ಪ್ರತಿಷ್ಠೆ ಒಂದುಗೂಡುವಿಕೆಗೆ ಕುತ್ತು!

7
ನಗರಸಭೆಯಲ್ಲಿ ಕೆಜೆಪಿ–ಬಿಜೆಪಿಗೆ ಮುಖಭಂಗ

ಪ್ರತಿಷ್ಠೆ ಒಂದುಗೂಡುವಿಕೆಗೆ ಕುತ್ತು!

Published:
Updated:

ಹಾವೇರಿ: ಸಲೀಸಾಗಿ ಅಧಿಕಾರ ಹಿಡಿಯುವಷ್ಟು ಬಹುಮತ ಇದ್ದಾಗಲೂ ಪರಸ್ಪರ ಪ್ರತಿಷ್ಠೆಗೆ ಕಟ್ಟು ಬಿದ್ದು ನಗರಸಭೆ ಅಧಿಕಾರವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡುವ ಮೂಲಕ ಕೆಜೆಪಿ ಮತ್ತು ಬಿಜೆಪಿ ತೀವ್ರ ಮುಖಭಂಗ ಅನುಭವಿಸಿವೆ.ಕೆಜೆಪಿ ಜನನಕ್ಕೆ ವೇದಿಕೆಯಾಗಿದ್ದ ಹಾವೇರಿ ಜಿಲ್ಲೆ, ವಿಧಾನ ಪರಿಷತ್‌ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿ ಹಾಕುವ ಮೂಲಕ ಎರಡೂ ಪಕ್ಷಗಳು ಒಗ್ಗೂಡುವಿಕೆಗೆ ವೇದಿಕೆ ಕಲ್ಪಿಸಿತ್ತು. ತಾನಾಗಿಯೇ ಒಲಿದು ಬಂದ ಹಾವೇರಿ ನಗರಸಭೆ ಅಧ್ಯಕ್ಷ ಸ್ಥಾನ ಪಡೆದು ಆ ವೇದಿಕೆಯನ್ನು ಮತ್ತಷ್ಟು ಗಟ್ಟಿಗೊಳಿ ಸುವ ಬದಲು, ಎರಡೂ ಪಕ್ಷಗಳು ಕೈಗೆ ಬಂದ ತುತ್ತನ್ನು ದೂರ ತಳ್ಳಿ ತಾವೇ ನಿರ್ಮಿಸಿಕೊಂಡಿದ್ದ ವೇದಿಕೆ ಕುಸಿಯುವಂತೆ ಮಾಡಿವೆ.ಲೋಕಸಭೆ ಚುನಾವಣೆ ಬರುವುದ ರೊಳಗೆ ಎರಡೂ ಪಕ್ಷಗಳ ಒಂದು ಗೂಡಿಸಲು ರಾಜ್ಯ, ರಾಷ್ಟ್ರಮಟ್ಟದ ನಾಯಕರು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಆದರೆ, ಸ್ಥಳೀಯ ಮಟ್ಟ ದಲ್ಲಿ ಒಂದುಗೂಡುವಿಕೆಗೆ ಸಹಮತವೂ ಇಲ್ಲ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಿದೆ.ಹಗ್ಗ ಜಗ್ಗಾಟ: 31 ಸದಸ್ಯರ ಹಾವೇರಿ ನಗರಸಭೆಯಲ್ಲಿ ಬಿಜೆಪಿಯ 9, ಕೆಜೆಪಿಯ 8 (ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸದಸ್ಯ ಸೇರಿ 9) ಹಾಗೂ ಕಾಂಗ್ರೆಸ್‌ 13 ಜನ ಸದಸ್ಯರನ್ನು ಹೊಂದಿದೆ. ಅಧಿಕಾರ ಹಿಡಿಯಲು 16 ಜನ ಸದಸ್ಯರ ಬಲಬೇಕು. ಬಿಜೆಪಿಯ 9 ಹಾಗೂ ಕೆಜೆಪಿಯ 9 ಸದಸ್ಯರು ಸೇರಿದರೆ 18 ಜನ ಸದಸ್ಯರಾಗುತ್ತಾರೆ. ಹೀಗಾಗಿ ಯಾವುದೇ ತೊಂದರೆ ಇಲ್ಲದೇ ಅಧಿಕಾರ ಹಿಡಿಯಬಹುದಿತ್ತು. ಆದರೆ, ಕೆಜೆಪಿ ಹಾಗೂ ಬಿಜೆಪಿ ಮುಖಂಡರು ಅಧ್ಯಕ್ಷ ಸ್ಥಾನವನ್ನು ತಮಗೆ ಕೊಡಬೇಕು ಎಂದು ಮೂರು ದಿನಗಳಿಂದ ಹಗ್ಗ ಜಗ್ಗಾಟ ನಡೆಸಿದ್ದರು.ಕೆಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸಿ.ಎಂ.ಉದಾಸಿ, ಮಾಜಿ ಶಾಸಕರಾದ ನೆಹರೂ ಓಲೇಕಾರ, ಶಿವರಾಜ ಸಜ್ಜನರ ಅವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ ಎರಡ್ಮೂರು ದಿನಗಳಿಂದ ಮುಖಾಮುಖಿ ಹಾಗೂ ಮೊಬೈಲ್‌ ಮೂಲಕ ಮಾತುಕತೆ ನಡೆಸಿದ್ದರು. ಅಧ್ಯಕ್ಷ ಸ್ಥಾನ ಎರಡು ಅವಧಿಗೆ ವಿಂಗಡಣೆ ಮಾಡಲು ಒಪ್ಪಿಕೊಂಡರೂ, ಮೊದಲ ಅವಧಿ ಯಾರಿಗೆ ಕೊಡಬೇಕು ಎಂಬುದರ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ.ವಾದ ಮಂಡನೆ: ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಿ ಕೆಜೆಪಿ ಅಭ್ಯರ್ಥಿಯನ್ನು ಸ್ಪರ್ಧೆಯಿಂದ ಹಿಂದೆ ಸರಿಸಲಾಗಿದೆ. ಅದಕ್ಕಾಗಿ ನಗರಸಭೆ ಅಧ್ಯಕ್ಷ ಸ್ಥಾನವನ್ನು ಕೆಜೆಪಿಗೆ ಬಿಟ್ಟು ಕೊಡಬೇಕು ಎಂದು ಕೆಜೆಪಿ ಮುಖಂಡರು ಪಟ್ಟು ಹಿಡಿದರೆ, ವಿಧಾನ ಪರಿಷತ್‌ ಚುನಾವಣೆಯಲ್ಲಿ ನಾವು ಕೂಡಾ ಮೈಸೂರಲ್ಲಿ ಅಭ್ಯರ್ಥಿ ಹಾಕದೇ ಬೆಂಬಲಿಸಿದ್ದೇವೆ ಎಂದು ತಿಳಿಸಿದ್ದಾರೆ.ಅದೂ ಅಲ್ಲದೇ ನಿಮ್ಮ (ಕೆಜೆಪಿ) ಪಕ್ಷದ ಚಿಹ್ನೆಯಿಂದ ಆಯ್ಕೆಯಾದ ಅಭ್ಯರ್ಥಿ ಅಧ್ಯಕ್ಷ ಮೀಸಲಾತಿ ಹೊಂದಿದ ವರಿಲ್ಲ. ಈಗ ನೀವು ಹೇಳುವ ಅಭ್ಯರ್ಥಿ (ಇರ್ಫಾನ್‌ ಪಠಾಣ) ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಆಯ್ಕೆಯಾದವರು. ಬಿಜೆಪಿ ರಾಷ್ಟ್ರೀಯ ಪಕ್ಷ. ನಮ್ಮ ಪಕ್ಷದ 9 ಜನ ಸದಸ್ಯರಿದ್ದಾರೆ. ಅದರಲ್ಲಿ ನಾಲ್ಕು ಜನ ಅಧ್ಯಕ್ಷರಾಗಲು ಅರ್ಹರಿದ್ದಾರೆ. ಹೀಗಿದ್ದಾಗ ನ್ಯಾಯಯುತವಾಗಿ ಮೊದಲ ಅವಧಿ ಅಧ್ಯಕ್ಷ ಸ್ಥಾನ ಯಾರಿಗೆ ಸಿಗಬೇಕು ಎಂಬುದನ್ನು ನೀವೆ ಹೇಳಿ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.ಹೀಗೆ ಎರಡೂ ಪಕ್ಷದ ಮುಖಂಡರು ಪರಸ್ಪರ ತಮ್ಮ ನಿಲುವಿಗೆ ಅಂಟಿಕೊಂಡು  ಎರಡೂ ಪಕ್ಷಗಳ ಒಂದುಗೂಡುವಿಕೆಗೆ ಅಡ್ಡಿಯಾಗಿರುವುದನ್ನು ನೋಡಿದರೆ, ಜಿಲ್ಲೆಯ ಮುಖಂಡರಿಗೆ ಕೆಜೆಪಿ ಬಿಜೆಪಿಯ ವಿಲೀನದ ಬಗ್ಗೆ ಒಲವು ಇದ್ದಂತಿಲ್ಲ ಎಂಬುದು ಸ್ಪಷ್ಟವಾಗುತ್ತದೆ.ಕಾಂಗ್ರೆಸ್‌ ತಂತ್ರಗಾರಿಕೆ: ಇದನ್ನೇ ಬಂಡವಾಳ ಮಾಡಿಕೊಂಡ ಕಾಂಗ್ರೆಸ್‌, ಮೂರ್ನಾಲ್ಕು ಜನ ಆಕಾಂಕ್ಷಿಗಳಿದ್ದರೂ ಒಮ್ಮತದ ಅಭ್ಯರ್ಥಿಯನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿ, ಉಳಿದ ಆಕಾಂಕ್ಷಿ ಗಳನ್ನು ಸಮಾಧಾನ ಪಡಿಸುವ ಮೂಲಕ ತಮ್ಮ ಪಕ್ಷದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಮಾಡಿಕೊಂಡಿ ತಲ್ಲದೇ, ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಬಿಜೆಪಿ ಮುಖಂಡರ ಸಹಕಾರ ಕೋರಿ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ ಎಂದು ಹೇಳಲಾಗುತ್ತದೆ.ವಿರೋಧ ಪಕ್ಷಕ್ಕೆ ಆಶೀರ್ವಾದ: ‘ನಗರದ ಜನತೆ ನಮಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಆಶೀರ್ವಾದ ಮಾಡಿದ್ದಾರೆ. ಅದೇ ಕಾರಣಕ್ಕೆ ವಿರೋಧ ಪಕ್ಷದಲ್ಲಿ ಕುಳಿತು ನಗರದ ಅಭಿವೃದ್ಧಿಗೆ ಕ್ರಿಯಾಶೀಲ ವಿರೋಧ ಪಕ್ಷವಾಗಿ ಕೆಲಸ ಮಾಡಲಿದ್ದೇವೆ. ಇಂದಿನ ಬೆಳವಣಿಗೆ ಪಕ್ಷದ ಸಂಘಟನೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರ ಹೇಳಿದ್ದಾರೆ.ಬೆನ್ನಿಗೆ ಚೂರಿ: ಜಿಲ್ಲೆಯ ಬಿಜೆಪಿ ಮುಖಂಡರು ಕಾಂಗ್ರೆಸ್‌ ಪಕ್ಷದೊಂದಿಗೆ ಒಳ ಒಪ್ಪಂದ  ಮಾಡಿ ಕೊಂಡು ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಕೆಜೆಪಿ ಮುಖಂಡ ಹಾಗೂ ಮಾಜಿ ಶಾಸಕ ನೆಹರೂ ಓಲೇಕಾರ ಆರೋಪಿಸಿದ್ದಾರೆ.ಕಾದು ನೋಡಿ...

‘ಕೆಜೆಪಿ–ಬಿಜೆಪಿ ಹೊಂದಾಣಿಕೆಯಾಗದೇ ನಗರಸಭೆ ಅಧಿಕಾರ ಹಿಡಿಯುವಲ್ಲಿ ವಿಫಲರಾಗಿರುವ ಬಗ್ಗೆ ಏನು ಹೇಳುವುದಿಲ್ಲ. ಆದರೆ, ಇದರ ಪರಿಣಾಮ ರಾಜ್ಯ ಮಟ್ಟದಲ್ಲಿ ಬಿಜೆಪಿ–ಕೆಜೆಪಿ ಹೊಂದಾಣಿಕೆ ಮೇಲೆ ಯಾವ ರೀತಿ ಪರಿಣಾಮ ಬಿರಲಿದೆ ಎಂಬುದನ್ನು ಕಾದು ನೋಡಿ‘ ಎಂದು ಕೆಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸಿ.ಎಂ.ಉದಾಸಿ ಪತ್ರಿಕೆಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry