ಪ್ರತಿಭಟನೆ ಗೀಳು: ನೆಮ್ಮದಿ ಹಾಳು

7

ಪ್ರತಿಭಟನೆ ಗೀಳು: ನೆಮ್ಮದಿ ಹಾಳು

Published:
Updated:

ಹಾಸನ: ಪ್ರತಿಭಟನೆಗಳು ಹಾಸನದಲ್ಲಿ ಸಾಮಾನ್ಯ. ಸಣ್ಣ-ಪುಟ್ಟ ವಿಚಾರಗಳಿಗೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಂದು ಧರಣಿ ಕೂರುವವರ ಸಂಖ್ಯೆ ಹಾಸನದಲ್ಲಿ ಕಡಿಮೆ ಇಲ್ಲ. ಸಂಘ ಸಂಸ್ಥೆಗಳವರು, ರಾಜಕೀಯ ಪಕ್ಷಗಳ ಸದಸ್ಯರು ನಡೆಸುವ ಹೋರಾಟ ಒಂದೆಡೆಯಾದರೆ ಖಾಸಗಿಯಾಗಿ ಬಂದು ಏಕಾಂಗಿ ಹೋರಾಟ ನಡೆಸುವವರೂ ಇಲ್ಲಿದ್ದಾರೆ. ಪೂರ್ವಾಪರಗಳನ್ನು ಅರಿಯದೆ ಬಂದು ಪ್ರತಿಭಟನೆ ನಡೆಸಿ ಹಾಸ್ಯಾಸ್ಪದವಾಗುವ ಸಂಘಟನೆಗಳೂ ಇವೆ... ಇವೆಲ್ಲ ಒಂದೆಡೆ.ಕಳೆದ ಕೆಲವು ದಿನಗಳಿಂದ ಹಾಸನದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಜಿಲ್ಲೆಯ ಪ್ರಜ್ಞಾವಂತರಲ್ಲಿ, ಕಾಲೇಜುಗಳ ಉಪನ್ಯಾಸಕರು, ಪ್ರಾಂಶುಪಾಲರಲ್ಲಿ ವಿಶೇಷವಾಗಿ ಕಾಲೇಜುಗಳಿಗೆ ಹೋಗುವ ಮಕ್ಕಳ ಪಾಲಕರಲ್ಲಿ ಆತಂಕ ಮೂಡಿಸಿವೆ.ವಿದ್ಯಾರ್ಥಿಗಳು ಪದೇಪದೆ ಪ್ರತಿಭಟನೆಯ ಹಾದಿ ಹಿಡಿದಿರುವುದು ಚಿಂತೆಗೆ ಮುಖ್ಯ ಕಾರಣವಾಗಿದೆ.

ಬಸ್ ಪಾಸ್‌ಗಾಗಿ, ಅನಂತರ ಕ್ಯಾರಿ ಓವರ್ ವ್ಯವಸ್ಥೆ ಮುಂದುವರಿಕೆಗಾಗಿ ಈಗ ಕೆಲವು ದಿನಗಳಿಂದ ಪರೀಕ್ಷಾ ಶುಲ್ಕ ಕಡಿಮೆ ಮಾಡಲು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.

 

ಈ ನಡುವೆ ಆಗೊಮ್ಮೆ ಈಗೊಮ್ಮೆ ಭ್ರಷ್ಟಾಚಾರದ ವಿರುದ್ಧ, ಅಣ್ಣಾ ಹಜಾರೆಗೆ ಬೆಂಬಲಕ್ಕಾಗಿ ಪ್ರತಿಭಟನೆ ನಡೆಸಿದ್ದಿದೆ. ಹೀಗೆ ತಿಂಗಳಿಗೆ ಐದೋ ಆರೋ ದಿನ ಕಾಲೇಜು ಬಿಟ್ಟು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಗತಿಯೇನು ? ಎಂದು ಈಗ ಸಾರ್ವಜನಿಕರೇ ಪ್ರಶ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ಕೆಲವು ಸಂಘಟನೆಗಳು ಇಂಥ ಪ್ರತಿಭಟನೆ ಹಮ್ಮಿಕೊಳ್ಳುವಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿವೆ.ತಮಗೆ ಅನ್ಯಾಯವಾದಾಗ ಅಥವಾ ಯಾವುದೋ ಒಂದು ಸಮಕಾಲೀನ ವಿಚಾರಕ್ಕೆ ಸ್ಪಂದಿಸಿ ಹೋರಾಟ/ ಪ್ರತಿಭಟನೆ ನಡೆಸುವ ಹಕ್ಕು ವಿದ್ಯಾರ್ಥಿಗಳಿಗೆ ಇದೆ. ಅದು ಅಗತ್ಯವೂ ಹೌದು. ಆದರೆ ವಿದ್ಯಾರ್ಥಿಗಳು ನಡೆಸಿದ ಈಚಿನ ಹೋರಾಟಗಳಲ್ಲಿ ಅಂಥ ಕಳಕಳಿ ಕಾಣಿಸುತ್ತಿಲ್ಲ.ಒಂದು ಸಂಘಟನೆಯವರು ಕೇಂದ್ರ ಸರ್ಕಾರದ ಹಗರಣಗಳ ವಿರುದ್ಧ ಪ್ರತಿಭಟನೆ ಮಾಡಿ ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿದರೆ ಇನ್ನೊಂದು ಸಂಘಟನೆಯವರು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸುತ್ತಾರೆ.

 

ಎರಡೂ ಸಂಘಟನೆಗಳವರು ನಗರದ ಸರ್ಕಾರಿ ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳನ್ನು ಒತ್ತಾಯಪೂರ್ವಕವಾಗಿ ಕರೆತರುತ್ತಾರೆ. ಬಿಸಿಲಲ್ಲಿ ಮೆರವಣಿಗೆ ನಡೆಸಿ, ಘೋಷಣೆಗಳನ್ನು ಕೂಗಿಸಿ ಒಂದರ್ಧಗಂಟೆ ಚರ್ವೀತ ಚರ್ವಣ ಭಾಷಣ ಕೇಳಿಸಿ ಮನೆಗೆ ಕಳುಹಿಸುತ್ತಾರೆ. ಅಲ್ಲಿಗೆ ವಿದ್ಯಾರ್ಥಿಗಳ ಒಂದು ದಿನದ ಪಾಠ ಪ್ರವಚನಗಳು ಹಳ್ಳ ಹಿಡಿದಂತಾಗುತ್ತವೆ.`ನಮ್ಮ ವಿದ್ಯಾರ್ಥಿಗಳು ಪ್ರತಿಭಟನೆಗೆ ಹೋಗಲು ಸಿದ್ಧರಿರುವುದಿಲ್ಲ. ಆದರೆ ಸಂಘಟನೆಗಳವರು ಬಂದು ಒತ್ತಾಯಪೂರ್ವಕ ಎಳೆದೊಯ್ಯುತ್ತಾರೆ. ಬಿಡಲ್ಲ ಅಂದ್ರೆ ನಮ್ಮ ಮೇಲೆಯೇ ರೇಗಾಡುತ್ತಾರೆ, ಅವಾಚ್ಯವಾಗಿ ನಿಂದಿಸುತ್ತಾರೆ~ ಎಂದು ಸರ್ಕಾರಿ ಕಾಲೇಜೊಂದರ ಪ್ರಾಂಶುಪಾಲರು ನುಡಿಯುತ್ತಾರೆ.ಆರ್.ಸಿ.ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ವಿಜ್ಞಾನ ಹಾಗೂ ಕಲಾಕಾಲೇಜುಗಳ ವಿದ್ಯಾರ್ಥಿಗಳು, ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಬಳಸಲಾಗುತ್ತದೆ. ಹಳ್ಳಿ ಪ್ರದೇಶದಿಂದ ಬರುವ ಈ ಮಕ್ಕಳು ಪಾಲಕರ ಹಲವು ಕನಸುಗಳನ್ನು ಜತೆಯಲ್ಲೇ ಹೊತ್ತುಕೊಂಡು ಬಂದಿರುತ್ತಾರೆ ಎಂಬುದನ್ನು ಪ್ರತಿಭಟನೆ ನಡೆಸುವ ಸಂಘಟಕರು ಮನಗಾಣಬೇಕಾಗಿದೆ. ಬಾರಿ ಬಾರಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೆ ಕೊನೆಗೆ `ಕ್ಯಾರಿ ಓವರ್‌ಗೆ~ (ಪರೋಕ್ಷವಾಗಿ ಫೇಲ್ ಆಗಲು ಅನುಮತಿ ಕೇಳಿದಂತೆ) ಒತ್ತಾಯ ಮಾಡಲೇಬೇಕಾಗುತ್ತದೆ.ಈಚೆಗೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳಾಗಿವೆ. ಸೆಮಿಸ್ಟರ್ ಪದ್ಧತಿಯಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚಾಗಿದೆ. ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರ್ಯಾಕ್ಟಿಕಲ್ಸ್ ಒತ್ತಡವಿದ್ದರೆ, ಇತರ ವಿಭಾಗಗಳ ವಿದ್ಯಾರ್ಥಿಗಳು ಸೆಮಿನಾರ್‌ಗಳು, ಪ್ರಾಜೆಕ್ಟ್‌ಗಳು ಮುಂತಾಗಿ ಹತ್ತು ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ. ಒಂದು ದಿನ ಕಾಲೇಜು ತಪ್ಪಿಸಿಕೊಂಡರೂ ಅವರಿಗೆ ಸಮಸ್ಯೆಯೇ.ಹಾಗೆಂದು ವಿದ್ಯಾರ್ಥಿಗಳು ಸಂವೇದನೆ ಕಳೆದುಕೊಳ್ಳಬೇಕೆಂದಿಲ್ಲ. ಬಸ್ ಪಾಸ್‌ಗಾಗಿ ಹೋರಾಟದಲ್ಲಿ ಅರ್ಥವಿದೆ. ರಾಜಕೀಯ ಹೋರಾಟಗಳಿಂದ ಅವರನ್ನು ದೂರವಿಡಬೇಕಾದ ಜವಾಬ್ದಾರಿ ಸಂಘಟಕರದ್ದು ಮತ್ತು ಇಡೀ ಸಮಾಜದ್ದಾಗಿದೆ. ನಾಳೆ ಇದೇ ಸರ್ಕಾರಿ ಕಾಲೇಜುಗಳ ಉಪನ್ಯಾಸಕರು ಪಾಲಕರಿಗೂ ಉತ್ತರ ನೀಡಬೇಕಾಗುತ್ತದೆ.

 

ಆದ್ದರಿಂದ ವಿದ್ಯಾರ್ಥಿಗಳೂ ತಮ್ಮ ಜವಾಬ್ದಾರಿ ಅರಿತು ಸಣ್ಣಪುಟ್ಟ ಕಾರಣಗಳಿಗೆ ಪ್ರತಿಭ ಟನೆಗೆ ಒತ್ತಾಯಿಸುವ ಸಂಸ್ಥೆಗಳ ವಿರುದ್ಧ ಪ್ರತಿಭಟಿಸ ಬೇಕಾಗಿದೆ. ಅಂಥ ಅನಿವಾರ್ಯ ಪ್ರಸಂಗ ಬಂದರೆ ಪಾಠ ಪ್ರವಚನ ಬಿಡುವ ಬದಲು ಶನಿವಾರ ಮಧ್ಯಾಹ್ನದ ಬಳಿಕ ಒಂದು ಗಂಟೆ ಪ್ರತಿಭಟನೆ ನಡೆಸಬಹುದಲ್ಲವೇ?.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry