ಮಂಗಳವಾರ, ಮಾರ್ಚ್ 9, 2021
18 °C

ಪ್ರತಿ ಚಿತ್ರವೂ ಹೊಸತು...

ಡಿ.ಎಂ. ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

ಪ್ರತಿ ಚಿತ್ರವೂ ಹೊಸತು...

ಏರಿಳಿತದಲ್ಲಿದ್ದ ನಟ ಗಣೇಶ್‌ ಅವರ ಸಿನಿಮಾಗ್ರಾಫ್ ಪುನಃ ಹಸಿರು ಹಾದಿಗೆ ಬಂದಿದೆ. ಲವ್ವರ್ ಬಾಯ್, ಮಳೆ ಹುಡುಗನ ಇಮೇಜನ್ನು ಬದಿಗೆ ಸರಿಸದೆಯೇ ತಮ್ಮ ನವಿರು ಮ್ಯಾನರಿಸಂನಿಂದ ಗಣೇಶ್ ಮತ್ತೆ ಪುಟಿದಿದ್ದಾರೆ. ‘ಮೆಟ್ರೊ’ ಜತೆ ಮಾತನಾಡಿದ ಅವರ ಮಾತುಗಳಲ್ಲಿ ತಮ್ಮ ಇತ್ತೀಚಿನ ಚಿತ್ರಗಳ ಗೆಲುವಿನ ಹುಮ್ಮಸ್ಸು ಕಾಣಿಸುತ್ತಿತ್ತು. ‘ಪ್ರತಿ ಚಿತ್ರವನ್ನೂ ಹೊಸದೆಂತಲೇ ಒಪ್ಪಿಕೊಳ್ಳುವುದು’ ಎಂದ ಅವರು– ‘ಶ್ರಾವಣಿ ಸುಬ್ರಹ್ಮಣ್ಯ’ ತಮಗೆ ಮತ್ತೆ ಬ್ರೇಕ್ ನೀಡಿದ ಚಿತ್ರ ಎನ್ನುವುದನ್ನು ಒಪ್ಪಿಕೊಂಡರು. ಈಗಾಗಲೇ ಚಿತ್ರ ನಿರ್ಮಾಪಕನ ಕ್ಯಾಪು ತೊಟ್ಟಿರುವ ಗಣೇಶ್, ಮತ್ತೆ ಸಿನಿಮಾ ನಿರ್ದೇಶನದತ್ತಲೂ ಮನಸ್ಸು ಮಾಡಿದ್ದಾರಂತೆ. ಆದರೆ ಬಿಡುವಿಲ್ಲದ ಚಿತ್ರೀಕರಣದ ಕಾರಣಕ್ಕೆ ಆ ಕ್ಯಾಪನ್ನು ತೊಡುವುದು ತಡವಾಗಬಹುದಂತೆ. ‘ಈ ವರ್ಷ ಮೂರ್ನಾಲ್ಕು ಸಿನಿಮಾ ಕೈಯಲ್ಲಿರುವುದರಿಂದ ನಿರ್ದೇಶನದತ್ತ ಗಮನ ಹರಿಸಲು ಸಾಧ್ಯವಿಲ್ಲ. ನಿರ್ದೇಶನದತ್ತ ತುಡಿತವಿದೆ, ಆದರೆ ಸಿದ್ಧತೆ ಮಾಡಿಕೊಂಡಿಲ್ಲ’ ಎಂದು ಭವಿಷ್ಯದಲ್ಲಿ ನಿರ್ದೇಶಕನಾಗುವ ಬಯಕೆಯನ್ನು ವ್ಯಕ್ತಪಡಿಸಿದರು.ತಮ್ಮ ಈ ಹಿಂದಿನ ಸೋಲುಗಳನ್ನು ಅವರು ಬಣ್ಣಿಸುವುದೂ ಹೀಗೆ. ‘ನನ್ನ ಚಿತ್ರಗಳು ಏಕೆ ಸೋತವೆಂದು ನನಗೆ ಗೊತ್ತಿಲ್ಲ. ಒಂದು ಚಿತ್ರ ಗೆಲ್ಲಲು ಸಾವಿರ ಕಾರಣಗಳಿದ್ದರೆ, ಸೋಲಲು 10 ಸಾವಿರ ಕಾರಣಗಳು ಕಾಣುತ್ತವೆ. ಅದನ್ನೆಲ್ಲ ಆಪರೇಶನ್ ಮಾಡಿಕೊಂಡು ಕೂರಲು ಸಾಧ್ಯವಿಲ್ಲ. ಜನರಿಗೆ ಮನರಂಜನೆ ಕೊಡುವುದಷ್ಟೇ ನನ್ನ ಕೆಲಸ. ಅವರಿಗೆ ಯಾವುದು ಇಷ್ಟವಾಗುತ್ತದೆಯೋ ಅದನ್ನು ಸ್ವೀಕರಿಸುತ್ತಾರೆ.ಸಿನಿಮಾ ಗೆಲ್ಲಲು ಒಂದು ಫಾರ್ಮುಲಾ ಇಲ್ಲ. ಮೊದಲ ಸಿನಿಮಾ ಹಿಟ್ ಆಗಿದೆ ಎಂದ ತಕ್ಷಣ ನಂತರದ ಸಿನಿಮಾಗಳೂ ಯಶಸ್ಸು ಕಾಣಬೇಕು ಎಂದಿಲ್ಲ. ನನ್ನ ಜೀವನದಲ್ಲಿ ಎಲ್ಲಿಯೂ ಎಡವಿಲ್ಲ. ಕೆಲವು ಚಿತ್ರ ತಯಾರಿಯಲ್ಲಿ ಹೆಚ್ಚು ಕಡಿಮೆ ಆಗಿರಬಹುದು. ಆದರೆ, ನನ್ನ ಆಯ್ಕೆಯಲ್ಲಿ ಹೆಚ್ಚುಕಡಿಮೆ ಆಗಿಲ್ಲ. ಕಥೆ ಚಿತ್ರೀಕರಣದ ವೇಳೆ ಬದಲಾಗಬಹುದು. ಆಗ ನೀವೇ ಗಣೇಶ್ ಕಥೆಯನ್ನು ಸರಿಯಾಗಿ ಆಯ್ಕೆ ಮಾಡುತ್ತಿಲ್ಲ ಎನ್ನುತ್ತೀರಿ. ನನ್ನ ಗಮನ ಶೇ 100ರಷ್ಟು ಪರಿಪೂರ್ಣವಾಗಿ ನಟಿಸುವುದಷ್ಟೇ’.‘ದಿಲ್ ರಂಗೀಲಾ’ ಚಿತ್ರದಲ್ಲಿ ತಮ್ಮ ದೇಹದ ಬದಲಾವಣೆಯನ್ನು ಒಪ್ಪಿಕೊಳ್ಳುವ ಗಣೇಶ್, ಆ ಸಮಯದಲ್ಲಿ ನಾನು ವ್ಯಾಯಾಮ ಸೇರಿದಂತೆ ಕೆಲ ವರ್ಕ್ಔಟ್ ಮಾಡುತ್ತಿದ್ದೆ. ಅದೇ ವೇಳೆಗೆ ಈ ಕಥೆಯೂ ಬಂದಿತು. ಬೇರೆ ರೀತಿ ಕಾಣಿಸಿಕೊಳ್ಳುವುದಕ್ಕೆ ಕಾರಣವಾಯಿತು ಎನ್ನುತ್ತಾರೆ. ಸಿಕ್ಸ್‌ಪ್ಯಾಕ್‌–ಏಯ್ಟ್ ಪ್ಯಾಕ್‌ಗಳಿಗಿಂತ ತಮ್ಮ ಹಾವಭಾವಗಳಲ್ಲಿಯೇ ಹೊಸತನವನ್ನು ಕಂಡುಕೊಳ್ಳುವ ಹಂಬಲ ಅವರದು.ಈಗಾಗಲೇ 23 ಸಿನಿಮಾಗಳನ್ನು ಪೂರ್ಣಗೊಳಿಸಿರುವ ಗಣೇಶ್, ತಮ್ಮ ಮೊದಲ ಚಿತ್ರ ‘ಚೆಲ್ಲಾಟ’ವನ್ನು ನಿರ್ದೇಶಿಸಿದ ಎಂ.ಡಿ. ಶ್ರೀಧರ್ ಜೊತೆ 25ನೇ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ. ‘ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಪ್ರಯೋಗಗಳು ನಡೆಯುತ್ತಿದೆ. ಮಾರುಕಟ್ಟೆಯೂ ವಿಸ್ತಾರವಾಗುತ್ತಿದೆ. ನಮ್ಮಲ್ಲಿ ಸಿನಿಮಾ ಒಳ್ಳೆಯದಿದ್ದರೆ ಮಾತ್ರ ಬೆಳೆಯುತ್ತದೆ ಎನ್ನುವ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ. ಪತ್ನಿ ರಾಜಕಾರಣದಲ್ಲಿದ್ದರೂ ತಾವು ರಾಜಕಾರಣದಿಂದ ದೂರ. ಯಾವ ಪಕ್ಷದ ಪರವೂ ಪ್ರಚಾರ ನಡೆಸುವುದಿಲ್ಲ ಎಂದು ನಸು ನಗುತ್ತಾರೆ ಗಣೇಶ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.