ಶನಿವಾರ, ಮೇ 8, 2021
27 °C

`ಪ್ರತಿ ಭಾವಕ್ಕೂ ಇಲ್ಲಿ ಮೌಲ್ಯ'

ಸಂದರ್ಶನ: ರಮೇಶ ಕೆ. Updated:

ಅಕ್ಷರ ಗಾತ್ರ : | |

ಸಿನಿಮಾ, ಸೆಲೆಬ್ರೆಟಿ ಕ್ರಿಕೆಟ್ ಲೀಗ್ ನಡುವೆ ಕಿರುತೆರೆಯಲ್ಲೂ ಮಿಂಚುತ್ತಿರುವ ನಟ ಸುದೀಪ್ ಸದ್ಯ ಈ-ಟೀವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗೆ ಬಿಡುವು ನೀಡಿರುವ ಸುದೀಪ್ ಜುಲೈನಿಂದ ಪ್ರಾಜೆಕ್ಟ್ ಆರಂಭಿಸಲಿದ್ದಾರಂತೆ. ಮುಂಬೈನಿಂದ ನೂರು ಕಿ.ಮೀ. ದೂರದ ಲೋಣಾವಳ ಗಿರಿಧಾಮದ `ಬಿಗ್‌ಬಾಸ್' ಸೆಟ್‌ನಲ್ಲಿ ಈ ಶೋ ಬಗ್ಗೆ `ಮೆಟ್ರೊ'ದೊಂದಿಗೆ ಮುಕ್ತವಾಗಿ ಮಾತನಾಡಿದರು ಸುದೀಪ್. 

ರಿಯಾಲಿಟಿ ಶೋ ಅನುಭವ ಹೇಗಿದೆ?ಈ ಥರದ ಕಾರ್ಯಕ್ರಮ ವಿಭಿನ್ನ ಅನಿಸಿತು. ಎಲ್ಲರೂ ದೊಡ್ಡ ದೊಡ್ಡ ವ್ಯಕ್ತಿಗಳು, ಒಬ್ಬೊಬ್ಬರ ಹತ್ತಿರ ಮಾತನಾಡುವಾಗ ಅಸಂಖ್ಯಾತ ಭಾವನೆಗಳು ಗೊತ್ತಾಗುತ್ತವೆ. ರ‌್ಯಾಂಡಮ್ ಆಗಿ ಯಾರ‌್ಯಾರನ್ನೋ ಬಿಗ್‌ಬಾಸ್ ಮನೆಯಲ್ಲಿ ಕೂಡಿಹಾಕಿಲ್ಲ. ಎಲ್ಲರೂ ಹೆಸರು ಮಾಡಿರೋರು. ಸಣ್ಣ ಸಣ್ಣ ವಿಷಯಗಳಿಗೆ ಅಳುತ್ತಾರೆ. ಅದಕ್ಕೂ ಇಲ್ಲಿ ಮೌಲ್ಯ ಬರುತ್ತದೆ. ನಾನು ವೀಕ್ಷಕರು ಹಾಗೂ ಸ್ಪರ್ಧಿಗಳ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಇಲ್ಲಿ ನಾನು ನಿಭಾಯಿಸಿಕೊಂಡು ಮಾತನಾಡಬೇಕು. ಒಟ್ಟಾರೆ ಬಿಗ್‌ಬಾಸ್ ಅವರಿಗೆ ಸೇರಿದ್ದು.ಸಿನಿಮಾ ಮತ್ತು ಕಿರುತೆರೆ ನಡುವಿನ ವ್ಯತ್ಯಾಸವೇನು?

ಸಿನಿಮಾದಲ್ಲಿ ಪಾತ್ರಗಳು ಮಾತನಾಡುತ್ತವೆ. ಇಲ್ಲಿ ನೀವು ನೀವಾಗಿರಲು ಸಾಧ್ಯ. ಟಿ.ವಿ. ಮನೆಮನೆಗೂ ತಲುಪುತ್ತದೆ. ವೀಕ್ಷಕರಿಗೆ ಇಂದು ನೂರಾರು ಶೋಗಳಿವೆ. ಸಿನಿಮಾಗಳಿಗಿಂತ ಟಿ.ವಿ.ಯಲ್ಲಿಯೇ ಹೆಚ್ಚು ಸ್ಪರ್ಧೆ ಇದೆ. ಇಲ್ಲಿ ಉಳಿಯೋದು ಬಹಳ ಕಷ್ಟ. ಸಿನಿಮಾಕ್ಕಾದರೆ ಒಂದು ಜಾಗವಿದೆ, ಅದಕ್ಕೆಂದೇ ಥಿಯೇಟರ್‌ಗಳಿವೆ, ಅಭಿಮಾನಿ ಬಳಗವಿರುತ್ತದೆ. ಆದರೆ ಟಿ.ವಿ.ಯಲ್ಲಿ ಕೆಲಸ ನಿರ್ವಹಿಸುವವರು ತಿಂಗಳ ಸಂಬಳ ತೆಗೆದುಕೊಂಡು ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಒಟ್ಟಾರೆ ಬಹಳಷ್ಟು ಸಾಮ್ಯತೆ ಗಮನಿಸಬಹುದು.ಒಂದೇ ಮನೆಯಲ್ಲಿ ಕೂಡಿಹಾಕಿ ಅವರ `ಸೈಕಾಲಜಿ' ಕೆದಕಿದಂತಾಗುವುದಿಲ್ಲವೇ?

ಇಲ್ಲ. ಅವರ ಸೈಕಾಲಜಿ ನಮಗಾಗಲೀ, ವೀಕ್ಷಕರಿಗಾಗಲೀ ಗೊತ್ತಿರುವುದಿಲ್ಲ. ಕ್ಯಾಮೆರಾಗಳಿರುವುದು ಗೊತ್ತಿದ್ದೂ ಜಗಳವಾಡಿದ್ದಾರೆ. ಸ್ನೇಹದಿಂದ ಇದ್ದಾರೆ. ಎಲಿಮಿನೇಟ್ ಆಗುವಾಗ ಇನ್ನೂ ಒಂದು ವಾರ ಉಳಿಸಿಕೊಳ್ಳಿ ಎಂದಿದ್ದಾರೆ. ಯಾರ ಸೈಕಾಲಜಿಯೂ ಡಿಸ್ಟರ್ಬ್ ಆಗುವುದಿಲ್ಲ. ಇದು `ಜಸ್ಟ್ ಶೋ' ಅಷ್ಟೇ. `ಅಮ್ಮ ಯಾವಾಗಲೂ ನನ್ನ ಮೇಲೆ ಆಣೆ ಮಾಡುತ್ತಾಳೆ. ಜಗಳವಾಡುತ್ತಾಳೆ. ಬಿಗ್‌ಬಾಸ್‌ನಲ್ಲಿ ಉಳಿಯುವುದು ಕಷ್ಟ. ಅವಳು ನನ್ನಿಂದ ಇಷ್ಟು ದಿನ ಮಿಸ್ ಆಗಿದ್ದಾಳೆ' ಎಂದು ಚಂದ್ರಿಕಾ ಅವರ ಮಗ ಹೇಳಿದಾಗ ನನಗೆ ಪ್ರತಿಕ್ರಿಯಿಸಲು ಆಗಲಿಲ್ಲ. ತಬ್ಬಿಕೊಂಡೆ. ನಾನು ನನ್ನ ಮಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅನಿಸಿತು.ಮನರಂಜನೆ ನೀಡುವ ಉದ್ದೇಶದಿಂದ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಅವರನ್ನು ಆಯ್ಕೆ ಮಾಡಿದ್ದಿರಾ?

ಸ್ವಾಮೀಜಿಗಳೂ ಮನುಷ್ಯರೇ. ಹುಟ್ಟಿದ ಪ್ರತಿಯೊಬ್ಬನಿಗೂ ಅವರ ಆಯ್ಕೆ ವಿಷಯ ಅವರಿಗೆ ಬಿಟ್ಟದ್ದು. ಈ ಕಾರ್ಯಕ್ರಮದ ಆಯ್ಕೆಯೂ ಅಷ್ಟೇ. ಅವರು ಹೀಗೆಯೇ ಇರಬೇಕು ಅಂತ ಚೌಕಟ್ಟು ಹಾಕಬಾರದು. ಇಲ್ಲಿ ಅಶ್ಲೀಲತೆ ಇಲ್ಲ. ಇವತ್ತಿನವರೆಗೂ ಅವರು ಮಾಡಬಾರದ್ದನ್ನು ಏನೂ ಮಾಡಿಲ್ಲ. ಪೂಜೆ ಸಾಮಗ್ರಿ ಮುಟ್ಟಿದ್ದಕ್ಕೆ ಮಗುವಿನಂತೆ ಗಳಗಳನೆ ಅತ್ತಿದ್ದಾರೆ. ಜನ ತಮ್ಮನ್ನು ತಾವು ರೂಪಿಸಿಕೊಳ್ಳಬೇಕು. ಮೊದಲು ನಾವು ಹೇಗಿದ್ದೇವೆ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು.ಕಾರ್ಯಕ್ರಮ ಕುರಿತು ಜನರಿಂದ ಪ್ರತಿಕ್ರಿಯೆ ಹೇಗಿದೆ?

ವೀಕ್ಷಕರು ಹೊಸ ಹೊಸ ಪ್ರಶ್ನೆಗಳನ್ನು ಕೇಳುತ್ತಾರೆ. ನಮಗಿಂತ ಹೆಚ್ಚಾಗಿ ಕಾರ್ಯಕ್ರಮ ಅರ್ಥ ಮಾಡಿಕೊಂಡಿದ್ದಾರೆ ಅನ್ನಿಸುತ್ತದೆ. ಈ ರಿಯಾಲಿಟಿ ಶೋ ಚೆನ್ನಾಗಿದೆ ಎಂಬಂಥ ಪ್ರತಿಕ್ರಿಯೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆ ಸ್ಪರ್ಧಿ ಹೀಗೆ ಮಾತನಾಡುತ್ತಾರೆ, ಅವರು ಹಾಗೆ ಮಾತನಾಡಬಾರದು ಎಂದೆಲ್ಲಾ ಪ್ರತಿಕ್ರಿಯೆಗಳು ಬಂದಿವೆ. ನೆಗೆಟಿವ್ ಪ್ರತಿಕ್ರಿಯೆಗಳನ್ನೇ ಪರಿಗಣಿಸುತ್ತೇನೆ. ಒಟ್ಟಾರೆ ವೀಕ್ಷಕರು ಸಮಗ್ರವಾಗಿ ನೋಡುತ್ತಾರೆ.ಬಿಗ್‌ಬಾಸ್‌ಗೆ ತಯಾರಿ ಹೇಗೆ?

ಆತಿಥೇಯನಾಗಿ ಕಾಣಿಸಿಕೊಳ್ಳುವ ನಾನು ಪೂರ್ವ ತಯಾರಿ ಇಲ್ಲದೇ ಬರುತ್ತೇನೆ. ಅಂದರೆ ಇದೊಂದು ಪರೀಕ್ಷೆ ಇದ್ದಂತೆ. ಎಲ್ಲಾ ಎಪಿಸೋಡ್ ನೋಡಿಕೊಂಡು ಬಂದರೂ ಅವಕ್ಕೂ ಹೊರತಾದ ಪ್ರಶ್ನೆಗಳನ್ನು ಕೇಳುತ್ತಾರೆ. ಒಟ್ಟಾರೆ ಚೆನ್ನಾಗಿ ಮೂಡಿಬರುತ್ತಿದೆ. ಕ್ಲೈಮ್ಯಾಕ್ಸ್ ಆಸಕ್ತಿಕರವಾಗಲಿದೆ.ಕನ್ನಡದಲ್ಲಿ ಅನೇಕ ರಿಯಾಲಿಟಿ ಶೋಗಳು ಬಂದಿವೆ. ಅವುಗಳ ನಡುವೆ `ಬಿಗ್ ಬಾಸ್'ನಂಥ ಶೋ (ಆಮದಾದ) ಅಗತ್ಯವಿತ್ತಾ?

ಅಗತ್ಯದ ಪ್ರಶ್ನೆಗೆ ಜನರಿಂದಲೇ ಉತ್ತರ ಬಂದಿದೆ. ಸಾವಿರಾರು ಆಯ್ಕೆಗಳು ವೀಕ್ಷಕರ ಮುಂದಿರುತ್ತವೆ. ತೀರ್ಪು ಕೊಡೋರು ಅವರು. ಇದೊಂದೇ ಶೋ ಅವರ ಎದುರಿಗಿಲ್ಲ, ಹತ್ತಾರು ಚಾನೆಲ್‌ಗಳ ನೂರಾರು ಕಾರ್ಯಕ್ರಮಗಳಿವೆ. ಹಾಗಾಗಿ ಜನರೇ ಅಗತ್ಯವನ್ನು ಗುರ್ತಿಸಿದ್ದಾರೆ.ಶಾಲಾ ದಿನಗಳ ಬಗ್ಗೆ ಹೇಳಿ?

ಪ್ರಾಥಮಿಕ ಶಾಲೆ ಶಿವಮೊಗ್ಗದಲ್ಲಿ, ಎಂಜಿನಿಯರಿಂಗ್ ಬೆಂಗಳೂರಿನಲ್ಲಿ ಮಾಡಿದ್ದು. ಗಿಟಾರ್ ಬಾರಿಸುತ್ತಿದ್ದೆ, ಸ್ಕ್ರಿಪ್ಟ್ ಬರೆಯುತ್ತಿದ್ದೆ. ಆದರೆ ನನಗೆ ಅವಕಾಶ ಕೊಡುತ್ತಿರಲಿಲ್ಲ. ಅವೆಲ್ಲ ಮರೆಯಲಾಗದ ದಿನಗಳು.ದೇಹ ಸೌಂದರ್ಯಕ್ಕೆ ವರ್ಕ್‌ಔಟ್ ಮಾಡುತ್ತೀರಾ?

ಜಿಮ್ ಮೆಟೀರಿಯಲ್ ಎಲ್ಲಾ ತಂದಿಟ್ಟುಕೊಂಡಿದ್ದೇನೆ. ಆದರೆ ಜಿಮ್ ಅಂದ್ರೆ ಬೋರು. ಸೈಕ್ಲಿಂಗ್ ಮಾಡುತ್ತೇನೆ, ಷಟಲ್ ಬ್ಯಾಡ್ಮಿಂಟನ್ ಆಡುತ್ತೇನೆ. ಬಿಡುವಿನ ವೇಳೆ ಕೊರಿಯಾ, ಥಾಯ್ ಸಿನಿಮಾಗಳನ್ನು ನೋಡುತ್ತೇನೆ. ಆ ಚಿತ್ರಗಳ ವಸ್ತುಗಳು ಚೆನ್ನಾಗಿರುತ್ತವೆ.

-ಸಂದರ್ಶನ: ರಮೇಶ ಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.