ಗುರುವಾರ , ಏಪ್ರಿಲ್ 22, 2021
28 °C

ಪ್ರತಿನಿಧಿ, ಪೋಷಕರು ಮಾಡಬೇಕಾದುದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಸಾರ್ವತ್ರಿಕಗೊಳಿಸುವುದಕ್ಕಾಗಿ ಸರ್ಕಾರದ ಜೊತೆ ಜನಪ್ರತಿನಿಧಿ, ಸಮುದಾಯದ ಸಹಕಾರ ಪಡೆದು ಶಾಲೆಗಳಲ್ಲಿ ಭೌತಿಕ ಮತ್ತು ಗುಣಾತ್ಮಕ ಬದಲಾವಣೆ ತರುವುದಕ್ಕಾಗಿ ಆರಂಭದಲ್ಲಿ ಬುಧವಾರ, ಗುರುವಾರದಂದು ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲಿ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಮಕ್ಕಳ ಶಿಕ್ಷಣದ ಹಕ್ಕು ಕಾಯ್ದೆ ಅಡಿಯಲ್ಲಿ ಈ ಬಗ್ಗೆ ಜನಜಾಗೃತಿ ಹಾಗೂ ಜನಾಂದೋಲನಕ್ಕಾಗಿ ಬುಧವಾರದಂದು ಬೆಂಗಳೂರಿನಲ್ಲಿ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ಜಾಥಾ ಹಾಗೂ ಅಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. 2012-13ನೇ ಸಾಲಿನಿಂದ ಜಾರಿಯಾದ ಮಕ್ಕಳ ಶಿಕ್ಷಣ ಹಕ್ಕುಗಳ ರಕ್ಷಣೆ ಕುರಿತು ಜನರಲ್ಲಿ ಪ್ರಜ್ಞೆ ಮೂಡಿಸುವುದು, ಕಲಿಕೆಯ ದೃಢೀಕರಣ ಕುರಿತು ಆ ದಿನ ಎಲ್ಲರಿಗೂ ಮನವರಿಕೆ ಮಾಡಿಕೊಡಲಾಗುವುದು.ಗುರುವಾರ ಬೆಳಿಗ್ಗೆ 9.50ರಿಂದ ಸಂಜೆ 4.30ರವರೆಗೆ ಆಯಾ ಶಾಲೆಯ ವ್ಯಾಪ್ತಿಯಲ್ಲಿ ಬರುವ ಜನಪ್ರತಿನಿಧಿ, ಪೋಷಕರು, ಸಮುದಾಯದವರು ಪಾಲ್ಗೊಂಡು ತಾವು ಆಯ್ಕೆ ಮಾಡಿಕೊಂಡ ಶಾಲೆಯ ಶೈಕ್ಷಣಿಕ ಪರಿಸರ, ಕಲಿಕೆಯ ಬಗ್ಗೆ ಪರೀಕ್ಷಿಸಲು ಅವಕಾಶ ನೀಡಲಾಗಿದೆ. ಜುಲೈ 6ರಿಂದ 31ರವರೆಗೆ ಎರಡನೇ ಹಂತದ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪೌಢಶಾಲೆಗಳಲ್ಲಿ  ಶೈಕ್ಷಣಿಕ ಮೌಲ್ಯಮಾಪನ ಕಾರ್ಯಕ್ರಮ ನಡೆಸಲಾಗುವುದು. 31ರ ನಂತರ ಬ್ಲಾಕ್ ಹಂತದಲ್ಲಿ ಶಾಲೆಗಳಲ್ಲಿನ ಭೌತಿಕ ಸೌಕರ್ಯ, ಅಲ್ಲಿನ ಕುಂದುಕೊರತೆ, ಶೈಕ್ಷಣಿಕ ಗುಣಮಟ್ಟ ಇತ್ಯಾದಿಗಳ ಕುರಿತು ವಿಶ್ಲೇಷಣಾತ್ಮಕವಾದ ವರದಿಯೊಂದನ್ನು ಸಿದ್ಧಪಡಿಸಲಾಗುತ್ತದೆ.  ಇದಕ್ಕಾಗಿ ಶಾಲಾ ಮೌಲ್ಯಮಾಪನ ತಂಡಗಳನ್ನು ರಚಿಸಲಾಗಿದ್ದು, ಇವರು ಪ್ರತಿದಿನ ಒಂದು ಶಾಲೆಗೆ ಭೇಟಿ ನೀಡಿ ತಮಗೆ ಕೊಟ್ಟ ನಮೂನೆಯಲ್ಲಿ ವರ್ಗಕೋಣೆಯ ಬೋಧನಾ ಕಲಿಕೆ, ಭೌತಿಕ ಸೌಕರ್ಯ ಕುರಿತು ಮಾಹಿತಿ ನೀಡಬೇಕಾಗಿದೆ. ಆಗಸ್ಟ್ 19ರಿಂದ 2013ಜನವರಿ 10ರವರೆಗೆ ಮೌಲ್ಯಮಾಪನ ತಂಡ ನೀಡಿದ ವರದಿ ಕುರಿತು ಪ್ರತಿ ಮಾಸಿಕ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ನಂತರ ಈ ಆಧರಿಸಿ ಆದ್ಯತೆ ಮೇರೆಗೆ ಅಂತಹ ಶಾಲೆಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು.2013 ಜನವರಿ 10ರಿಂದ ಮತ್ತೆ ಮೂರನೇ ಹಂತದ ಕಾರ್ಯಕ್ರಮಗಳನ್ನು ಆರಂಭಿಸುವ ಮೂಲಕ ನಿರಂತರವಾಗಿ ಮಕ್ಕಳ ಶೈಕ್ಷಣಿಕ  ಯಶಸ್ಸಿಗೆ ಪ್ರಯತ್ನಿಸಲಾಗುವುದು. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಮಾರ್ಗದರ್ಶನದಂತೆ ಆಗಸ್ಟ್ 1ರಿಂದ 30ರವರೆಗೆ `ಶಿಕ್ಷಾ ಹಕ್~ ಅಭಿಯಾನ ಕೂಡ ನಡೆಸುವ ಮೂಲಕ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನ ಹಾಗೂ ಅನುಪಾಲನೆ ಬಗ್ಗೆ ಕೂಡ ವರದಿ ಸಿದ್ಧಪಡಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.“ಶಾಲೆಗಾಗಿ ನಾವು-ನೀವು ಕಾರ್ಯಕ್ರಮದ ಯಶಸ್ವಿಗಾಗಿ ಗುಲ್ಬರ್ಗ ಜಿಲ್ಲೆಯ 8 ಶೈಕ್ಷಣಿಕ ವಿಭಾಗಗಳಿಗೆ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪೌಢಶಾಲೆಗೆ ಮೂರು ಹಂತದಲ್ಲಿ ಒಟ್ಟು 103 ಮೌಲ್ಯಮಾಪನ ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡಕ್ಕೆ ತಲಾ 20 ಶಾಲೆಗಳಂತೆ ಹಂಚಿಕೆ ಮಾಡಲಾಗಿದೆ” ಎಂದು ಗುಲ್ಬರ್ಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಸಿ.ಎಸ್. ಮುಧೋಳ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ನಾವು-ನೀವು ಮಾಡಬೇಕೇನು?

ಶಾಲೆಗಾಗಿ ನಾವು-ನೀವು ಕಾರ್ಯಕ್ರಮದ ಅಡಿಯಲ್ಲಿ ಈ ಬಾರಿ ಕಳೆದ ವರ್ಷಕ್ಕಿಂತ ಭಿನ್ನವಾಗಿ ಎನ್ನುವಂತೆ ಶಾಲೆಯ ಭೌತಿಕ ಮತ್ತು ಬೌದ್ಧಿಕ ಗುಣ ಮಟ್ಟವನ್ನು ಸುಧಾರಿಸುವುದಕ್ಕಾಗಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನಮ್ಮಲ್ಲಿ ಜುಲೈ 5ರಂದು ಈ ಶೈಕ್ಷಣಿಕ ಹಬ್ಬ ಜರುಗಲಿದೆ. ಈ ಸಂದರ್ಭದಲ್ಲಿ ಸಮಾಜದ ಎಲ್ಲರೂ ಸೇರಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮ ಕೈಲಾದ ಸೇವೆ ಸಲ್ಲಿಸುವ ಅವಕಾಶವಿದೆ. ನಿವೇಶನ, ಕಟ್ಟಡ, ಕಲಿಕಾ ಸಾಮಗ್ರಿಯನ್ನು ಶಾಲೆಗೆ ದಾನ ನೀಡಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.