ಪ್ರತಿ ವಾರ ಕೃಷಿ ಮಾಹಿತಿ ನೀಡಲು ರೈತರ ಒತ್ತಾಯ

7

ಪ್ರತಿ ವಾರ ಕೃಷಿ ಮಾಹಿತಿ ನೀಡಲು ರೈತರ ಒತ್ತಾಯ

Published:
Updated:

ಸೋಮವಾರಪೇಟೆ: ಕೃಷಿಕರೇ ಹೆಚ್ಚಿರುವ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಕೃಷಿ ಇಲಾಖೆಯ ಸಂಪೂರ್ಣ ಮಾಹಿತಿ ಸಿಗಬೇಕು. ಯಾವುದೋ ಸಬೂಬು ಹೇಳಿ ಗ್ರಾಮ ಸಭೆಗೆ ಅಧಿಕಾರಿಗಳು ಗೈರಾಗುವುದು ಸರಿಯಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಪಂಚಾಯಿತಿ ಅಧ್ಯಕ್ಷ ಡಿ.ಎಂ. ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಕೃಷಿ ಅಧಿಕಾರಿ ಗೈರಾಗಿರುವ ಬಗ್ಗೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು. ಗ್ರಾಮಸಭೆ ಮಂಗಳವಾರ ಶಾಲಾ ಅವರಣದಲ್ಲಿ ನಡೆಯಿತು. ಕೃಷಿ ಪ್ರಧಾನ ಗ್ರಾಮಗಳ ಗ್ರಾಮಸಭೆಯಲ್ಲಿ ಕೃಷಿಗೆ ಸಂಬಂಧಪಟ್ಟ ಮಾಹಿತಿ ಸಿಗದಿದ್ದರೆ ಏನೂ ಪ್ರಯೋಜನವಿಲ್ಲ ಎಂದು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.ವಾರದ ಪ್ರತಿ ಸೋಮವಾರ ಕೃಷಿ ಅಧಿಕಾರಿಯೊಬ್ಬರು ದೊಡ್ಡಮಳ್ತೆ ಗ್ರಾಮ ಪಂಚಾಯಿತಿಗೆ ಆಗಮಿಸಿ, ರೈತರಿಗೆ ಇಲಾಖೆಯ ಪೂರ್ಣ ಮಾಹಿತಿ ನೀಡಬೇಕು ಎಂದು ಕೃಷಿಕ ಚಂಗಪ್ಪ ಒತ್ತಾಯಿಸಿದರು. ಕೃಷಿ ಇಲಾಖೆಯಲ್ಲಿ ನಿಜವಾದ ಫಲಾನುಭವಿಗಳಿಗೆ ಸಹಾಯಧನ ಸಿಗುತ್ತಿಲ್ಲ ಎಂದು ಕೂಗೆಕೋಡಿ ಶಿವಪ್ಪ ಆರೋಪಿಸಿದರು.ಸೆಸ್ಕ್ ನಿರ್ಲಕ್ಷ್ಯ: ದೂರು

ಗ್ರಾಮಗಳಲ್ಲಿ ವಿದ್ಯುತ್ ಕಡಿತ ಸಮಸ್ಯೆಯಿಂದ ತೊಂದರೆಯಾಗಿದೆ ಎಂದು ಡಿ.ಎಸ್.ಧರ್ಮಪ್ಪ ದೂರಿದರು. ಗೆಜ್ಜೆಹಣಕೋಡು ಗ್ರಾಮದಲ್ಲಿ ವಿದ್ಯುತ್ ಕಂಬ ಬೀಳುವ ಹಂತದಲ್ಲಿದೆ. ಐದು ತಿಂಗಳ ಹಿಂದೆಯೇ ಸೆಸ್ಕ್‌ಗೆ ದೂರು ನೀಡಿದರೂ ಸರಿಪಡಿಸಿಲ್ಲ ಎಂದು ಗ್ರಾಮಸ್ಥರೊಬ್ಬರು ಹೇಳಿದರು.ಇನ್ನೊಂದು ವಾರದೊಳಗೆ ಸರಿಪಡಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ಎಂಜಿನಿಯರ್ ಸುಬೀಶ್ ಭರವಸೆ ನೀಡಿದರು. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಮಾರ್ಗವನ್ನು ಸುಸ್ಥಿತಿಯಲ್ಲಿಡಲು ಗ್ರಾಮಸ್ಥರ ಸಹಕಾರ ಅಗತ್ಯ ಎಂದರು. ದೊಡ್ಡಮಳ್ತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕವಾಗಬೇಕು. ಕುಡಿಯುವ ನೀರಿನ ಸ್ವಚ್ಛತೆಗೆ ಆರೋಗ್ಯ ಇಲಾಖೆ ಗಮನ ಹರಿಸಬೇಕು ಎಂದು ಧರ್ಮಪ್ಪ ಆಗ್ರಹಿಸಿದರು. ಹೊನವಳ್ಳಿ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್‌ಗೆ ಮುಚ್ಚಳವೇ ಇಲ್ಲ. ನೀರನ್ನು ಕುಡಿಯುವುದಕ್ಕೆ ಭಯವಾಗುತ್ತಿದೆ ಎಂದು ಸೋಮಣಿ ದೂರಿದರು. ಜಲಾನಯನ ಅಭಿವೃದ್ಧಿ ಯೋಜನೆಯಿಂದ ಕೂಗೆಕೋಡಿ ಗ್ರಾಮ ವಂಚಿತವಾಗಿದೆ ಎಂದು ಲೋಕೇಶ್ ಹೇಳಿದರು. ಮೇಲಧಿಕಾರಿಗಳೊಂದಿಗೆ ಚರ್ಚಿಸಲು ಅವಕಾಶ ಕೊಡಲಾಗುವುದು ಎಂದು ಅಧ್ಯಕ್ಷ ಗೋಪಾಲಕೃಷ್ಣ ಭರವಸೆ ನೀಡಿದರು.`ಬ್ಯಾಂಕ್ ವಿರುದ್ಧ ಕ್ರಮ'

ಪರಿಶಿಷ್ಟಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಜಾತಿ ದೃಢೀಕರಣ ಪತ್ರ, ಆದಾಯ ದೃಢೀಕರಣ ಪತ್ರ ಹಾಗೂ ಬ್ಯಾಂಕ್ ಖಾತೆ ಕಡ್ಡಾಯ  ಎಂದು ಸಮಾಜ ಕಲ್ಯಾಣಾಧಿಕಾರಿ ನರಸಿಂಹಮೂರ್ತಿ ಹೇಳಿದರು. ವಿದ್ಯಾರ್ಥಿಗಳ ಖಾತೆ ತೆರೆಯಲು ಬ್ಯಾಂಕ್‌ಗಳು ನಿರಾಕರಿಸಿದರೆ, ಜಿಲ್ಲಾಧಿಕಾರಿಗಳು ಅಂತಹ ಬ್ಯಾಂಕ್‌ಗಳ ವಿರುದ್ಧ ಕ್ರಮ ಜರುಗಿಸುತ್ತಾರೆ ಎಂದು ಮಾಹಿತಿ ನೀಡಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಎನ್.ಎಸ್.ಗೀತಾ, ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಆರ್.ಸುರೇಶ್, ನೋಡಲ್ ಅಧಿಕಾರಿ ಚಂದ್ರಶೇಖರ್, ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ, ಸದಸ್ಯರಾದ ಎಂ.ಬಿ.ವಸಂತ್, ಪೂವಯ್ಯ, ಯಮುನ, ಸೋಮಕ್ಕ, ಹೂವಮ್ಮ ಹಾಗು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry