ರೆಸ್‌ ಸಂಸ್ಥಾ­ಪಕ ಬಿ.ಶ್ರೀರಾಮುಲು ಮತ್ತು ಪತ್ರಕರ್ತ ಪ್ರತಾಪ್‌ ಸಿಂಹ ಶುಕ್ರವಾರ ಬಿಜೆಪಿ ಸೇರಲಿದ್ದಾರೆ.ತಾವೇ ಸ್ಥಾಪಿಸಿದ ಪಕ್ಷದ ಸದಸ್ಯತ್ವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶ್ರೀರಾಮುಲು ಬಳ್ಳಾರಿಯಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ. ಬಿಎಸ್‌ಆರ್‌ ಕಾಂಗ್ರೆಸ್‌ ವಿಲೀ­ನಕ್ಕೆ ಬಿಜೆಪಿಯ ವರಿಷ್ಠರು ಒಪ್ಪಿಗೆ ಸೂಚಿಸಿಲ್ಲ.ಪ್ರತಾಪ್‌ ಸಿಂಹ ಅವರಿಗೆ ಮೈಸೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಸಿಕ್ಕಿದೆ.ಪಕ್ಷ ತೊರೆಯಲ್ಲ, ಸ್ವಕ್ಷೇತ್ರ ಬಿಟ್ಟು ಬೇರೆಲ್ಲೂ ಸ್ಪರ್ಧಿಸಲ್ಲ

ಬೆಂಗಳೂರು:
ಮೈಸೂರು ಕ್ಷೇತ್ರದ ಬಿಜೆಪಿ ಟಿಕೆಟನ್ನು ತಮಗೆ ತಪ್ಪಿಸಿ, ಪತ್ರಕರ್ತ ಪ್ರತಾಪ್‌ ಸಿಂಹ ಅವ­ರಿಗೆ ನೀಡಿರುವುದಕ್ಕೆ ವಿಧಾನ ಪರಿ­ಷತ್‌ ಸದಸ್ಯ ಸಿ.ಎಚ್‌.ವಿಜಯಶಂಕರ್‌ ಆಕ್ಷೇಪ ವ್ಯಕ್ತ­ಪಡಿಸಿದ್ದಾರೆ.‘ಸ್ಥಳೀಯ ಮಟ್ಟದಿಂದ ನನ್ನ ಹೆಸರು ಶಿಫಾರಸು ಆಗಿತ್ತು. ಅಂತಹದ್ದನ್ನು ಬಿಟ್ಟು ಬೇರೆ ಯಾರಿಗೊ ಟಿಕೆಟ್‌ ನೀಡಿದರೆ ಹೇಗೆ? ಪ್ರತಾಪ್‌ ಸಿಂಹ ಸ್ಥಳೀಯ­ರಲ್ಲ. ಅವರು ಯಾರು ಎಂದು ನಮ್ಮ ಪಕ್ಷದ ಜಿಲ್ಲಾ­ಧ್ಯಕ್ಷ­ರಿಗೇ ಗೊತ್ತಿಲ್ಲ. ಇನ್ನು ಕಾರ್ಯಕರ್ತರು ಮತ್ತು ಮತ­ದಾರರಿಗೆ ಹೇಗೆ ಪರಿಚಯಿಸುವುದು? ಇಂತಹ ತೀರ್ಮಾನ ಏಕೆ ತೆಗೆದುಕೊಂಡರು ಎನ್ನುವುದು ಇನ್ನೂ ಅರ್ಥವಾಗುತ್ತಿಲ್ಲ’ ಎಂದು ‘ಪ್ರಜಾವಾಣಿ’ ಜತೆ ಅನಿಸಿಕೆ ಹಂಚಿಕೊಂಡರು.‘ಟಿಕೆಟ್‌ ಸಿಗದಿದ್ದರೂ ನಾನು ಬಿಜೆಪಿ ಬಿಡುವು­ದಿಲ್ಲ. ಹಾಗೆಯೇ ಹಾಸನದಿಂದಲೂ ಸ್ಪರ್ಧಿಸು­ವು­ದಿಲ್ಲ. ಮುಂದೇನು ಮಾಡಬೇಕು ಎನ್ನುವುದನ್ನು ಸ್ಥಳೀಯ ಮುಖಂಡರ ಜತೆ ಚರ್ಚಿಸಿದ ನಂತರ ತೀರ್ಮಾನಿ­ಸುತ್ತೇನೆ’ ಎಂದು ಹೇಳಿದರು.

 

ಸಿಂಹ ಯಾರೆಂಬುದು ಗೊತ್ತಿಲ್ಲ

ಕ್ಷೇತ್ರದ ಜನತೆಗಿರಲಿ ವೈಯುಕ್ತಿಕವಾಗಿ ಪ್ರತಾಪ್‌ ಸಿಂಹ ಅವರ ಹಿನ್ನೆಲೆ ಏನು ಎಂಬುದು ನನಗೇ ತಿಳಿದಿಲ್ಲ. ವರಿಷ್ಠರು ಯಾಕೆ ಈ ನಿರ್ಧಾರ ತಳೆದರು ಎಂದು ತಿಳಿಯುತ್ತಿಲ್ಲ. ಹೊರಗಡೆಯವರನ್ನು ಕಣಕ್ಕಿಳಿಸುವುದನ್ನು ಒಪ್ಪುವುದಿಲ್ಲ.

–ಅಪ್ಪಚ್ಚು ರಂಜನ್‌, ಮಡಿಕೇರಿ ಶಾಸಕಮುಂದಿನ ನಡೆ ಇಂದು


ಬಿಜೆಪಿ ವರಿಷ್ಠರ ನಿರ್ಧಾರಕ್ಕೆ ಆಕ್ಷೇಪ ಇಲ್ಲ. ನನ್ನ ಚಿತ್ತ ಬೇರೆ ಕಡೆ ಹರಿದಿದೆ. ಶುಕ್ರವಾರ ನಿರ್ಧಾರ ಪ್ರಕಟಿಸುತ್ತೇನೆ.

–ಕೆ.ಆರ್‌. ಮಲ್ಲಿಕಾರ್ಜುನಪ್ಪ, ವಿಧಾನ ಪರಿಷತ್‌ ಮಾಜಿ ಸದಸ್ಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.