ಪ್ರತಿಭಾ ಮಲ್ಲಿಕಾರ್ಜುನ್ ತಾ.ಪಂ ಅಧ್ಯಕ್ಷೆ
ದಾವಣಗೆರೆ: ತಾಲ್ಲೂಕು ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಪ್ರತಿಭಾ ಮಲ್ಲಿಕಾರ್ಜುನ್, ಉಪಾಧ್ಯಕ್ಷರಾಗಿ ಎಚ್.ಎಂ. ಶಿವರುದ್ರಪ್ಪ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ತಾಲ್ಲೂಕು ಪಂಚಾಯ್ತಿಯಲ್ಲಿ ಈ ಸ್ಥಾನಗಳಿಗೆ ಚುನಾವಣೆಯಿತ್ತು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆ ಯಲ್ಲಿ ಅವಿರೋಧ ಆಯ್ಕೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. 24 ಸದಸ್ಯ ಬಲದ ತಾಲ್ಲೂಕು ಪಂಚಾಯ್ತಿಯಲ್ಲಿ 17 ಬಿಜೆಪಿ, 6 ಕಾಂಗ್ರೆಸ್ ಹಾಗೂ ಒಬ್ಬರು ಜೆಡಿಎಸ್ ಸದಸ್ಯರಿದ್ದಾರೆ.
ಮೂಲ ಸೌಕರ್ಯಕ್ಕೆ ಒತ್ತು: ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಪ್ರತಿಭಾ ಮಲ್ಲಿಕಾರ್ಜುನ್, ತಾಲ್ಲೂಕಿನ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಒಳಚರಂಡಿ, ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಪೂರೈಕೆ ಇತ್ಯಾದಿಗೆ ಆದ್ಯತೆ ನೀಡಲಾಗುವುದು. ಎಲ್ಲ ಜನಪ್ರತಿನಿಧಿಗಳ, ಸದಸ್ಯರ, ಅಧಿಕಾರಿಗಳ ವಿಶ್ವಾಸದೊಂದಿಗೆ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.
ಶಾಸಕ ಎಂ. ಬಸವರಾಜ ನಾಯ್ಕ ಮಾತನಾಡಿ, ದಾವಣಗೆರೆ ತಾಲ್ಲೂಕನ್ನು ಅತ್ಯುತ್ತಮ ತಾಲ್ಲೂಕನ್ನಾಗಿ ಮಾಡಲು ನಾವು ಸ್ಪಂದಿಸುತ್ತೇವೆ. ಪದವೀಧರರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇಲ್ಲಿ ಒಳ್ಳೆಯ ಸಭಾಂಗಣ ನಿರ್ಮಿಸಲಾಗಿದೆ. ಅಂದು ಅನುದಾನದ ಕೊರತೆಯಿತ್ತು. ಇದೀಗ ಅನುದಾನ ಹೆಚ್ಚಿಸಲಾಗಿದೆ. ಜಿಲ್ಲೆಯ ಸಚಿವರು, ವಿಧಾನ ಪರಿಷತ್ ಸದಸ್ಯರು, ಸಂಸದರು ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲಿಸುತ್ತೇವೆ. ಪಕ್ಷಕ್ಕೆ ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದರು.
ಉಪ ವಿಭಾಗಾಧಿಕಾರಿ ಕೆ.ಎಂ. ಜಾನಕಿ ಚುನಾವಣಾ ಅಧಿಕಾರಿಯಾಗಿದ್ದರು. ಕಾರ್ಯ ನಿರ್ವಾಹಕ ಅಧಿಕಾರಿ ಪ್ರಭುದೇವ್ ಇತರರು ಉಪಸ್ಥಿತರಿದ್ದರು. ಅಧ್ಯಕ್ಷರ ಆಯ್ಕೆ ಘೋಷಣೆಯಾದ ಕೂಡಲೇ ತಾ.ಪಂ. ಆವರಣದ ಹೊರಗೆ ಅಭಿಮಾನಿಗಳು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.