ಮಂಗಳವಾರ, ಮೇ 24, 2022
24 °C

ಪ್ರತಿಕೂಲ ಹವಾಮಾನ: ಹೆಲಿಕಾಪ್ಟರ್ ಬಲವಂತ ಭೂಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಇಸ್ಲಾಮಾಬಾದ್ (ಐಎಎನ್‌ಎಸ್): ಪ್ರತಿಕೂಲ ಹವಾಮಾನದ ಪರಿಣಾಮವಾಗಿ ನಾಲ್ವರು ಅಧಿಕಾರಿಗಳೊಂದಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭೂಸ್ಪರ್ಶ ಮಾಡಿದ್ದ ಹೆಲಿಕಾಪ್ಟರನ್ನು ಸಂಜೆಯ ವೇಳೆಗೆ ಪಾಕ್ ಸೇನಾ ಅಧಿಕಾರಿಗಳು ಭಾರತಕ್ಕೆ ಹಿಂತಿರುಗಲು ಅವಕಾಶ ಕಲ್ಪಿಸುವ ಮೂಲಕ ಘಟನೆ ಸುಖಾಂತ್ಯ ಕಂಡಿದೆ.ಪೈಲಟ್ ತೆಗೆದುಕೊಂಡ ತಪ್ಪು ನಿರ್ಧಾರದಿಂದಾಗಿ ಚೇತಕ್ ಹೆಲಿಕಾಪ್ಟರ್ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘನೆ ಮಾಡಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭೂಸ್ಪರ್ಶ ಮಾಡಿತ್ತು ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.ವಿದೇಶಾಂಗ ಇಲಾಖೆ ಹಾಗೂ ಮಿಲಿಟರಿ ಕಾರ್ಯಾಚರಣೆಯ ಮಹಾ ನಿರ್ದೇಶಕರು ಪಾಕ್‌ನ ತಮ್ಮ ಸಹವರ್ತಿಗಳ ಜತೆ ಸಂಪರ್ಕ ಸಾಧಿಸಿ ಮಾತುಕತೆ ನಡೆಸಿದ ನಂತರ ಪಾಕ್ ಅಧಿಕಾರಿಗಳು ತಮ್ಮ ವಶದಲ್ಲಿದ್ದ ಭಾರತೀಯ ಸೇನೆಯ ಅಧಿಕಾರಿಗಳು ಹಾಗೂ ಹೆಲಿಕಾಪ್ಟರ್‌ನ್ನು ವಾಪಾಸ್ ಕಳುಹಿಸಿಕೊಡಲು ಸಮ್ಮತಿಸಿದರು.

ಪಾಕ್‌ನ ಈ ನಿಲುವಿಗೆ ಸಂತಸ ವ್ಯಕ್ತಪಡಿಸಿರುವ ಭಾರತ, ಈಗ ನಿರಾಳವಾಗಿದೆ. ಪಾಕ್‌ನ ಕ್ರಮವನ್ನು ಪ್ರಶಂಸಿಸುವುದಾಗಿ ಹೇಳಿದೆ.ಜಮ್ಮು-ಕಾಶ್ಮೀರದ ಲೇಹ್‌ನಿಂದ ಗಡಿ ನಿಯಂತ್ರಣ ರೇಖೆ ಸಮೀಪದ ಕಾರ್ಗಿಲ್ ವಲಯದ ಡ್ರಾಸ್ ಸೆಕ್ಟರ್‌ಗೆ ಹೆಲಿಕಾಪ್ಟರ್ ಹೊರಟಿದ್ದ ಹೆಲಿಕಾಪ್ಟರ್‌ನಲ್ಲಿ ಇಬ್ಬರು ಪೈಲಟ್‌ಗಳು  ಒಬ್ಬರು ಕಿರಿಯ ದರ್ಜೆ ಅಧಿಕಾರಿ ಹಾಗೂ ಎಂಜಿನಿಯರ್ ಇದ್ದರು.ದೇಶದ ವಾಯುಗಡಿಯನ್ನು ಉಲ್ಲಂಘನೆ ಮಾಡಿದ ಭಾರತೀಯ ಹೆಲಿಕಾಪ್ಟರನ್ನು ಪಾಕ್ ಆಕ್ರಮಿತ ಕಾಶ್ಮೀರದ ಸ್ಕರ್ದ್ ಸೆಕ್ಟರ್‌ನಲ್ಲಿ ಬಲವಂತವಾಗಿ ಭೂಸ್ಪರ್ಶ ಮಾಡುವಂತೆ ಮಾಡಲಾಯಿತು ಎಂದು ಪಾಕಿಸ್ತಾನ ಸೇನೆಯ ಅಧಿಕಾರಿಗಳು ತಿಳಿಸಿದ್ದರು.`ನಮ್ಮ ವಾಯುಸೀಮೆಯ ತೀರಾ ಒಳಭಾಗಕ್ಕೆ ಭಾರತೀಯ ಸೇನೆಯ ಹೆಲಿಕಾಪ್ಟರ್ ಬಂದ ಕಾರಣ ಅದನ್ನು ಬಲ ವಂತವಾಗಿ ಇಳಿಯುವಂತೆ ಮಾಡಲಾಯಿತೆಂದು ಪಾಕ್ ಸೇನೆಯ ವಕ್ತಾರ ಮೇಜರ್ ಜನರಲ್ ಅಖ್ತರ್ ಅಬ್ಬಾಸ್ ಹೇಳಿದ್ದರು. ಒಮ್ಮೆ ಹೆಲಿಕಾಪ್ಟರ್ ಪಾಕ್ ಭೂಪ್ರದೇಶದಲ್ಲಿ ಇಳಿಯುತ್ತಿದ್ದಂತೆಯೇ ಪಾಕ್‌ನ ಸೇನಾ ಅಧಿಕಾರಿಗಳು, ಅದರಲ್ಲಿದ್ದ ಎಲ್ಲಾ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.