ಮಂಗಳವಾರ, ಮೇ 11, 2021
27 °C

ಪ್ರತಿಷ್ಠಿತ ರಸ್ತೆಯಲ್ಲಿ ಕೊಳಚೆ ನೀರಿನ ಸ್ವಾಗತ

ಪ್ರಜಾವಾಣಿ ವಾರ್ತೆ/ಅನುಪಮಾ ಫಾಸಿ Updated:

ಅಕ್ಷರ ಗಾತ್ರ : | |

ಪ್ರತಿಷ್ಠಿತ ರಸ್ತೆಯಲ್ಲಿ ಕೊಳಚೆ ನೀರಿನ ಸ್ವಾಗತ

ಬೆಂಗಳೂರು: ನಗರದ ಪ್ರತಿಷ್ಠಿತ ರಸ್ತೆ ಚರ್ಚ್ ಸ್ಟ್ರೀಟ್‌ನಲ್ಲಿ ಕೆಲವು ದಿನಗಳಿಂದ ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದರೂ, ಒಳಚರಂಡಿ ದುರಸ್ತಿ ಪಡಿಸಲು ಜಲಮಂಡಳಿ ಅಧಿಕಾರಿಗಳು ಮುಂದಾಗಿಲ್ಲ. ರಸ್ತೆಯ ಮೇಲೆ ಒಳಚರಂಡಿಯ ಕೊಳಚೆ ನೀರು ಹರಿಯುತ್ತಿರುವುದರಿಂದ ರಸ್ತೆಯಲ್ಲಿ ಓಡಾಡುವವರಿಗೆ ನಿತ್ಯವೂ ತೊಂದರೆಯಾಗುತ್ತಿದೆ.ರಸ್ತೆಯುದ್ದಕ್ಕೂ ಹರಿಯುತ್ತಿರುವ ಒಳಚರಂಡಿಯ ಕೊಳಚೆ ನೀರು, ಮೂಗು ಮುಚ್ಚಿಕೊಂಡು ನಡೆದಾಡುವ ಜನ, ಕೊಳಚೆ ನೀರಿನಲ್ಲಿ ಸಂಚರಿಸಲು ಪರದಾಡುವ ವಾಹನಗಳು, ವಾಹನ ನಿಲುಗಡೆಗೆ ತೊಂದರೆ ಅನುಭವಿಸುವ ವಾಹನ ಸವಾರರು ಎಲ್ಲ ನೋಟಗಳೂ ತುಂಬಿದ ಒಳಚರಂಡಿಯತ್ತಲೇ ಬೊಟ್ಟು ಮಾಡುತ್ತವೆ.`ಕೆಲಸ ಮುಗಿದ ನಂತರ ಚರ್ಚ್ ಸ್ಟ್ರೀಟ್‌ನಲ್ಲಿ ಒಂದು ರೌಂಡ್ ಹೊಡೆಯುವುದು ನನ್ನ ಅಭ್ಯಾಸ. ಆದರೆ, ಈಗ ಕಳೆದ ಎರಡು ವಾರದಿಂದ ಇಲ್ಲಿ ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿರುವುದರಿಂದ ಹೆಜ್ಜೆಯಿಡಲು ಆಗುತ್ತಿಲ್ಲ. ಎರಡು ವಾರಗಳ ನಂತರ ಇಲ್ಲಿಗೆ ಬಂದಿದ್ದರೂ ಪರಿಸ್ಥಿತಿ ಹಾಗೆಯೇ ಇದೆ' ಎಂದು ಬೇಸರ ವ್ಯಕ್ತಪಡಿಸಿದರು ಖಾಸಗಿ ಕಂಪೆನಿ ಉದ್ಯೋಗಿ ವೆಂಕಟೇಶ ಅವರು.`ನಗರದಲ್ಲಿಯೇ ಪ್ರತಿಷ್ಠಿತ ರಸ್ತೆ ಚರ್ಚ್ ಸ್ಟ್ರೀಟ್. ಇಲ್ಲಿಗೆ ಅನೇಕ ವಿದೇಶಿಯರು ಭೇಟಿ ನೀಡುತ್ತಾರೆ. ಅವರ ದೃಷ್ಟಿಯಲ್ಲಿ ನಗರದ ಮಾನ ಹರಾಜಾಗುತ್ತಿದೆ. ಎಲ್ಲರೂ ಮೂಗು ಮುಚ್ಚಿಕೊಂಡು ನಡೆಯುವಂತಹ ಪರಿಸ್ಥಿತಿಯಿದೆ. ಕೂಡಲೇ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರ ಯೋಗ್ಯಗೊಳಿಸಬೇಕು' ಎಂದು ವ್ಯಾಪಾರಿ ಆನಂದ ಒತ್ತಾಯಿಸುತ್ತಾರೆ.ಇದೇ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅದ್ಯಕ್ಷ ಡಾ.ವಾಮನ ಆಚಾರ್ಯ ಈ ಕುರಿತು ಪ್ರತಿಕ್ರಿಯಿಸಿ, `ನಗರದಲ್ಲಿ ಹೋಟೆಲ್‌ಗಳು ಹೆಚ್ಚಿರುವ ಭಾಗಗಳಲ್ಲಿ ಈ ಸಮಸ್ಯೆ ಇದ್ದೇ ಇದೆ. ಏಕೆಂದರೆ, ಹೋಟೆಲ್‌ಗಳಿಂದ ಹರಿದು ಬರುವ ತ್ಯಾಜ್ಯದಿಂದ ಅಲ್ಲಿನ ಒಳಚರಂಡಿಯು ಕಟ್ಟಿಕೊಳ್ಳುತ್ತದೆ. ಈ ಕುರಿತು ಹೋಟೆಲ್‌ನವರೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು' ಎಂದರು.`ಜಲಮಂಡಳಿಯವರು ಈ ಸಮಸ್ಯೆಯನ್ನು ಬಗೆಹರಿಸಬೇಕು. ಅವರಲ್ಲಿ ಈ ಕುರಿತು ಮಾತನಾಡಿದ್ದೇನೆ. ಅವರು ಶೀಘ್ರವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು  ಹೇಳಿದ್ದಾರೆ. ಪರಿಸರ ಭವನದ ರಸ್ತೆಯೇ ಈ ರೀತಿ ಆಗಿರುವುದು ನನಗೆ ಮುಜುಗರ ಉಂಟು ಮಾಡುತ್ತಿದೆ' ಎಂದು ಹೇಳಿದರು.`ಈ ಸಮಸ್ಯೆ ಗಂಭೀರವಾಗಿದೆ. ಮಳೆ ಬಂದಾಗ ಸಮಸ್ಯೆಯ ಪರಿಣಾಮ ತಿಳಿಯುತ್ತದೆ. ಇಲ್ಲಿ ಕೊಳಚೆ ನೀರು ಹರಿದು ಹೋಗಲು ದೊಡ್ಡ ಪೈಪ್‌ಗಳನ್ನು ಅಳವಡಿಸಬೇಕು ಅಥವಾ ಹೋಟೆಲ್‌ನವರೇ ಘನ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಮತ್ತು ಒಳಚರಂಡಿಗೆ ಸೇರಿಸದಂತೆ ಕ್ರಮ ಕೈಗೊಳ್ಳಬೇಕು' ಎಂದು ತಿಳಿಸಿದರು.ಜಲಮಂಡಳಿಯ ಮುಖ್ಯ ಎಂಜಿನಿಯರ್ ಟಿ.ವೆಂಕಟರಾಜು ಮಾತನಾಡಿ, `ಇಲ್ಲಿ ಜೋಡಿಸಿರುವ ಪೈಪ್‌ಗಳು ಅತಿ ಚಿಕ್ಕದಾಗಿವೆ. ಮೊದಲು ಹೆಚ್ಚೇನೂ ಕಟ್ಟಡಗಳಿರಲಿಲ್ಲ. ಇದರಿಂದ ಈ ಸಮಸ್ಯೆಯಾಗಿರಲಿಲ್ಲ. ಈಗ ಇಲ್ಲಿ ಹೋಟೆಲ್ ಮತ್ತು ಕಟ್ಟಡಗಳ ಸಂಖ್ಯೆ ಹೆಚ್ಚಾಗಿದೆ. ಸುಮಾರು 40 ವರ್ಷಗಳ ಹಿಂದೆ ಇಲ್ಲಿನ ಒಳಚರಂಡಿ ಪೈಪ್‌ಗಳನ್ನು ಅಳವಡಿಸಲಾಗಿದೆ' ಎಂದರು.`ಇಲ್ಲಿ ಹಾಕಿರುವ ಪೈಪ್‌ಗಳು 175 ಮಿ.ಮೀ. ಇವೆ. ಇದರಿಂದ ಪೈಪ್‌ಗಳನ್ನು ಬದಲಿಸಬೇಕು. 300 ಮಿ.ಮೀ. ಅಳತೆಯ ಪೈಪ್‌ಗಳನ್ನು ಅಳವಡಿಸಬೇಕು. ಬ್ರಿಗೇಡ್ ರಸ್ತೆಯಿಂದ ರಸ್ತೆಯನ್ನೆಲ್ಲಾ ಅಗೆದು ಕಾಮಗಾರಿ ಕೈಗೊಂಡು ಎರಡೂ ಕಡೆಗೂ 300 ಮಿ.ಮೀ. ಅಳತೆಯ ಪೈಪ್‌ಗಳನ್ನು ಅಳವಡಿಸುವುದೇ ಸಮಸ್ಯೆಗೆ ಪರಿಹಾರವಾಗಿದೆ. ಈ ಕಾಮಗಾರಿಗಾಗಿ ಟೆಂಡರ್ ಕರೆಯಲಾಗಿದೆ' ಎಂದು ತಿಳಿಸಿದರು.

ಶಾಶ್ವತ ಪರಿಹಾರಕ್ಕೆ ಕಾಮಗಾರಿ

ಚರ್ಚ್ ಸ್ಟ್ರೀಟ್‌ನಲ್ಲಿ ಅಳವಡಿಸಿರುವ ಪೈಪ್‌ಗಳು ಚಿಕ್ಕದಾಗಿರುವುದರಿಂದ ಹೊಸ ಪೈಪ್‌ಲೈನ್ ಹಾಕಬೇಕು. ಇದಕ್ಕಾಗಿ ಬಿಬಿಎಂಪಿಯ ಜತೆಗೂಡಿ ಟೆಂಡರ್ ಕರೆದಿದ್ದೇವೆ. ಇನ್ನು ಯಾರೂ ಟೆಂಡರ್ ಹಾಕಲು ಮುಂದೆ ಬಂದಿಲ್ಲ. ಈಗ ಸದ್ಯ ಎರಡು ದಿನಗಳಲ್ಲಿ ಒಂದು ಬಾರಿಯಂತೆ ಸ್ವಚ್ಛ ಮಾಡುತ್ತಿದ್ದೇವೆ. ಆದಷ್ಟು ಬೇಗ ಶಾಶ್ವತ ಪರಿಹಾರಕ್ಕೆ ಕಾಮಗಾರಿ ಕೈಗೊಳ್ಳಲಾಗುವುದು

-ಟಿ.ವೆಂಕಟರಾಜು,

ಮುಖ್ಯ ಎಂಜಿನಿಯರ್, ಜಲಮಂಡಳಿ

ಕಾರಣ ಕೇಳಿ ನೋಟಿಸ್

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಕಾರಣ ಕೇಳಿ ಹಾಗೂ ಚರ್ಚ್ ಸ್ಟ್ರೀಟ್‌ನಲ್ಲಿನ ಎಲ್ಲ ಹೋಟೆಲ್‌ಗಳಿಗೂ ಈಗಾಗಲೇ ನೋಟಿಸ್ ನೀಡಲಾಗಿದೆ. ಅವರ ಹೋಟೆಲ್‌ಗಳಿಂದ ಹರಿದುಬರುವ ಕಸ ಅಥವಾ ತ್ಯಾಜ್ಯವು ಕೊಳಚೆ ನೀರು ಸೇರುವುದಕ್ಕೆ ಅವರೇ ಜವಾಬ್ದಾರರಾಗಿದ್ದಾರೆ ಈ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ

-ಡಾ. ವಾಮನ ಆಚಾರ್ಯ,  

ಅಧ್ಯಕ್ಷ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ.

ಗ್ರಾಹಕರ ಸಂಖ್ಯೆ ಕಡಿಮೆ

ಒಳಚರಂಡಿಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ, ರಸ್ತೆಯಲ್ಲಿ ಓಡಾಡುವುದೇ ಸಮಸ್ಯೆಯಾಗಿದೆ, ಮಳೆ ಬಂದರೆ ಮೊಣಕಾಲವರೆಗೂ ನೀರು ನಿಲ್ಲುತ್ತದೆ. ಮಳೆ ನೀರು ಅಥವಾ ಕೊಳಚೆ ನೀರು ಹರಿಯಲು ಇಲ್ಲಿ ಅವಕಾಶವೇ ಇಲ್ಲದಂತಾಗಿದೆ. ಅಂಗಡಿ ಮುಂದೆ ನೀರು ನಿಂತಿರುವುದರಿಂದ ಬರುವ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿದೆ

-ಹೇಮಂತ್, ಪಾನ್ ಅಂಗಡಿ ಮಾಲೀಕಮೂರನೇ ದಿನ ಮತ್ತೆ ಕೊಳಚೆ ನೀರು

ಕಳೆದ ಎರಡು ವಾರಗಳಿಂದ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಎರಡು ದಿನಕ್ಕೊಮ್ಮೆ ಬಂದು ಸ್ವಚ್ಛಗೊಳಿಸಿ ಹೋಗುತ್ತಿದ್ದಾರೆ. ಆದರೆ, ಮೂರನೇ ದಿನ ಮತ್ತೆ ಒಳಚರಂಡಿಯ ನೀರು ರಸ್ತೆ ಮೇಲಿರುತ್ತದೆ.

-ಎಸ್.ಕೆ.ಶಬೀರ್, ಹೋಟೆಲ್ ಕೆಲಸಗಾರಡೆಟಾಲ್ ಸಿಂಪಡಣೆ

ಒಳಚರಂಡಿ ಕೊಳಚೆ ನೀರಿನಿಂದ ಕೆಟ್ಟ ವಾಸನೆ ಬರುತ್ತದೆ. ಇಲ್ಲಿ ರಾತ್ರಿ ಮಲಗಲು ಕಷ್ಟಪಡಬೇಕಾಗುತ್ತದೆ. ಸೊಳ್ಳೆಗಳೂ ಹೆಚ್ಚಾಗಿವೆ. ನಾವು ಕೆಲಸ ಮಾಡುವ ಹೋಟೆಲ್ ಮುಂದೆ ವಾಸನೆ ಹೋಗಲಿ ಎಂದು ಡೆಟಾಲ್ ಸಿಂಪಡಿಸುತ್ತೇವೆ

- ಅಬ್ದುಲ್ ಖಾನ್, ಹೊಟೇಲ್ ಕೆಲಸಗಾರಕೆಟ್ಟ ವಾಸನೆ

ಕೊಳಚೆ ನೀರು ನಿಲ್ಲುವುದರಿಂದ ಇಲ್ಲಿ ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ಇದರಿಂದ, ಇಲ್ಲಿನ ಇಬ್ಬರು ಹುಡುಗರನ್ನು ಕರೆದುಕೊಂಡು ಸ್ವಲ್ಪ ಸ್ವಚ್ಛಗೊಳಿಸಿದ್ದೇವೆ. ಕೊಳಚೆ ನೀರು ಕೆಟ್ಟ ವಾಸನೆ ಬೀರುವುದರಿಂದ ಇಲ್ಲಿ ಬರುವ ಗ್ರಾಹಕರ ಸಂಖ್ಯೆಯೂ ಇಳಿಮುಖವಾಗಿದೆ. ಎಲ್ಲ ಹೋಟೆಲ್ ಮಾಲೀಕರು ಅವರ ಹೋಟೆಲ್ ಮುಂದೆ ಮಾತ್ರ ಸ್ವಚ್ಛ ಮಾಡಿಕೊಳ್ಳುತ್ತಾರೆ

-ಭಾಸ್ಕರ್, ವಾಹನ ನಿಲುಗಡೆಯ ಸಿಬ್ಬಂದಿಸರಿಯಾದ ನಿರ್ವಹಣೆ ಇಲ್ಲ

ಎಲ್ಲಿಯೂ ಸರಿಯಾದ ನಿರ್ವಹಣೆ ಇಲ್ಲ. ನಿತ್ಯ ಇಲ್ಲಿನ ಹೋಟೆಲ್‌ಗೆ ತಿಂಡಿ ತಿನ್ನಲು ಬರುತ್ತೇನೆ. ಆದರೆ, ಕಳೆದ ಒಂದು ವಾರದಿಂದ ಇಲ್ಲಿ ಬರಲು ಮನಸ್ಸಾಗುತ್ತಿಲ್ಲ. ಇಲ್ಲಿನ ಕೆಟ್ಟ ವಾಸನೆ ಮತ್ತು ರಸ್ತೆಯ ಮೇಲೆ ಹರಿಯುವ ಕೊಳಚೆ ನೀರಿನಿಂದ ಇಲ್ಲಿ ಬರಲು ಮನಸ್ಸು ಹಿಂದೇಟು ಹಾಕುತ್ತಿದೆ

-ಕುಮಾರ್, ಖಾಸಗಿ ಕಂಪೆನಿ ಉದ್ಯೋಗಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.