ಪ್ರತಿಭಟನೆ ಹಿಂಪಡೆದ ಗುತ್ತಿಗೆದಾರರು

7

ಪ್ರತಿಭಟನೆ ಹಿಂಪಡೆದ ಗುತ್ತಿಗೆದಾರರು

Published:
Updated:

ಬೆಂಗಳೂರು: ಬಾಕಿ ಉಳಿಸಿಕೊಂಡಿರುವ ಗುತ್ತಿಗೆ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕಳೆದ 20 ದಿನಗಳಿಂದ ಕೆಲಸ ಸ್ಥಗಿತಗೊಳಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿವಿಲ್ ಗುತ್ತಿಗೆದಾರರು ಹಣ ಬಿಡುಗಡೆ ಮಾಡುವುದಾಗಿ ಶನಿವಾರ ರಾತ್ರಿ ಬಿಬಿಎಂಪಿ ಆಯುಕ್ತರಿಂದ ದೊರೆತ ಲಿಖಿತ ಭರವಸೆಯಿಂದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ.ಬಾಕಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಸಾವಿರಕ್ಕೂ ಅಧಿಕ ಗುತ್ತಿಗೆದಾರರು ಬೆಳಗಿನಿಂದಲೇ ಪಾಲಿಕೆ ಆವರಣದಲ್ಲಿ ಧರಣಿ ಆರಂಭಿಸಿದ್ದರು. ಆಯುಕ್ತ ರಜನೀಶ್ ಗೋಯಲ್ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ರಾತ್ರಿ ಕೆಲಸ ಮುಗಿಸಿ ಆಯುಕ್ತರು ಹೊರಟು ನಿಂತಾಗ ಗುತ್ತಿಗೆದಾರರು ಅವರ ಕಾರಿಗೆ ಅಡ್ಡಲಾಗಿ ಮಲಗಿದರು. ಬಾಕಿ ಹಣವನ್ನು ಬಿಡುಗಡೆ ಮಾಡಲು ಸಮ್ಮತಿಸದೆ ನಿಮ್ಮನ್ನು ಹೋಗಲು ಬಿಡುವುದಿಲ್ಲ ಎಂದೂ ಪಟ್ಟು ಹಿಡಿದರು.ನಂತರ ಆಯುಕ್ತರು ಸರ್ಕಾರ ಬಿಡುಗಡೆ ಮಾಡಿದ ರೂ 360 ಕೋಟಿಯನ್ನು ಗುತ್ತಿಗೆದಾರರಿಗೇ ನೀಡಲಾಗುವುದು ಎಂದು ಭರವಸೆ ನೀಡಿದರು. ಅವರಿಂದ ಲಿಖಿತ ಭರವಸೆ ಪಡೆದ ಧರಣಿನಿರತರು ಬಳಿಕ ಪ್ರತಿಭಟನೆ ಹಿಂಪಡೆದರು.

ಒಟ್ಟಾರೆ 1,500 ಗುತ್ತಿಗೆದಾರರಿಂದ ಬಿಬಿಎಂಪಿ 1,600 ಕೋಟಿ ಬಾಕಿ ಉಳಿಸಿಕೊಂಡಿದ್ದು, ಸರ್ಕಾರ ನೀಡಿದ 360 ಕೋಟಿ ಅವರಿಗೆ ಸಿಕ್ಕರೆ, ಇನ್ನೂ 1,240 ಕೋಟಿ ಬಾಕಿ ಉಳಿಯಲಿದೆ.`ಗುತ್ತಿಗೆ ಹಿರಿತನ ಆಧಾರದ ಮೇಲೆ ಬಾಕಿ ಬಿಡುಗಡೆ ಮಾಡುವಂತೆ ಬಿಬಿಎಂಪಿ ಆಯುಕ್ತರಿಗೆ ಕೋರಿಕೆ ಸಲ್ಲಿಸಿದ್ದೇವೆ. ಕಾರ್ಮಿಕರ ನಾಲ್ಕು ತಿಂಗಳ ಸಂಬಳ ಬಟವಡೆಗೆ ಈ ಹಣವನ್ನು ಬಳಕೆ ಮಾಡುತ್ತೇವೆ. ಹಬ್ಬದ ಸಂದರ್ಭದಲ್ಲೇ ಹಣ ಸಿಕ್ಕಿರುವುದು ಕಾರ್ಮಿಕರಲ್ಲೂ ಸಂತಸ ಮೂಡಿಸಿದೆ~ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಜೆ. ಶ್ರೀನಿವಾಸ್ `ಪ್ರಜಾವಾಣಿ~ಗೆ ತಿಳಿಸಿದರು.`ಇನ್ನೆರಡು ದಿನಗಳಲ್ಲಿ ನಮ್ಮ ಗುತ್ತಿಗೆ ಕೆಲಸವನ್ನು ಪುನರಾರಂಭ ಮಾಡುತ್ತೇವೆ~ ಎಂದು ಅವರು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry