ಪ್ರತಿಭೆ ಅನಾವರಣಗೊಳಿಸಿದ ಜ್ಞಾನ ಸಿಂಚನ

7

ಪ್ರತಿಭೆ ಅನಾವರಣಗೊಳಿಸಿದ ಜ್ಞಾನ ಸಿಂಚನ

Published:
Updated:

 ಕಥೆ, ಕವನ, ಪ್ರಬಂಧ, ತಮ್ಮ ಗ್ರಾಮದ ಬಗ್ಗೆ ಸಮೀಕ್ಷೆ, ನಕ್ಷೆ, ಲೇಖನ, ಚಿತ್ರಗಳು, ಲಾವಣಿಗಳು ಮುಂತಾದವುಗಳ ಕುರಿತು ವಿದ್ಯಾರ್ಥಿಗಳಿಂದ ಬರೆಸಿದ್ದು ಮಾತ್ರವಲ್ಲದೇ ಶಿಕ್ಷಕರೂ ಸಹ ಬರೆದು ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿಯ ಸರ್ಕಾರಿ ಪ್ರೌಢಶಾಲಾ ಸಿಬ್ಬಂದಿಗಳು `ಜ್ಞಾನ ಸಿಂಚನ~ ಎಂಬ ನೂತನ ಕೃತಿಯನ್ನು ಹೊರತಂದಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಕಾಲೇಜುಗಳು ಹೊರತರುವ ವಾರ್ಷಿಕ ಸಂಚಿಕೆಗೆಳಿಗೆ ಪೈಪೋಟಿ ನೀಡುವ ಮಾದರಿಯಲ್ಲೇ ಸರ್ಕಾರಿ ಪ್ರೌಢಶಾಲೆಯವರೂ ವಿಭಿನ್ನ ರೀತಿಯ ಕೃತಿ ಹೊರತಂದಿದ್ದಾರೆ. ಸಾಮಾನ್ಯಜ್ಞಾನ, ಮಕ್ಕಳ ಸೃಜನಶೀಲತೆ, ಸೂಕ್ತಿ, ವಚನಗಳು, ಶಾಲೆಯ ಬಗ್ಗೆ ಮಾಹಿತಿ, ಚಿತ್ರಸಂಪುಟ, ಗಣಿತ, ಇತಿಹಾಸ, ಗ್ರಂಥ ಪರಿಚಯ, ಮಕ್ಕಳ ಸಾಧನೆ ಮುಂತಾದವುಗಳನ್ನು ಒಳಗೊಂಡಿರುವ ಈ ಕೃತಿ ಸಂಗ್ರಹಾಯೋಗ್ಯವಾಗಿದೆ.  `ಮಕ್ಕಳಲ್ಲಿ ಪ್ರತಿಭೆ ಇರುತ್ತದೆ. ಆದರೆ, ಕಾರಣಾಂತರಗಳಿಂದ ಬೆಳಕಿಗೆ ಬರುವುದಿಲ್ಲ. ವಿದ್ಯಾರ್ಥಿಗಳು ಪಠ್ಯಕ್ಕೆ ಮಾತ್ರ ಸೀಮಿತಗೊಳ್ಳದಿರಲಿ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಅವರಲ್ಲಿನ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುವ ಉದ್ದೇಶದಿಂದ `ಜ್ಞಾನ ಸಿಂಚನ~ ಎಂಬ ಕೃತಿಯನ್ನು ಹೊರತಂದಿದ್ದೇವೆ. ವಿದ್ಯಾರ್ಥಿಗಳು ರಚಿಸಿದ ಲೇಖನಗಳು, ಕವನಗಳನ್ನು ಸೂಕ್ಷ್ಮವಾಗಿ ಓದಿದರೆ, ಅವುಗಳಲ್ಲಿನ ವೈವಿಧ್ಯತೆ ಕಂಡು ಅಚ್ಚರಿಯಾಯಿತು~ ಎಂದು ಪುಸ್ತಕ ರೂಪಿಸುವಲ್ಲಿ ಶ್ರಮಿಸಿದ ಶಿಕ್ಷಕಿ ಎಂ.ಆನಂದಮ್ಮ `ಪ್ರಜಾವಾಣಿ~ಗೆ ತಿಳಿಸಿದರು.`ತಮಗೆ ಕಾಡುತ್ತಿರುವ ಕಾಯಿಲೆ ಕುರಿತು ಒಬ್ಬರು ಕವನ ರಚಿಸಿದರೆ, ಮತ್ತೊಬ್ಬರು ಗಾಂಧೀಜಿಯ ತತ್ವಾದರ್ಶಗಳನ್ನು ಲೇಖನದ ಮೂಲಕ ವಿವರಿಸಿದ್ದಾರೆ. ಗ್ರಾಮದ ಇತಿಹಾಸ ಮತ್ತು ಪ್ರಸ್ತುತ ಜನಜೀವನದ ಚಿತ್ರಣವನ್ನು ಬರಹದ ಮೂಲಕ ಮಕ್ಕಳು ಕಟ್ಟಿಕೊಟ್ಟಿರುವುದ ವಿಶೇಷತೆಯಿಂದ ಕೂಡಿದೆ. ಮಕ್ಕಳೊಂದಿಗೆ ನಾವು ಕೆಲವಷ್ಟು ಬರಹಗಳನ್ನು ಬರೆದಿದ್ದೇವೆ~ ಎಂದು ಅವರು ತಿಳಿಸಿದರು. `ಈ ಪುಸ್ತಕ ಪ್ರಕಟಣೆಗಾಗಿ ಹದಿನೈದು ಸಾವಿರ ರೂಪಾಯಿ ಖರ್ಚು ಮಾಡಿದ್ದೇವೆ. ನಮ್ಮ ಸಿಬ್ಬಂದಿ, ಮುಖ್ಯ ಶಿಕ್ಷಕರು, ದುರ್ಗಂ ಟ್ರಸ್ಟ್‌ನ ವ್ಯವಸ್ಥಾಪಕ ಗಿರೀಶ್, ಶಿಕ್ಷಣಾಧಿಕಾರಿ ಶ್ರೀಕಂಠ ಮತ್ತಿತರರ ಪ್ರೋತ್ಸಾಹದಿಂದ ಪುಸ್ತಕ ಹೊರತರಲು ಸಾಧ್ಯವಾಗಿದೆ. ಇದೇ ರೀತಿ ಪ್ರತಿವರ್ಷವೂ ಒಂದೊಂದು ಪುಸ್ತಕ ಹೊರತಂದು ಮಕ್ಕಳ ಪ್ರತಿಭೆಯನ್ನು ಹೊರಜಗತ್ತಿಗೆ ಅನಾವರಣ ಮಾಡುವ ಉದ್ದೇಶವಿದೆ~ ಎಂದು ಅವರು ಹೇಳಿದರು. `ನಮ್ಮ ಮಕ್ಕಳು ಬರೆದ ಪುಸ್ತಕವನ್ನು ಓದಿ ನಮಗೆಲ್ಲಾ ಹೆಮ್ಮೆ ಎನಿಸಿದೆ. ಬರೀ ಓದು, ಪಾಠ, ಪರೀಕ್ಷೆ ಎನ್ನದೆ ವಿವಿಧ ಚಟುವಟಿಕೆಗಳಲ್ಲಿ ಮಕ್ಕಳು ಆಸಕ್ತರಾದಾಗ ಮಾತ್ರ ಅವರ ವ್ಯಕ್ತಿತ್ವ ಪರಿಪೂರ್ಣಗೊಳ್ಳುತ್ತದೆ. ಈ ರೀತಿಯ ಪ್ರಯತ್ನಕ್ಕೆ ಗ್ರಾಮಸ್ಥರು ಸಹಕರಿಸಬೇಕು~ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಬಿ.ವೆಂಕಟೇಶ್ ಅಭಿಪ್ರಾಯಪಡುತ್ತಾರೆ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳ ರಾಮಚಂದ್ರನ್, ಶಾಲಾ ಮುಖ್ಯೋಪಾಧ್ಯಾಯ ಮಹೇಶ್, ಶಾಲಾ ಸಿಬ್ಬಂದಿಗಳಾದ ತಿಮ್ಮಣ್ಣ, ಗಿರೀಶ್, ದ್ಯಾವಪ್ಪ, ವೆಂಕಟರೆಡ್ಡಿ, ಶಿವರುದ್ರಸ್ವಾಮಿ, ರಾಮಚಂದ್ರ ಇತರರು ಪುಸ್ತಕದ ಕುರಿತು ಸಂತೋಷ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry