ಪ್ರತಿಭಟನಾಕಾರರ ಬಂಧನ, ಬಿಡುಗಡೆ

7

ಪ್ರತಿಭಟನಾಕಾರರ ಬಂಧನ, ಬಿಡುಗಡೆ

Published:
Updated:

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.ನಗರದ ಪ್ರೆಸ್‌ಕ್ಲಬ್‌ನಿಂದ ಜಾಥಾ ಆರಂಭಿಸಿದ `ನ್ಯಾಯಕ್ಕಾಗಿ ನಾವು~ ಸಂಘಟನೆಯ ಸದಸ್ಯರು, ರಾಜಭವನದ ಕಡೆಗೆ ಮೆರವಣಿಗೆ ಹೊರಟರು. ಮಾರ್ಗ ಮಧ್ಯೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಡ್ಡಹಾಕಿ ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಆಡುಗೋಡಿಯ ಕೇಂದ್ರ ಮೀಸಲು ಪಡೆ ಮೈದಾನಕ್ಕೆ ಕರೆದೊಯ್ದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಅವರನ್ನು ಬಿಡುಗಡೆಗೊಳಿಸಿದರು.`ತಮಿಳುನಾಡಿನ ಮೆಟ್ಟೂರು ಅಣೆಕಟ್ಟೆಯಲ್ಲಿ ಪ್ರಸ್ತುತ 40 ಟಿ.ಎಂ.ಸಿ ನೀರಿದೆ. ಆದರೆ, ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿರುವುದು ಕೇವಲ 20 ಟಿ.ಎಂ.ಸಿ ನೀರು ಮಾತ್ರ. ಇದರಲ್ಲಿ ಹನ್ನೊಂದು ಟಿ.ಎಂ.ಸಿ ನೀರನ್ನು ಬೆಂಗಳೂರಿನ ಕುಡಿಯುವ ನೀರಿಗಾಗಿ ಬಳಸಲಾಗುತ್ತಿದೆ. ಕಾವೇರಿ ನೀರಾವರಿ ಪ್ರದೇಶದ ಎರಡು ಲಕ್ಷ ಎಕರೆ ಕೃಷಿ ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿದ್ದು, ನೀರಿನ ಅಗತ್ಯ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯವು ತಮಿಳುನಾಡಿಗೆ ನೀರು ಬಿಡಬೇಕು ಎಂದು ಕಾವೇರಿ ನದಿ ಪ್ರಾಧಿಕಾರ ಆದೇಶ ನೀಡಿರುವುದು ತಪ್ಪು~ ಎಂದು `ನ್ಯಾಯಕ್ಕಾಗಿ ನಾವು~ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಇಂದೂಧರ ಹೊನ್ನಾಪುರ ಆಕ್ರೋಶ ವ್ಯಕ್ತಪಡಿಸಿದರು.ರೈತ ಮುಖಂಡರ ಬಂಧನ
: ಸ್ವಾತಂತ್ರ್ಯ ಉದ್ಯಾನದಿಂದ ರಾಜಭವನಕ್ಕೆ ಜಾಥಾ ಹೊರಟಿದ್ದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರನ್ನು ಪೊಲೀಸರು ಆನಂದ್‌ರಾವ್ ವೃತ್ತದಲ್ಲಿ ಬಂಧಿಸಿ, ಮೈಸೂರು ರಸ್ತೆಯಲ್ಲಿರುವ ಪೊಲೀಸ್ ಪರೇಡ್ ಮೈದಾನಕ್ಕೆ ಕರೆದೊಯ್ದು ಬಿಡುಗಡೆ ಮಾಡಿದರು.`ಹಿಂಗಾರು ಮಳೆಯಿಂದ ಅಣೆಕಟ್ಟುಗಳು ತುಂಬುವುದಿಲ್ಲ. ಮುಂಗಾರು ಮಳೆಯಿಂದ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಮುಂದಿನ ಜೂನ್ ತಿಂಗಳವರೆಗೆ ಬಳಸಬೇಕು. ಪ್ರಸ್ತುತ ಕಾವೇರಿ ಕೊಳ್ಳದ 49 ತಾಲ್ಲೂಕುಗಳಲ್ಲಿ ಬರ ಆವರಸಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ನದಿ ಪ್ರಾಧಿಕಾರ ತಪ್ಪು ನಿರ್ಣಯ ಕೈಗೊಂಡಿದೆ~ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.ಉಪವಾಸ ಸತ್ಯಾಗ್ರಹ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಸದಸ್ಯರು ನಗರದ ಪುರಭವನದ ಎದುರು ಗುರುವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

`ಕೇಂದ್ರ ಜಲಸಂಪನ್ಮೂಲ ತಜ್ಞರ ಸಮಿತಿ ರಾಜ್ಯದ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಅ.8ರೊಳಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದೆ. ಆ ವರದಿಯನ್ನು ಆಧರಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳುತ್ತೇವೆ. ಸದ್ಯ ಅ.10ರವರೆಗೆ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದೇವೆ~ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎನ್.ಜಗದೀಶ್ ತಿಳಿಸಿದರು.ರಸ್ತೆ ತಡೆ ಯತ್ನ: ಬಂಧನ : ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿರಂತರವಾಗಿ ತಗಾದೆ ತೆಗೆಯುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿಜಯನಗರದ ಟೋಲ್‌ಗೇಟ್ ವೃತ್ತದ ಬಳಿ ಜಯಲಲಿತಾ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರಸ್ತೆ ತಡೆಗೆ ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.ಮೈಕೊ ಕಾರ್ಖಾನೆಯ ನೌಕರರು ಹೊಸೂರು ರಸ್ತೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಿಂದ ವಾಹನ ಸಂಚಾರಕ್ಕೆ ಹೆಚ್ಚಿನ ಅಡ್ಡಿಯಾಗಿಲ್ಲ ಎಂದು ಪರಪ್ಪನ ಅಗ್ರಹಾರ ಪೊಲೀಸರು ತಿಳಿಸಿದ್ದಾರೆ.ಪ್ರತಿಕೃತಿ ದಹನ: ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರಾಜ್ಯ ವಾಹನ ಚಾಲಕರ ಸಂಘದ ಸದಸ್ಯರು ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿಯನ್ನು ದಹನ ಮಾಡಿದರು. `ಕಾವೇರಿ ನದಿ ನೀರು ಹಂಚಿಕೆ ವಿಷಯ ಬಂದಾಗ ತಮಿಳುನಾಡು ರಾಜಕಾರಣಿಗಳು ಪಕ್ಷಭೇದ ಮರೆತು ಒಟ್ಟಾಗಿ ಹೋರಾಟ ಮಾಡುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಕೇವಲ ಅಧಿಕಾರಕ್ಕಾಗಿ ಕಿತ್ತಾಡುತ್ತಿರುವ ರಾಜಕಾರಣಿಗಳು, ಕಾವೇರಿ ನೀರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನೂ ಸಹ ಮಾಡುತ್ತಿಲ್ಲ~ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ಎಚ್.ಎ.ಎಲ್ ಕೇಂದ್ರೀಯ ಕನ್ನಡ ಸಂಘದ ಸದಸ್ಯರು ಕುವೆಂಪು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘ, ಸರ್ವೋದಯ ಹಿರಿಯ ನಾಗರಿಕರ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ಕಾವೇರಿ ನದಿ ಪ್ರಾಧಿಕಾರದ ಆದೇಶವನ್ನು ಪುನರ್‌ಪರಿಶೀಲನೆ ಮಾಡುವಂತೆ ಆಗ್ರಹಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry