ಸೋಮವಾರ, ಏಪ್ರಿಲ್ 19, 2021
32 °C

ಪ್ರತಿಭೆ ಅನಾವರಣಗೊಳಿಸಿದ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯೆ ಪೂರ್ಣಿ ಮಾಗೋಪಾಲ್ ಹೇಳಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವ ಶಿಕ್ಷಣ ಅಭಿಯಾನ ವತಿಯಿಂದ ಇಲ್ಲಿನ ವಿಶ್ವ ಮಾನವ ಕುವೆಂಪು ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಪ್ರಾರಂಭಗೊಂಡ ಸೋಮವಾರಪೇಟೆ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳ ಪ್ರತಿಭೆಗೆ ತಕ್ಕ ತೀರ್ಮಾನಗಳು ಹೊರಬೀಳುವುದೂ ಅಗತ್ಯ. ತಪ್ಪು ತೀರ್ಮಾನದಿಂದ ಮಕ್ಕಳು ಬೇಸರಗೊಳ್ಳುತ್ತಾರೆ. ಇದರಿಂದ ವಿದ್ಯಾರ್ಥಿಗಳ ಪ್ರತಿಭೆಗೆ ಅನ್ಯಾಯವಾಗುತ್ತದೆ. ಇದರ ಬಗ್ಗೆ ಎಚ್ಚರ ವಹಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ಗ್ರಾಮೀಣ ಪ್ರತಿಭೆಗಳು ಹೊರ ಹೊಮ್ಮಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ವಿದ್ಯಾರ್ಥಿಗಳು ಪಾಶ್ಚ್ಯಾತ್ಯ ಸಂಸ್ಕೃತಿಯನ್ನು ಅನುಕರಿಸದೇ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನೃತ್ಯ ಪ್ರಕಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಮಹದೇವ್, ಶಿಕ್ಷಣ ಸಂಯೋಜಕ ರಾಮಚಂದ್ರಮೂರ್ತಿ, ಕುವೆಂಪು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗಣಪತಿ, ಪ್ರಗತಿಪರ ಮಹಿಳಾವೇದಿಕೆ ಅಧ್ಯಕ್ಷೆ ಗೋದಾ ಗಣಪತಿ, ಬಿ.ಟಿ.ಸಿ.ಜಿ. ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ, ಸಮೂಹ ಸಂಪನ್ಮೂಲ ವ್ಯಕ್ತಿ ಎ.ಜೆ. ಮೇರಿ, ಆಡಳಿತ ಮಂಡಳಿಯ ನಿರ್ದೇಶಕ ಎಚ್.ಪಿ. ರಾಜಪ್ಪ ಇತರರು ಇದ್ದರು.ಮುಖ್ಯ ಶಿಕ್ಷಕಿ ದಿವ್ಯ ಸ್ವಾಗತಿಸಿದರು. ಭವ್ಯ ನಿರೂಪಿಸಿದರು. ವಿನುತ ವಂದಿಸಿದರು. ವಿವಿಧ ಶಾಲಾ ಮಕ್ಕಳಿಂದ ಛದ್ಮವೇಷ, ಕ್ಲೇ ಮಾಡಲಿಂಗ್, ಚಿತ್ರಕಲೆ, ಕಂಠಪಾಠ, ಧಾರ್ಮಿಕ ಪಠಣ, ಲಘು ಸಂಗೀತ, ಅಭಿನಯ ಕಲೆ, ಯೋಗಾಸನ, ಜನಪದ ನೃತ್ಯ, ಕೋಲಾಟ, ರಸಪ್ರಶ್ನೆ, ಸ್ಥಳದಲ್ಲಿಯೇ ವಿಜ್ಞಾನ ಮಾದರಿ ತಯಾರಿಕೆಯ ಸ್ಪರ್ಧೆಗಳು ನಡೆದವು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.