ಶುಕ್ರವಾರ, ಜನವರಿ 24, 2020
21 °C
ದೇವಯಾನಿ ಪ್ರಕರಣ

ಪ್ರತಿಕ್ರಿಯೆ ಸಿಕ್ಕಿಲ್ಲ: ಭಾರತ ಸ್ಪಷನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಬಂಧನ, ವಿವಸ್ತ್ರಗೊಳಿಸಿ ತಪಾಸಣೆ ನಡೆಸಿದ ಪ್ರಕರಣದ ಬಗ್ಗೆ ಅಮೆರಿಕದ ವಿರುದ್ಧದ ನಿಲುವನ್ನು ಭಾರತ ಮತ್ತಷ್ಟು ಬಿಗಿಗೊಳಿಸಿದೆ.

ದೇವಯಾನಿ ಪ್ರಕರಣದ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ವಿಷಾದ ವ್ಯಕ್ತಪಡಿಸಿದ್ದಾಗಿಯೂ, ದೇವಯಾನಿ ಅವರ ಮನೆಕೆಲಸದಾಕೆ ಕಾಣೆಯಾಗಿರುವ ಸಂಬಂಧ ಬರೆದ ಹಲವು ಪತ್ರಗಳಿಗೆ ಅಮೆರಿಕ ಸ್ಪಂದಿಸಿಲ್ಲ ಎಂದು ಭಾರತ ಆರೋಪಿಸಿದೆ.

ಖೋಬ್ರಾಗಡೆ ಅವರ ವಿಚಾರಣೆಯಲ್ಲಿ ‘ಎಲ್ಲೆ ಮೀರಿದ’ ಬಗ್ಗೆ ಕೆರಿ ಬುಧವಾರವಷ್ಟೇ ವಿಷಾದ ವ್ಯಕ್ತಪಡಿಸಿದ್ದಾರೆ.

ದೇವಯಾನಿ ಪ್ರಕರಣ ಸಂಬಂಧ ಅಮೆರಿಕ ‘ಭಿನ್ನ’ ಹೇಳಿಕೆ ನೀಡಿದ ಬೆನ್ನಲ್ಲೆ, ಭಾರತೀಯ ಮೂಲದ ವಕೀಲ ಪ್ರೀತ್ ಭರಾರಾ ಅವರು ಭಾರತೀಯ ರಾಜತಾಂತ್ರಿಕ ಅಧಿಕಾರಿಯ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ದೇವಯಾನಿ ಅವರನ್ನು ವಿವಸ್ತ್ರಗೊಳಿಸಿ ತಪಾಸಣೆ ನಡೆಸಲಾಗಿತ್ತು ಎಂದು ಒಪ್ಪಿಕೊಂಡಿರುವ ಭರಾರಾ, ಮನೆಕೆಲಸದಾಕೆಯ ಕುಟುಂಬವನ್ನು ಅಮೆರಿಕಕ್ಕೆ ‘ಕರೆಯಿಸಿಕೊಂಡಿರುವ’ ವರದಿಯನ್ನು ಖಚಿತ ಪಡಿಸಿದ್ದಾರೆ. ಅವರ ಕುಟುಂಬ ಭಾರತದಲ್ಲಿದ್ದಿದ್ದರೇ ಅವರನ್ನು ‘ಬಾಯಿ ಮುಚ್ಚಿಸಲು’ ಯತ್ನಿಸಲಾಗುತ್ತಿತ್ತು ಎಂದೂ ಆರೋಪಿಸಿದ್ದಾರೆ.

‘ಮನೆಕೆಲಸದಾಕೆಯನ್ನು ಪತ್ತೆಮಾಡಿ ಅವರು ದೇವಯಾನಿಗೆ ಮಾಡುತ್ತಿರುವ ಬ್ಯಾಕ್‌ಮೇಲ್‌ ಅನ್ನು ತಡೆಯುವಂತೆ ಅಮೆರಿಕ ಸರ್ಕಾರಕ್ಕೆ ನಾವು ಸರಣಿಯಾಗಿ ಮನವಿ ಮಾಡಿಕೊಂಡಿದ್ದೆವು. ಆದರೆ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ’ ಎಂದು ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ಗುರುವಾರ ಸ್ಪಷ್ಟಪಡಿಸಿದೆ.

ದೇವಯಾನಿ ಪ್ರಕರಣವನ್ನು ಭಾರತ ನಿರ್ವಹಣೆ ಮಾಡುತ್ತಿರುವ ರೀತಿಯನ್ನು ಭರಾರಾ ಅವರು ಟೀಕಿಸಿದ ಬೆನ್ನಲ್ಲೆ ರಾಯಭಾರ ಕಚೇರಿ ಈ ಹೇಳಿಕೆ ನೀಡಿದೆ.

ಪ್ರಕರಣದ ಅವಲೋಕನ: ದೇವಯಾನಿ ಪ್ರಕರಣದಲ್ಲಿ ನಡೆದಿರುವ ‘ಅಚಾತುರ್ಯ’ದ ಬಗ್ಗೆ ಅವಲೋಕನ ಮಾಡಲಾಗುತ್ತಿದೆ ಎಂದಿರುವ ಅಮೆರಿಕ, ಈ ಪ್ರಕರಣ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಪರಿಣಾಮ ಬೀರದು ಎಂದು ಗುರುವಾರ ವಿಶ್ವಾಸ ವ್ಯಕ್ತಪಡಿಸಿದೆ.

‘ಅಪರೂಪದ ಪ್ರಕರಣ ಎನಿಸಿರುವ ಈ ಘಟನೆ (ದೇವಯಾನಿ ಪ್ರಕರಣ) ನಮ್ಮ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರದು’ ಎಂದು ಶ್ವೇತ ಭವನದ ಮಾಧ್ಯಮ ವಕ್ತಾರ ಜೇ ಕಾರ್ನಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)