ಶನಿವಾರ, ಫೆಬ್ರವರಿ 27, 2021
31 °C
ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ಎಬಿವಿಪಿ ಕಾರ್ಯಕರ್ತರು

ಪ್ರತಿಭಟನೆ: ಕಾಲೇಜುಗಳಿಗೆ ಪೊಲೀಸ್‌ ಕಾವಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಿಭಟನೆ: ಕಾಲೇಜುಗಳಿಗೆ ಪೊಲೀಸ್‌ ಕಾವಲು

ಬೆಂಗಳೂರು: ‘ಬ್ರೋಕನ್‌ ಫ್ಯಾಮಿಲೀಸ್‌’ ಕಾರ್ಯಕ್ರಮದಲ್ಲಿ ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿ ಅಸಹಕಾರ ಚಳವಳಿ ನಡೆಸುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು, ಗುರುವಾರ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.ಮಾಗಡಿ ರಸ್ತೆಯ ಎಸ್‌ಜೆಆರ್‌ಸಿ ಮಹಿಳಾ ಕಾಲೇಜಿನ ಆವರಣದಲ್ಲಿ ಸೇರಿದ್ದ ಪ್ರತಿಭಟನಾಕಾರರು, ಕೆಲಕಾಲ ಸಭೆ ನಡೆಸಿದರು. ಅಲ್ಲಿಂದ ರಾಜಾಜಿನಗರದ ಗೋಲ್ಡನ್‌ ಹೈಟ್ಸ್‌ ಶಾಪಿಂಗ್‌ ಮಳಿಗೆ ಸಮೀಪದ ಸಿಗ್ನಲ್‌ವರೆಗೆ ಮೆರವಣಿಗೆ ನಡೆಸಿದರು. ಬಳಿಕ ಸಿಗ್ನಲ್‌ ಬಳಿಯೇ ರಸ್ತೆ ಸಂಚಾರ ತಡೆದು ಕೆಲ ನಿಮಿಷದವರೆಗೆ ಮಾನವ ಸರಪಳಿ ನಿರ್ಮಿಸಿದರು.‘ದೇಶದ್ರೋಹ ಘೋಷಣೆ ಕೂಗಿದವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕುತ್ತಿದ್ದಾರೆ. ಕಾಲೇಜುಗಳಿಗೆ ಭೇಟಿ ನೀಡಲು ಅವಕಾಶ ನೀಡುತ್ತಿಲ್ಲ. ಇಂಥ ಕ್ರಮಕ್ಕೆಲ್ಲ ನಾವು ಜಗ್ಗುವುದಿಲ್ಲ’ ಎಂದು ಪ್ರತಿಭಟನಾನಿರತರು ತಿಳಿಸಿದರು.ಮಾನವ ಸರಪಳಿ ನಿರ್ಮಿಸಿದ್ದರಿಂದ  ರಾಜಾಜಿನಗರ, ಓಕಳಿಪುರ, ಮಾಗಡಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು, ‘ನಿಮ್ಮ ಒತ್ತಾಯವನ್ನು ಸಂಬಂಧಪಟ್ಟವರಿಗೆ ತಿಳಿಸುತ್ತೇವೆ.ದಟ್ಟಣೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಪ್ರತಿಭಟನೆ ಕೈಬಿಡಿ’ ಎಂದು ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿ ಪ್ರತಿಭಟನೆ ಕೈಬಿಟ್ಟ ಪ್ರತಿಭಟನಾಕಾರರು, ‘ಅಸಹಕಾರ ಚಳವಳಿ ಮುಂದುವರಿಯಲಿದೆ’ ಎಂದು   ತಿಳಿಸಿದರು.ರಾಖಿ ಕಟ್ಟಿದರು: ನಗರ ಪೊಲೀಸ್‌ ಕಮಿಷನರ್‌ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಬಿವಿಪಿ ಮುಖಂಡರು ಘೋಷಿಸಿದ್ದರಿಂದ ರಾಜಾಜಿನಗರ, ಮಲ್ಲೇಶ್ವರ ಸೇರಿದಂತೆ ಹಲವು ಕಾಲೇಜುಗಳಿಗೆ ನೋಟಿಸ್ ನೀಡಿದ್ದ ಪೊಲೀಸರು, ಗುರುವಾರ ಆ ಎಲ್ಲ ಕಾಲೇಜುಗಳ ಬಳಿ ಬಿಗಿ ಭದ್ರತೆ ಕೈಗೊಂಡಿದ್ದರು.

ಮಲ್ಲೇಶ್ವರದ 13ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಆಹ್ವಾನಿಸಲು ಬೆಳಿಗ್ಗೆ ಎಬಿವಿಪಿ ಕಾರ್ಯಕರ್ತರು ಹೋಗಿದ್ದರು.ಅವರನ್ನು ತಡೆದ ಪೊಲೀಸರು, ಕಾಲೇಜಿನ ಒಳಗೆ ಹೋಗಲು ಬಿಡಲಿಲ್ಲ. ಆಗ ಎಬಿವಿಪಿ ಕಾರ್ಯಕರ್ತೆಯರು ಸ್ಥಳದಲ್ಲಿದ್ದ ಪೊಲೀಸ್‌ ಸಿಬ್ಬಂದಿಗೆ ರಾಖಿ ಕಟ್ಟಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.‘ದೇಶದ್ರೋಹಿ ಘೋಷಣೆ ಕೂಗಿದವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಪೊಲೀಸರು ಅವಕಾಶ ನೀಡುತ್ತಿಲ್ಲ. ಹೀಗಾಗಿ  ಭ್ರಾತೃತ್ವದ ಸಂಕೇತವಾದ ರಾಖಿ ಕಟ್ಟಿ ಪ್ರತಿಭಟನೆಗೆ ಸಹಕರಿಸುವಂತೆ ಪೊಲೀಸರನ್ನು ಕೋರಿದ್ದೇವೆ’ ಎಂದು ಕಾರ್ಯಕರ್ತೆಯರು ತಿಳಿಸಿದರು.ರಾಖಿ ಕಟ್ಟಿದ ಬಳಿಕವೂ ಕಾಲೇಜಿನೊಳಗೆ ಪ್ರವೇಶ ನಿರಾಕರಿಸಲಾಯಿತು. ಅದರಿಂದಾಗಿ ಕಾಲೇಜಿನಿಂದ ಹೋದ ಪ್ರತಿಭಟನಾಕಾರರು, ರಾಜಾಜಿನಗರದ ರಾಮಮಂದಿರ ಮೈದಾನ ಬಳಿಯ ಎಸ್‌ಜೆಆರ್‌ಸಿ ಕಾಲೇಜಿನ ಆವರಣದಲ್ಲಿ ಜಮಾಯಿಸಿ ಸಭೆ ನಡೆಸಿದರು.

ಪ್ರತಿಭಟನಾಕಾರರ ಮೊಬೈಲ್‌ ಸ್ವಿಚ್‌ ಆಫ್‌

ಪ್ರತಿಭಟನೆ ನಡೆಯದಂತೆ ಎಬಿವಿಪಿ ಕಾರ್ಯಕರ್ತರನ್ನು ತಡೆಯಲು  ಪೊಲೀಸರು ಸಾಕಷ್ಟು ಕ್ರಮ ಕೈಗೊಂಡಿದ್ದರು. ಜತೆಗೆ ಅವರ ಮೊಬೈಲ್‌ ಕರೆಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದರು.

ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಎಬಿವಿಪಿಯ ಹಲವು ಮುಖಂಡರು, ತಮ್ಮ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದರು. ಅದರಿಂದಾಗಿಯೇ ಕಾರ್ಯಕರ್ತರು, ಪೊಲೀಸರ ಕಣ್ತಪ್ಪಿಸಿ ರಾಜಾಜಿನಗರದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.‘ಪೊಲೀಸರು ಮೊಬೈಲ್‌ ಟ್ರ್ಯಾಪ್‌ ಮಾಡುತ್ತಿದ್ದರು. ಹೀಗಾಗಿ ಇಡೀ ದಿನ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದೆವು’ ಎಂದು ಕಾರ್ಯಕರ್ತರೊಬ್ಬರು ತಿಳಿಸಿದರು.

*

ಪ್ರತಿಭಟನೆಗೆ ಮುಂದಾದವರನ್ನು ತಡೆಯುತ್ತಿರುವ ಪೊಲೀಸರ ಕ್ರಮ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು. ಏನೇ ಆದರೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ

-ವಿನಯ್ ಬಿದರೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಎಬಿವಿಪಿ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.