ಸೋಮವಾರ, ಜನವರಿ 27, 2020
20 °C

ಪ್ರತಿಭಾನ್ವಿತರೇ ಶಿಕ್ಷಕರಾಗಲಿ: ಭೈರಪ್ಪ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಪ್ರತಿಭಾನ್ವಿತರು ಮಾತ್ರ ಶಿಕ್ಷಕರಾಗಿ ನೇಮಕವಾದರೆ ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಸಾಧ್ಯ~ ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಪ್ರತಿಪಾದಿಸಿದರು.ನಗರದ ಚೇತನ ಮತ್ತು ಸಚೇತನ ಪಿಯು ಕಾಲೇಜುಗಳ ವಾರ್ಷಿಕೋತ್ಸವ `ಸ್ಫೂರ್ತಿ-2012~ರಲ್ಲಿ ಸೋಮವಾರ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. `ಹತ್ತು ಕಡೆ ಅರ್ಜಿ ಹಾಕಿದ ವ್ಯಕ್ತಿಗೆ ಅಕಸ್ಮಾತ್ ಶಿಕ್ಷಕ ವೃತ್ತಿ ಸಿಕ್ಕಿರುತ್ತದೆ. ಅಂಥವರು ಹೊಟ್ಟೆ ಪಾಡಿಗಾಗಿ ಕೆಲಸ ಮಾಡುತ್ತಾರೆಯೇ ಹೊರತು ಅವರಿಗೆ ಯಾವುದೇ ಬದ್ಧತೆ ಇರುವುದಿಲ್ಲ. ಇಂತಹ ಶಿಕ್ಷಕರಿಂದ ಸಾಧನೆ ಸಾಧ್ಯವಿಲ್ಲ~ ಎಂದು ಅವರು ಪ್ರಶ್ನಿಸಿದರು.`ಶಿಕ್ಷಣದ ಸಂಪೂರ್ಣ ಪರಿಕಲ್ಪನೆಯನ್ನು ಅರ್ಥ ಮಾಡಿಕೊಂಡ ವ್ಯಕ್ತಿ ಯಶಸ್ವಿ ಶಿಕ್ಷಕನಾಗಬಲ್ಲ. ಅಧ್ಯಯನ, ಸ್ವಾಧ್ಯಾಯ ಮತ್ತು ಪ್ರವಚನ ಶಿಕ್ಷಕರ ಪ್ರವೃತ್ತಿಯಾಗಬೇಕು. ಶಿಕ್ಷಕರ ನೇಮಕಕ್ಕೆ ಇರುವ ನಿಯಮಾವಳಿಗಳು ಕನಿಷ್ಠವೇ ಹೊರತು ಗರಿಷ್ಠವಲ್ಲ. ಗರಿಷ್ಠ ಅರ್ಹತೆ ಹೊಂದಿದವರು ಈ ವೃತ್ತಿಗೆ ಬರಬೇಕು~ ಎಂದು ತಿಳಿಸಿದರು.`ವಿದ್ಯೆಯಲ್ಲಿ ನಾವು ಶ್ರೇಷ್ಠತೆಯನ್ನು ಅರಸುತ್ತಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಈ ಉದ್ದೇಶ ಸಾಧನೆ ಸಾಧ್ಯವಾಗಿಲ್ಲ. ಶ್ರೇಷ್ಠತೆ ಸಾಧಿಸುವಲ್ಲಿ ಖಾಸಗಿ ಸಂಸ್ಥೆಗಳ ಪ್ರಯತ್ನ ಹೆಚ್ಚಿನ ಪಾಲು ಪಡೆದಿವೆ. ಆದರೆ, ಒಳ್ಳೆಯ ಫಲಿತಾಂಶ ಕೊಡಬೇಕು ಎಂಬ ಒತ್ತಡಕ್ಕೆ ಸಿಲುಕಿರುವ ಈ ಸಂಸ್ಥೆಗಳಿಗೆ ನೈಜ ಶಿಕ್ಷಣ ಕೊಡುವುದು ಕಷ್ಟವಾಗಿದೆ~ ಎಂದು ಅವರು ಅಭಿಪ್ರಾಯಪಟ್ಟರು.`ನಮ್ಮ ವಿಶ್ವವಿದ್ಯಾಲಯಗಳಿಗೆ ವಿಶ್ವಮಟ್ಟದಲ್ಲಿ ಸ್ಪರ್ಧೆಯೊಡ್ಡಲು ಇನ್ನೂ ಸಾಧ್ಯವಾಗಿಲ್ಲ. ಭಾರತೀಯರು ವಿದೇಶಿ ಸಂಸ್ಥೆಗಳಿಗೆ ಹೋಗಿ ಸೇರಿದ ನಂತರ ಬಹುದೊಡ್ಡ ಸಾಧನೆ ಮಾಡಿದ ಉದಾಹರಣೆಗಳು ಬೇಕಾದಷ್ಟಿವೆ. ಅದೇ ಸಾಧನೆ ಇಲ್ಲಿ ಏಕೆ ಆಗಲಿಲ್ಲ ಎಂಬ ವಿವೇಚನೆಯನ್ನು ನಿಮಗೇ ಬಿಡುತ್ತೇನೆ~ ಎಂದು ಅವರು ಹೇಳಿದರು.`ನಮ್ಮ ಶಿಕ್ಷಣದ ಪಠ್ಯ ಪುಸ್ತಕಗಳನ್ನು ಯಾರೋ ಮೂರು ಅನುಭವಿ ಶಿಕ್ಷಕರು ರೂಪಿಸುತ್ತಾರೆ. ಅನುಭವಿ ಶಿಕ್ಷಕ ಎಂದರೆ ಹಳೆಯ ಟಿಪ್ಪಣಿಗಳನ್ನು ಸುದೀರ್ಘ ಅವಧಿಗೆ ಬಳಕೆ ಮಾಡಿದ ವ್ಯಕ್ತಿ ಎಂದರ್ಥ. ಅಂಥವರು ರಚನೆ ಮಾಡಿದ ಪಠ್ಯ ಯಾವುದೋ ಅಧಿಕಾರಿ ಹೆಸರಲ್ಲಿ ಪ್ರಕಟವಾಗುತ್ತದೆ. ಪ್ರತಿಭೆ ಇಲ್ಲದೆ ಒಳನೋಟ ಹೊಂದಿದ ಪರಿಪೂರ್ಣ ಪಠ್ಯ ರಚನೆ ಸಾಧ್ಯವಿಲ್ಲ. ಆದ್ದರಿಂದ ಮೇಧಾವಿಗಳನ್ನೇ ಪಠ್ಯರಚನೆಗೆ ಬಳಕೆ ಮಾಡಿಕೊಳ್ಳಬೇಕು~ ಎಂದು ಅವರು ಸಲಹೆ ನೀಡಿದರು.`ಶಿಕ್ಷಣದ ವಿಧಾನ, ಸಲಕರಣೆ ಹಾಗೂ ಪಠ್ಯದಲ್ಲಿ ಕ್ಷಿಪ್ರಗತಿಯಲ್ಲಿ ಬದಲಾವಣೆ ಆಗುತ್ತಿದೆ. ಹತ್ತು ವರ್ಷದ ಹಿಂದಿನ ಪುಸ್ತಕಗಳು ಈಗ ಹಳೆಯದಾಗಿರುತ್ತವೆ. ನಿತ್ಯವೂ ಹೊಸ, ಹೊಸ ಸಂಶೋಧನೆಗಳು ನಡೆಯುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಕಂಪ್ಯೂಟರ್‌ನಲ್ಲಿ ಬೇಕಾದ ಎಲ್ಲ ಮಾಹಿತಿ ವಿದ್ಯಾರ್ಥಿಗಳಿಗೆ ಸಿಗುತ್ತಿದೆ. ಉಪಾಧ್ಯಾಯರ ಕೆಲಸದ ಸ್ವರೂಪವೂ ಬದಲಾಗುತ್ತಿದೆ~ ಎಂದು ಅವರು ಹೇಳಿದರು.`ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಮೇಧಾವಿಗಳನ್ನು ಉಪನ್ಯಾಸ ಮಾಡಲು ಕರೆಯಿಸಿ ಅವರಿಂದ ಗಹನವಾದ ವಿಚಾರವನ್ನು ಸರಳವಾಗಿ ಪಾಠ ಮಾಡಿಸುತ್ತಾರೆ. ಅಂತಹ ಪ್ರಯತ್ನಗಳು ನಮ್ಮಲ್ಲಿ ನಡೆದಿಲ್ಲ. ಶಿಕ್ಷಣದಲ್ಲಿ ಆಗುತ್ತಿರುವ ವೇಗದ ಬದಲಾವಣೆಗಳನ್ನು ಸರ್ಕಾರಕ್ಕೂ ಅಳವಡಿಸಿಕೊಳ್ಳಲು ಆಗಿಲ್ಲ~ ಎಂದು ಅವರು ವಿಷಾದಿಸಿದರು.ಬೆಂಗಳೂರಿನ ಹ್ಯೂಲೆಟ್ ಪ್ಯಾಕರ್ಡ್ ಸಂಸ್ಥೆಯ ಎಂಜಿನಿಯರ್, ಕಾಲೇಜಿನ ಹಳೆಯ ವಿದ್ಯಾರ್ಥಿ ಅಮಿತ್ ಕುಲಕರ್ಣಿ ಅತಿಥಿಗಳಾಗಿ ಆಗಮಿಸಿದ್ದರು. ಚೇತನ ಕಾಲೇಜಿನ ಪ್ರಾಚಾರ್ಯ ಡಾ.ಈ.ವಿ. ಹುಡೇದ ಅಧ್ಯಕ್ಷತೆ ವಹಿಸಿದ್ದರು. ಸಚೇತನ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಸುಜಾತಾ ಧಡೂತಿ, ಸಂಸ್ಥೆಯ ಪದಾಧಿಕಾರಿಗಳಾದ ಪ್ರೊ.ಜಿ.ವಿ. ವಳಸಂಗ, ಡಾ.ಆರ್.ಆರ್. ಪಾಟೀಲ, ಪ್ರೊ.ಎಂ.ಎಚ್.ದ್ಯಾವಪ್ಪನವರ, ಎನ್.ಎಚ್. ಹಿರೇಗೌಡರ ಮತ್ತು ಡಾ. ಎಂ.ವಿ. ಕುಂದಗೋಳ ಹಾಜರಿದ್ದರು.

 

ಪ್ರತಿಕ್ರಿಯಿಸಿ (+)