ಶುಕ್ರವಾರ, ಏಪ್ರಿಲ್ 23, 2021
22 °C

ಪ್ರತಿ ವರ್ಷ ಕೆಎಎಸ್ ಪರೀಕ್ಷೆಗೆ ಆರಂಭದಲ್ಲೇ ವಿಘ್ನ

ಎ.ಎಂ.ಸುರೇಶ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರತಿ ವರ್ಷ ಕರ್ನಾಟಕ ನಾಗರಿಕ ಸೇವಾ (ಕೆಎಎಸ್) ಪರೀಕ್ಷೆಗಳನ್ನು ನಡೆಸುವ ಕರ್ನಾಟಕ ಲೋಕಸೇವಾ ಆಯೋಗದ ಪ್ರಯತ್ನಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಯುವಕರನ್ನು ಆಕರ್ಷಿಸುವ ದೃಷ್ಟಿಯಿಂದ ಐಎಎಸ್ ಮಾದರಿಯಲ್ಲಿಯೇ ಪ್ರತಿ ವರ್ಷ ಕೆಎಎಸ್ ಪರೀಕ್ಷೆಗಳನ್ನು ನಡೆಸುವ ಸಂಬಂಧ ಎರಡು ವರ್ಷಗಳ ಹಿಂದೆ ಕರ್ನಾಟಕ ನಾಗರಿಕ ಸೇವಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದಾದ ನಂತರ 2010ನೇ ಸಾಲಿನ ಜನವರಿಯಲ್ಲಿ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿ ಈಗಾಗಲೇ ಮುಖ್ಯ ಪರೀಕ್ಷೆ ನಡೆಸಲಾಗಿದೆ.ಆದರೆ 2011ನೇ ಸಾಲಿನ ಕೆಎಎಸ್ ಪರೀಕ್ಷಾ ಪ್ರಕ್ರಿಯೆ ಆರಂಭವಾಗುವುದು ವಿಳಂಬವಾಗಿದೆ. ಎಷ್ಟು ಹುದ್ದೆಗಳನ್ನು ಭರ್ತಿ ಮಾಡಬೇಕು, ಯಾವ ಯಾವ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಪಟ್ಟಿಯನ್ನು ಸರ್ಕಾರ ಇನ್ನೂ ಆಯೋಗಕ್ಕೆ ಕಳುಹಿಸಿಕೊಟ್ಟಿಲ್ಲ. ಹೀಗಾಗಿ ನೇಮಕಾತಿ ಪ್ರಕ್ರಿಯೆ ಆರಂಭವಾಗುವುದು ತಡವಾಗಿದ್ದು, ಆಯೋಗವು ಖಾಲಿ ಹುದ್ದೆಗಳ ಪಟ್ಟಿಗಾಗಿ ಕಾದು ಕುಳಿತಿದೆ.ಸಮೂಹ ‘ಎ’ ಮತ್ತು ‘ಬಿ’ ದರ್ಜೆಯ 200ಕ್ಕೂ ಅಧಿಕ ಹುದ್ದೆಗಳು ಭರ್ತಿಗೆ ಲಭ್ಯವಿದ್ದು, ಇಲಾಖಾವಾರು ಖಾಲಿ ಇರುವ ಹುದ್ದೆಗಳ ಪಟ್ಟಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಬಹಳ ಹಿಂದೆಯೇ ತರಿಸಿಕೊಂಡಿದೆ. ಆದರೆ ಕೆಎಎಸ್ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರುವ ಪ್ರಸ್ತಾವ ಸರ್ಕಾರದ ಮುಂದೆ ಇರುವುದರಿಂದ ಪಟ್ಟಿಯನ್ನು ಆಯೋಗಕ್ಕೆ ಕಳುಹಿಸಿಕೊಟ್ಟಿಲ್ಲ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.ಕೆಎಎಸ್ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರುವ ಸಂಬಂಧ ಕೆಪಿಎಸ್‌ಸಿ ಮೂರು ತಿಂಗಳ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಆದರೆ ಇದುವರೆಗೆ ಸರ್ಕಾರವು ಬದಲಾವಣೆ ತರುವ ಸಂಬಂಧ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಇದಕ್ಕೆ ಸಂಬಂಧಿಸಿದ ಕಡತ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಇದೆ.ಅವರು ಇನ್ನೂ ಕಡತವನ್ನು ನೋಡಿಲ್ಲ, ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆಗೆ ಅವರು ಒಪ್ಪಿಗೆ ಸೂಚಿಸಿದ ನಂತರ ಈ ವಿಷಯ ಸಚಿವ ಸಂಪುಟ ಸಭೆಯ ಮುಂದೆ ಬರಲಿದೆ. ಅಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಯಾವಾಗ ಈ ವಿಷಯ ಸಂಪುಟದ ಮುಂದೆ ಬರುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದಷ್ಟು ಬೇಗ ಇತ್ಯರ್ಥವಾಗುವ ವಿಶ್ವಾಸವಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.ಖಾಲಿ ಇರುವ ಹುದ್ದೆಗಳ ಮಾಹಿತಿ ನೀಡುವಂತೆ ಬಹಳ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಲ್ಲದೆ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರುವ ಪ್ರಸ್ತಾವವನ್ನು ಕಳುಹಿಸಿಕೊಡಲಾಗಿದೆ. ಇದಕ್ಕೆ ಒಪ್ಪಿಗೆ ಸೂಚಿಸಿ, ಖಾಲಿ ಹುದ್ದೆಗಳ ಪಟ್ಟಿಯೊಂದಿಗೆ ಕಳುಹಿಸಿಕೊಟ್ಟರೆ ನೇಮಕಾತಿ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಆಯೋಗದ ಅಧ್ಯಕ್ಷ ಗೋನಾಳ ಭೀಮಪ್ಪ ಅವರು ತಿಳಿಸಿದರು.ಕೇಂದ್ರ ಲೋಕಸೇವಾ ಆಯೋಗ ಈ ವರ್ಷ ಹೊಸ ಪದ್ಧತಿಗೆ ಅನುಗುಣವಾಗಿಯೇ ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸುತ್ತಿದ್ದು, ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರ ತ್ವರಿತವಾಗಿ ಬದಲಾವಣೆಗೆ ಒಪ್ಪಿಗೆ ಸೂಚಿಸಿದ್ದರಿಂದ ವಿಳಂಬವಿಲ್ಲದೆ ಪ್ರತಿ ವರ್ಷದಂತೆ ಈ ವರ್ಷವೂ ನಿಗದಿತ ಅವಧಿಯಲ್ಲೇ ಕೇಂದ್ರ ನಾಗರಿಕ ಸೇವಾ ಪರೀಕ್ಷೆಗಳು ನಡೆಯುತ್ತಿವೆ.ಆದರೆ ರಾಜ್ಯ ಸರ್ಕಾರ ಬದಲಾವಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಮೀನಮೇಷ ಎಣಿಸುತ್ತಿದೆ. ಇದರಿಂದಾಗಿ ಕೆಎಎಸ್ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗುತ್ತೇವೆ ಎಂಬ ಅಳಲನ್ನು ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳು ತೋಡಿಕೊಂಡಿದ್ದಾರೆ. ನಿವೃತ್ತಿ ವಯಸ್ಸನ್ನು 58ರಿಂದ 60ಕ್ಕೆ ಏರಿಸಿದ ಪರಿಣಾಮ ಎರಡು ವರ್ಷಗಳಿಂದ ಹೆಚ್ಚಿನ ಹುದ್ದೆಗಳು ಖಾಲಿ ಇರಲಿಲ್ಲ.

 

ಈಗ ನಿವೃತ್ತಿಯಿಂದ ಬಹಳಷ್ಟು ಹುದ್ದೆಗಳು ತೆರವಾಗಿವೆ. ಆದಷ್ಟು ಬೇಗ ನೇಮಕಾತಿ ಆರಂಭಿಸಿದರೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ವಯೋಮಿತಿ ಮೀರುವುದರಿಂದ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಸಿಗುವುದಿಲ್ಲ ಎಂದು ಪದವೀಧರ ಅಭ್ಯರ್ಥಿಗಳಾದ ಎನ್.ಮಂಜುನಾಥ್, ಆರ್.ದೇವರಾಜು ಮೊದಲಾದವರು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.