ಪ್ರತಿಭಟನೆ- ಕುಲಸಚಿವರ ವಜಾಕ್ಕೆ ಆಗ್ರಹ

7

ಪ್ರತಿಭಟನೆ- ಕುಲಸಚಿವರ ವಜಾಕ್ಕೆ ಆಗ್ರಹ

Published:
Updated:

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದ್ದು, ಇದಕ್ಕೆ ಕಾರಣರಾದ ಮೌಲ್ಯಮಾಪನ ಕುಲಸಚಿವ ಪ್ರೊ.ಸೋಮಶೇಖರ್ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ನಗರದ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದ ಬಳಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಎಬಿವಿಪಿ ನಗರ ಉತ್ತರ ಜಿಲ್ಲೆಯ ಸಂಚಾಲಕ ಮಹೇಶ್, `ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ವಿಫಲರಾಗಿದ್ದಾರೆ. ಪದವಿ ಪರೀಕ್ಷೆಗಳ ಇಂಗ್ಲಿಷ್ ಮತ್ತಿತರ ವಿಷಯಗಳ ಪರೀಕ್ಷೆಗಳು ಮುಗಿದು ತಿಂಗಳು ಕಳೆದರೂ ಮೌಲ್ಯಮಾಪನ ತಡವಾಗುತ್ತಿದೆ. ಹೆಚ್ಚು ಅಂಕಗಳಿಸಲು ಮೂರರಿಂದ ಐದು ಸಾವಿರ ರೂಪಾಯಿ ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲದಕ್ಕೂ ಮೌಲ್ಯಮಾಪನ ವಿಭಾಗದ ಕುಲಸಚಿವರ ಹಸ್ತಕ್ಷೇಪವೂ ಇದೆ' ಎಂದು ಆರೋಪಿಸಿದರು.`ಮೌಲ್ಯಮಾಪನ ಕುಲಸಚಿವ ಪ್ರೊ.ಸೋಮಶೇಖರ್ ಅವರ ಮೇಲೆ ಹಣ ದುರುಪಯೋಗದ ಆರೋಪಗಳೂ ಇವೆ. ಇಂಥವರನ್ನು ಹುದ್ದೆಯಲ್ಲಿ ಮುಂದುವರಿಸುವುದು ಸರಿಯಲ್ಲ. ಸರ್ಕಾರ ಇವರನ್ನು ಕೂಡಲೇ ವಜಾಗೊಳಿಸಬೇಕು' ಎಂದು ಆಗ್ರಹಿಸಿದರು.`ಬಿ.ಇಡಿ ಶೈಕ್ಷಣಿಕ ಗುಣಮಟ್ಟ ಪರಿಶೀಲನೆಗಾಗಿ ನೇಮಿಸಲಾಗಿದ್ದ ಕಾರ್ಯಪಡೆಯ ವರದಿಯನ್ನು ಜಾರಿಗೊಳಿಸಲು ವಿಶ್ವವಿದ್ಯಾಲಯ ವಿಳಂಬ ಮಾಡುತ್ತಿದೆ. ವರದಿಯಲ್ಲಿ ತಿಳಿಸಿರುವ ಗುಣಮಟ್ಟವಿಲ್ಲದ ಕಾಲೇಜುಗಳ ಮಾನ್ಯತೆ ರದ್ದುಗೊಳಿಸಬೇಕು' ಎಂದು ಅವರು ಒತ್ತಾಯಿಸಿದರು.ಸಿಂಡಿಕೇಟ್ ಸಭೆ ನಡೆಯುತ್ತಿದ್ದ ಜ್ಞಾನಜ್ಯೋತಿ ಸಭಾಂಗಣದ ಕೊಠಡಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಪೊಲೀಸರು ತಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry