ಶುಕ್ರವಾರ, ನವೆಂಬರ್ 15, 2019
22 °C

ಪ್ರತಿಧ್ವನಿಸುತ್ತಿದೆ ಜಾತಿ ಇಲ್ಲಿ...

Published:
Updated:

ವಿಜಾಪುರ: ಒಳ ಒಪ್ಪಂದ, ಸೋಲಿಸುವ ಆಟದ ಬಲೆ ಈ ಸಲದ ಚುನಾವಣೆಯಲ್ಲಿ ಬಹುತೇಕ ಅಭ್ಯರ್ಥಿಗಳನ್ನು ಸುತ್ತಿಕೊಂಡಿದೆ. ಜಾತಿ ವಿಷಯ ಗೋಲಗುಮ್ಮಟದ ಪಿಸುಗುಟ್ಟುವ ಗ್ಯಾಲರಿಗಿಂತಲೂ ಹೆಚ್ಚಾಗಿ ಪ್ರತಿಧ್ವನಿಸುತ್ತಿದೆ.ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಬಾರಿ ಬಿಜೆಪಿ ಐದು, ಕಾಂಗ್ರೆಸ್ ಮೂರು ಸ್ಥಾನ ಪಡೆದಿದ್ದವು. ನಾಗಠಾಣದ ಬಿಜೆಪಿ ಶಾಸಕ ವಿಠ್ಠಲ ಕಟಕಧೋಂಡ ಕೆಜೆಪಿ ಅಭ್ಯರ್ಥಿಯಾಗಿದ್ದಾರೆ. ಮುದ್ದೇಬಿಹಾಳ ಕ್ಷೇತ್ರದ ಜನತಾ ಪರಿವಾರದ ನಾಯಕಿ ವಿಮಲಾಬಾಯಿ ದೇಶಮುಖ ಕೊನೆ ಗಳಿಗೆಯಲ್ಲಿ ಕೆಜೆಪಿ ಸೇರಿದ್ದಾರೆ. ಬಿಜೆಪಿ ಟಿಕೆಟ್ ವಂಚಿತ ಇಂಡಿ ಶಾಸಕ ಡಾ.ಸಾರ್ವಭೌಮ ಬಗಲಿ ಬಂಡಾಯದ ಬಾವುಟ ಹಾರಿಸಿದ್ದಾರೆ.

ಮುದ್ದೇಬಿಹಾಳ: ಮುದ್ದೇಬಿಹಾಳ ಕ್ಷೇತ್ರದಲ್ಲಿ `ಧಣಿ'ಗಳ (ದೇಶಮುಖ-ನಾಡಗೌಡ) ಮಧ್ಯೆ ಹಣಾಹಣಿ ನಡೆಯುತ್ತಿದ್ದರೂ ಈ ಬಾರಿ ಅದು ಜಾತಿ ಸ್ವರೂಪ ಪಡೆದುಕೊಂಡಿದೆ. ವಿಮಲಾಬಾಯಿ ದೇಶಮುಖರಿಗೆ ಜೆಡಿಎಸ್ ಹಾಗೂ ಎಂ.ಎಸ್. ಪಾಟೀಲರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಅವರು (ಇಬ್ಬರೂ ಪಂಚಮಸಾಲಿ) ಒಂದಾಗಿದ್ದಾರೆ. ಕೆಜೆಪಿ ಅಭ್ಯರ್ಥಿ ವಿಮಲಾಬಾಯಿ ಅವರನ್ನು `ಲಿಂಗಾಯತ ಅಭ್ಯರ್ಥಿ' ಎಂದೇ ಬಿಂಬಿಸಲಾಗುತ್ತಿದೆ.ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿದ್ದ ಮಂಗಳಾದೇವಿ ಬಿರಾದಾರ ಕಾಂಗ್ರೆಸ್ ಸೇರಿದ್ದು ಆ ಪಕ್ಷದ ಅಭ್ಯರ್ಥಿ ಸಿ.ಎಸ್. ನಾಡಗೌಡ ಅವರಿಗೆ ಸ್ವಲ್ಪ ಬಲ ತಂದುಕೊಟ್ಟಿದೆ. ಆದರೆ, ಅವರದ್ದೇ ಸಮುದಾಯದ (ರಡ್ಡಿ) ಪ್ರಭು ದೇಸಾಯಿ (ಜೆಡಿಎಸ್), ದೇವರ ಹಿಪ್ಪರಗಿ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪಾಟೀಲ ನಡಹಳ್ಳಿ ಅವರ ಸಹೋದರ ಶಾಂತಗೌಡ ಪಾಟೀಲ (ಪಕ್ಷೇತರ) ಕಣದಲ್ಲಿರುವುದು ಚಿಂತೆಗೀಡು ಮಾಡಿದೆ.ಕುರುಬ ಸಮಾಜದವರು ಈ ಕ್ಷೇತ್ರದಲ್ಲಿ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಆ ಸಮಾಜಕ್ಕೆ ಸೇರಿದ ಮಲಕೇಂದ್ರಗೌಡ ಪಾಟೀಲ (ಬಿಜೆಪಿ), ನಿಂಗಪ್ಪ ಬಪ್ಪರಗಿ (ಬಿಎಸ್‌ಆರ್ ಕಾಂಗ್ರೆಸ್) ಕಣದಲ್ಲಿದ್ದಾರೆ.`ಪಕ್ಕದ ಜಿಲ್ಲೆಯ ಸ್ವಾಮೀಜಿಯೊಬ್ಬರು ಲಿಂಗಾಯತ ಮತದಾರರು ಮತ್ತು ಮುಖಂಡರನ್ನು ಒಂದುಗೂಡಿಸಲು ಯತ್ನಿಸುತ್ತಿದ್ದಾರೆ. ಈ ಜಾತಿ ಸಮೀಕರಣದ ಯಶಸ್ಸು-ವ್ಯತಿರಿಕ್ತ ಪರಿಣಾಮ ಫಲಿತಾಂಶವನ್ನು ನಿರ್ಧರಿಸಲಿದೆ' ಎನ್ನುತ್ತಾರೆ ಅಲ್ಲಿಯ ಹಿರಿಯರು.ವಿಜಾಪುರ ನಗರ: ವಿಜಾಪುರ ನಗರ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರೇ ನಿರ್ಣಾಯಕ ಪಾತ್ರ ವಹಿಸಲಿರುವುದು ಈ ಬಾರಿಯ ವಿಶೇಷ. ಬಿಜೆಪಿ ನಾಯಕರಾಗಿದ್ದ ಬಸನಗೌಡ ಪಾಟೀಲ ಯತ್ನಾಳ ಇಲ್ಲಿ ಜೆಡಿಎಸ್ ಅಭ್ಯರ್ಥಿ. ಹಿಂದೆ ಈ ಕ್ಷೇತ್ರದ ಶಾಸಕರಾಗಿದ್ದ ಅವರು, ಸ್ವಂತ ಬಲವನ್ನೇ ನೆಚ್ಚಿಕೊಂಡಿದ್ದಾರೆ.ಬಿಜೆಪಿಯಿಂದ ಮೂರನೇ ಬಾರಿ ಆಯ್ಕೆ ಬಯಸಿರುವ ಅಪ್ಪು ಪಟ್ಟಣಶೆಟ್ಟಿ ವಿರುದ್ಧ ಆಡಳಿತ ವಿರೋಧಿ ಅಲೆ ಪ್ರಬಲವಾಗಿದೆ. `ಮುಸ್ಲಿಮರನ್ನು ಓಲೈಸುತ್ತಿದ್ದಾರೆ' ಎಂದು ಹಿಂದೂ ಸಂಘಟನೆಯವರು ಮುನಿಸಿಕೊಂಡಿದ್ದಾರೆ. ಕಾಂಗ್ರೆಸ್ ಹೊಸ ಮುಖ, ವ್ಯಾಪಾರಿ ಡಾ.ಎಂ.ಎಂ. ಬಾಗವಾನ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸಿದ್ದ ಮುಸ್ಲಿಂ ನಾಯಕರ ಮನಸ್ಸು ಒಂದಾಗಿಲ್ಲ. ಆದರೆ, ಆ ಸಮುದಾಯದ ಮತದಾರರು ಒಟ್ಟಾಗುತ್ತಿದ್ದಾರೆ. ಸತತ ಎರಡು ಸೋಲಿನ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದಾರೆ.ಮುಸ್ಲಿಂ ಸಮಾಜದ ಕೆಲ ಪ್ರಭಾವಿಗಳೊಂದಿಗೆ ಬಿಜೆಪಿ ಅಭ್ಯರ್ಥಿ ಹೊಂದಿರುವ `ದೂರ ದೃಷ್ಟಿಯ ಸ್ನೇಹ' ಹಾಗೂ ತಂತ್ರಗಾರಿಕೆ ಫಲಿಸಿದರೆ ಅಚ್ಚರಿಯ ಫಲಿತಾಂಶ ಬರಬಹುದು. ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಒಲಿದರೆ ಯತ್ನಾಳರಿಗೆ ಅನುಕೂಲ.

ಇಂಡಿ: ಇಂಡಿ ಕ್ಷೇತ್ರದ ಚುನಾವಣೆ `ಅನುಕಂಪ' ಮತ್ತು `ಪ್ರತಿಷ್ಠೆ'ಯ ಮಧ್ಯೆ ಗಿರಕಿ ಹೊಡೆಯುತ್ತಿದೆ.ಕಳೆದ ಚುನಾವಣೆಯಲ್ಲಿ 571 ಮತಗಳ ಅಂತರದಿಂದ ಸೋತಿದ್ದ ಯಶವಂತರಾಯಗೌಡ ಪಾಟೀಲ  ಕಾಂಗ್ರೆಸ್ ಅಭ್ಯರ್ಥಿ. `ಆಂತರಿಕ ಬಂಡಾಯ' ಇದ್ದರೂ, `ಅನುಕಂಪ' ಮತ್ತು ಸಿದ್ದರಾಮಯ್ಯ ಅವರ ದೆಸೆಯಿಂದ ಕುರುಬ ಸಮಾಜ ಬೆನ್ನಿಗಿರುವುದು ಅವರಿಗೆ ಅನುಕೂಲವಾಗಿ ಪರಿಣಮಿಸಿದೆ.ಬಿಜೆಪಿ ಟಿಕೆಟ್ ವಂಚಿತ ಶಾಸಕ ಡಾ.ಸಾರ್ವಭೌಮ ಬಗಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದು, ಬಿಜೆಪಿ ಅಭ್ಯರ್ಥಿ ಶ್ರೀಶೈಲಗೌಡ ಬಿರಾದಾರ ಅವರಿಗೆ ತೊಡಕಾಗಿದ್ದಾರೆ. ಮಾಜಿ ಶಾಸಕ ರವಿಕಾಂತ ಪಾಟೀಲ ಕೆಜೆಪಿ ಅಭ್ಯರ್ಥಿ. ಈ ಮೂವರೂ ಒಂದೇ ಸಮುದಾಯಕ್ಕೆ (ಪಂಚಮಸಾಲಿ) ಸೇರಿದವರು.`ನಮ್ಮ ಸಮಾಜಕ್ಕೆ ಟಿಕೆಟ್ ನೀಡಿಲ್ಲ' ಎಂದು ಗಾಣಿಗ ಸಮಾಜದ ಕೆಲ ಕಾಂಗ್ರೆಸ್ ನಾಯಕರು ಬಂಡೆದ್ದಿದ್ದರು. ಅದೇ ಸಮುದಾಯದ ಅಣ್ಣಪ್ಪ ಖೈನೂರ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಗಾಣಿಗ ಸಮಾಜದ ಮತಗಳ ವಿಭಜನೆ ತಡೆಯಲು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಬಾಬುರಾವ್ ಮೇತ್ರಿ ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಹೀಗಾಗಿ ಖೈನೂರ ಸ್ವಜಾತಿ ಮತಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಬಸವನ ಬಾಗೇವಾಡಿ: ಬಸವನ ಬಾಗೇವಾಡಿಯಲ್ಲಿ ಮಾಜಿ ಶಾಸಕ ಶಿವಾನಂದ ಪಾಟೀಲ (ಕಾಂಗ್ರೆಸ್) ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ (ಬಿಜೆಪಿ) ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಚುನಾವಣೆಯಂತೆ ಈ ಬಾರಿಯೂ ಇಲ್ಲಿ ಆಡಳಿತ ವಿರೋಧಿ ಅಲೆ ಪ್ರಬಲವಾಗಿದೆ.ಜೆಡಿಎಸ್‌ನ ಸೋಮನಗೌಡ (ಅಪ್ಪು) ಪಾಟೀಲ ಮನಗೂಳಿ ಮತ್ತು ಶಿವಾನಂದ (ಪಂಚಮಸಾಲಿ), ಕೆಜೆಪಿಯ ಸಂಗರಾಜ ದೇಸಾಯಿ ಮತ್ತು ಬೆಳ್ಳುಬ್ಬಿ (ಗಾಣಿಗ) ಒಂದೇ ಸಮುದಾಯದವರು. ಯಾರಿಗೆ ಯಾರು ತೊಡರುಗಾಲು ಹಾಕುತ್ತಾರೆ ಎಂಬುದೇ ಇಲ್ಲಿಯ ಕುತೂಹಲ. ಬಬಲೇಶ್ವರ: ಬಬಲೇಶ್ವರದಲ್ಲಿ ಹ್ಯಾಟ್ರಿಕ್ ಸಾಧನೆಯ ನಿರೀಕ್ಷೆಯಲ್ಲಿರುವ ಕಾಂಗ್ರೆಸ್‌ನ ಎಂ.ಬಿ. ಪಾಟೀಲ ಅವರಿಗೆ ಜೆಡಿಎಸ್‌ನ ವಿಜುಗೌಡ ಪಾಟೀಲ ಪ್ರಮುಖ ಎದುರಾಳಿ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ  ಎಂ.ಬಿ. ಅವರಿಗೆ ಬಲ ತಂದುಕೊಟ್ಟಿವೆ. ವಿರೋಧಿ ಮತಗಳನ್ನು ಒಟ್ಟುಗೂಡಿಸುವಲ್ಲಿ ತೊಡಗಿರುವ ವಿಜುಗೌಡರಿಗೆ ಅವರದೇ ಸಮುದಾಯದ ಎಂ.ಎಸ್. ರುದ್ರಗೌಡರ (ಬಿಜೆಪಿ) ಪ್ರಮುಖ ಅಡ್ಡಿ.ಸಿಂದಗಿ: `ಒಬ್ಬರಿಗೆ ಒಂದೇ ಅವಕಾಶ' ನೀಡಿದ ಸಿಂದಗಿಯಲ್ಲಿ ಹಳೆ ಮುಖಗಳೇ ಹೆಚ್ಚಾಗಿವೆ. ಬಿಜೆಪಿಯ ರಮೇಶ ಭೂಸನೂರ ಅವರಿಗೆ ಅವರದ್ದೇ ಜಾತಿಯ ಕೆಜೆಪಿಯ ಗುರನಗೌಡ ಪಾಟೀಲ (ಹೊಸ ಮುಖ) ತೊಡಕಾಗಿದ್ದಾರೆ. ಕಾಂಗ್ರೆಸ್‌ನ ಶರಣಪ್ಪ ಸುಣಗಾರ ಅವರಿಗೆ ಮೇಲ್ವರ್ಗದ ಮತಗಳದ್ದೇ ಚಿಂತೆ. 6ನೇ ಬಾರಿ ಕಣಕ್ಕಿಳಿದಿರುವ ಜೆಡಿಎಸ್‌ನ ಎಂ.ಸಿ. ಮನಗೂಳಿ ಅವರಿಗೆ ಜೆಡಿಯು ಪಕ್ಷದ  ದ್ಯಾವಪ್ಪಗೌಡ ಪಾಟೀಲ ಅಡ್ಡಿಯಾಗದಿದ್ದರೆ ಮತ್ತು ಅನುಕಂಪದ ಮತ ಬಂದರೆ ಅನುಕೂಲ.ದೇವರ ಹಿಪ್ಪರಗಿ: ದೇವರ ಹಿಪ್ಪರಗಿ ಕ್ಷೇತ್ರದಲ್ಲಿ  ಎ.ಎಸ್. ಪಾಟೀಲ ನಡಹಳ್ಳಿ ಕಾಂಗ್ರೆಸ್ಸಿನಿಂದ ಮತ್ತೆ ಸ್ಪರ್ಧಿಸಿದ್ದಾರೆ. `ಭರವಸೆ ಈಡೇರಿಸಿಲ್ಲ. ಜನರ ಕೈಗೆ ಸಿಗುವುದಿಲ್ಲ' ಎಂಬ ಕೋಪದ ಅಲೆ ಇದ್ದರೂ, `ನಮ್ಮೂರಲ್ಲಿ ಜಾತಿಗೊಂದು ಗುಡಿ ಕಟ್ಟಿಸಿದ್ದಾರೆ' ಎನ್ನುವವರೂ ಇದ್ದಾರೆ. ಜೆಡಿಎಸ್ ಇಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯನ್ನು (ರೇಷ್ಮಾ ಪಡೇಕನೂರ) ಕಣಕ್ಕಿಳಿಸಿದೆ. ಅವರು ಹೆಚ್ಚು ಮತ ಪಡೆದರೆ ಮತ್ತು ಮುದ್ದೇಬಿಹಾಳ ಕ್ಷೇತ್ರದಲ್ಲಿಯ `ಕುಸ್ತಿ' ವ್ಯತಿರಿಕ್ತ ಪರಿಣಾಮ ಬೀರಿದರೆ ನಡಹಳ್ಳಿ ಅವರಿಗೆ ತೊಂದರೆಯಾಗಬಹುದು.ಬಿಜೆಪಿಯ ಸೋಮನಗೌಡ ಪಾಟೀಲ (ಸಾಸನೂರ), ಕೆಜೆಪಿಯ ಭೀಮನಗೌಡ (ರಾಜುಗೌಡ) ಬ. ಪಾಟೀಲ ಇಬ್ಬರೂ `ಸರಳ ವ್ಯಕ್ತಿಗಳು' ಎಂದು ಮತದಾರರು ಹೇಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಅವರ ತಂದೆ ಬಿ.ಎಸ್. ಪಾಟೀಲ ಸಾಸನೂರ ಅವರ (ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಹಿಂದಿನ ಹೂವಿನ ಹಿಪ್ಪರಗಿ  ಕ್ಷೇತ್ರ ಪ್ರತಿನಿಧಿಸಿದ್ದರು) ಬಲವೂ ಇದೆ. `ಸರಳ' ಮತ್ತು `ಸಿರಿವಂತಿಕೆ'ಯಲ್ಲಿ ಮತದಾರ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದು ಫಲಿತಾಂಶವನ್ನು ನಿರ್ಧರಿಸಲಿದೆ.ನಾಗಠಾಣ: ಸ್ವಕ್ಷೇತ್ರ ನಾಗಠಾಣದಲ್ಲಿ ಸಂಸದ ರಮೇಶ ಜಿಗಜಿಣಗಿ ತಮ್ಮ ಅಳಿಯ (ಅಕ್ಕನ ಮಗ) ನಾಗೇಂದ್ರ ಮಾಯವಂಶಿ ಅವರನ್ನು ಬಿಜೆಪಿಯಿಂದ ಕಣಕ್ಕಿಸಿ ಅವರ ಆಯ್ಕೆಯನ್ನು ಪ್ರತಿಷ್ಠೆಯ ವಿಷಯ ಮಾಡಿಕೊಂಡಿದ್ದಾರೆ. ಆದರೆ, ತಮ್ಮ ಸಮುದಾಯದ ಇನ್ನೊಂದು ಪಂಗಡದ (ಬಲಗೈ) ಕೆಂಗಣ್ಣಿಗೂ ಗುರಿಯಾಗಿದ್ದಾರೆ.ಕಾಂಗ್ರೆಸ್‌ನ ಎಚ್.ಆರ್. ಆಲಗೂರ (ರಾಜು) ಬಲಗೈ ಪಂಗಡಕ್ಕೆ ಸೇರಿದವರು. ಪರಿಸ್ಥಿತಿಯ ಲಾಭ ಪಡೆಯಲು ಜೆಡಿಎಸ್‌ನ ದೇವಾನಂದ ಚವ್ಹಾಣ (ಲಂಬಾಣಿ) ಹವಣಿಸುತ್ತಿದ್ದಾರೆ. ಕೆಜೆಪಿಯ ವಿಠ್ಠಲ ಕಟಕಧೋಂಡ ಮತ್ತೆ ಕಣದಲ್ಲಿದ್ದಾರೆ. ಭವಿಷ್ಯ ನಿರ್ಧರಿಸಬೇಕಿರುವ ಮೇಲ್ಜಾತಿಯ ಮತದಾರರು ಗುಟ್ಟು ಬಿಟ್ಟುಕೊಡುತ್ತಿಲ್ಲ.

ಪ್ರತಿಕ್ರಿಯಿಸಿ (+)