ಬುಧವಾರ, ಮೇ 25, 2022
30 °C

ಪ್ರತಿ ಗ್ರಾ.ಪಂಗೆ ಸಿಎಜಿ ಪ್ರತಿನಿಧಿ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಮಹಾಲೇಖಪಾಲರ (ಸಿಎಜಿ) ಪ್ರತಿನಿಧಿಗಳನ್ನು ಕಳುಹಿಸುವ ಮುಖಾಂತರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಲೆಕ್ಕ ಪರಿಶೀಲನೆ ಮಾಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ಎಂಎನ್‌ಆರ್‌ಇಜಿಎ) ವ್ಯಾಪಕ ಭ್ರಷ್ಟಾಚಾರದ ವರದಿಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ ಪ್ರದೀಪ್ ಜೈನ್ ತಿಳಿಸಿದ್ದಾರೆ.ಮಂಗಳವಾರ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ಯಾರ ವಿರುದ್ಧವೇ ಆಗಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದರೆ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಈ ದಿಸೆಯಲ್ಲಿ ಸಿಎಜಿ ಪ್ರತಿನಿಧಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.ಉದ್ಯೋಗ ಖಾತರಿ ಯೋಜನೆಯಲ್ಲಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳೇ ಕ್ರಮ ಕೈಗೊಳ್ಳಲು ಶಕ್ತವಾಗಿವೆ. ಕೇಂದ್ರ ಸರ್ಕಾರ ಏನಿದ್ದರೂ ರಾಷ್ಟ್ರೀಯ ಮಟ್ಟದ ನಿರ್ವಹಣಾ ವ್ಯವಸ್ಥೆಯಲ್ಲಿನ ಆರೋಪಗಳನ್ನು ಮಾತ್ರವೇ ಪರಿಶೀಲಿಸಬಲ್ಲದು. ಗ್ರಾಮ ಸಭೆ ಮತ್ತು ಪಂಚಾಯಿತಿಗಳು ರಾಜ್ಯ ನಿರ್ವಹಣೆಗೆ ಬಿಟ್ಟ ವಿಚಾರ. ಈ ಬಗ್ಗೆ ಆಯಾ ರಾಜ್ಯಗಳೇ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ನಡೆಸಬೇಕು.ಅಗತ್ಯ ಪರಿಶೀಲನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂಬ ಅಭಿಪ್ರಾಯವನ್ನು ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಕಳೆದ ತಿಂಗಳು ನಡೆದ ಸಭೆಯಲ್ಲಿ ತಿಳಿಸಿತ್ತು. ಅಂತೆಯೇ ಲೆಕ್ಕ ಪರಿಶೀಲನಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಬೇಕಿದೆ ಎಂದೂ ಅಭಿಪ್ರಾಯಪಟ್ಟಿತ್ತು. ಈ ದಿಸೆಯಲ್ಲಿ ಸಿಎಜಿ ನೆರವು ಪಡೆಯಲು ಸಚಿವಾಲಯ ನಿರ್ಧರಿಸಿದೆ ಎಂದು ಅವರು ತಿಳಿಸಿದರು. ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆಯಲ್ಲೂ ಸಿಎಜಿಯು ಯೋಜನೆಯ ವಾರ್ಷಿಕ ವರದಿ ಪರಿಶೀಲಿಸಿ ಲೆಕ್ಕ ತಪಾಸಣೆ ನಡೆಸಲಿದೆ. ಸ್ಥಳೀಯ ಲೆಕ್ಕ ಪರಿಶೋಧಕರು ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಲೆಕ್ಕ ಪರಿಶೋಧಕರ ಮುಖಾಂತರ ಸಿಎಜಿ ಪ್ರತಿನಿಧಿಗಳು ಈ ಯೋಜನೆಯ ಲೆಕ್ಕ ಪರಿಶೀಲನೆ ನಡೆಸುವ ಅಧಿಕಾರ ಹೊಂದಿರುತ್ತಾರೆ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.