ಸೋಮವಾರ, ಸೆಪ್ಟೆಂಬರ್ 16, 2019
22 °C

ಪ್ರತಿ ಶಾಲೆಗೂ ನೀರಿನ ತೊಟ್ಟಿ ನಿರ್ಮಾಣ

Published:
Updated:

ರಾಮದುರ್ಗ: ಜಿಲ್ಲೆಯ ಪ್ರತಿ ಶಾಲೆಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ರೂ. 2 ಲಕ್ಷ ವೆಚ್ಚದಲ್ಲಿ ಕೊಳವೆ ಬಾವಿ ಮತ್ತು ನೀರಿನ ತೊಟ್ಟಿ ನಿರ್ಮಿಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಪಂಚಾತಿ  ಅಧ್ಯಕ್ಷ ಈರಣ್ಣಾ ಕಡಾಡಿ ಹೇಳಿದರು.ಸುರೇಬಾನದಲ್ಲಿ ಭಾನುವಾರ ಬೆಳಗಾವಿಯ ಜೆಎನ್‌ಎಂಸಿ ಕಾಲೇಜಿನ ಮಹಿಳೆ ಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕ, ಸುರೇಬಾನದ  ಸಮುದಾಯ ಸಲಹಾ ಸಮಿತಿ  ಸಹಯೋಗದಲ್ಲಿ  `ಮಗು-ಮಾತೆ ಆರೋಗ್ಯ ಸುರಕ್ಷೆ ಕುರಿತ `ಮಮತೆ~ ಸಮುದಾಯದೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಜಿಲ್ಲೆಗೆ ರಾಜ್ಯ ಸರ್ಕಾರ ಒಟ್ಟು ರೂ.75 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.  ಮನುಷ್ಯನ  ಅವಶ್ಯಕತೆ ಗಳಲ್ಲಿ ಅನ್ನ, ಆರೋಗ್ಯ ಹಾಗೂ ಅಕ್ಷರ ಮಹತ್ವದ್ದಾಗಿವೆ. ಸರ್ಕಾರ ಈ ಅವಶ್ಯಕತೆಗಳನ್ನು ಜನರಿಗೆ ತಲುಪಿಸಲು ಪ್ರತಿ ವರ್ಷ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಆದರೆ ಯೋಜನೆಗಳ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂದು ಅವರು ವಿಷಾದಿಸಿದರು.

ಸರ್ಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಸಂಘ ಸಂಸ್ಥೆಗಳು ಮತ್ತು ಸರ್ಕಾರದ ಜೊತೆ ಸಮುದಾಯದ ಸಹಭಾಗಿತ್ವದ ಅಗತ್ಯ  ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಿದರೆ ಮಾತ್ರ ಆರೋಗ್ಯವಂತ ಮಕ್ಕಳ ಜನನ ಸಾಧ್ಯ ಅಲ್ಲದೆ ಹೆರಿಗೆ ಸಮಯದಲ್ಲಿ ಯಾವುದೇ ತೊಂದರೆಯೂ ಎದುರಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.ತಾ.ಪಂ. ಅಧ್ಯಕ್ಷೆ ಮಂಜುಳಾ ದೇವರಡ್ಡಿ ಮಾತನಾಡಿ, ಮಹಿಳೆಯರು ಆರೋಗ್ಯವಂತರಾಗಿರಲು ಪ್ರತಿ ಮಗುವಿನ ನಡುವೆ ಅಂತರ ಅಗತ್ಯ. ಜನಸಂಖ್ಯೆ ನಿಯಂತ್ರಣಕ್ಕೆ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ನಿಂಗಪ್ಪ ಮೆಳ್ಳಿಕೇರಿ ಮಾತನಾಡಿ, ಮಮತೆ ಕಾರ್ಯಕ್ರಮದ ಅನುಷ್ಠಾನದಿಂದಾಗಿ ಈ ಭಾಗದಲ್ಲಿ ಮಹಿಳೆಯರು ಜಾಗೃತರಾಗಿದ್ದಾರೆ. ತಾಯಿ, ನವಜಾತ ಶಿಶುವಿನ ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಶೋಕ ಮುರಗೋಡ, ಜೆಎನ್‌ಎಂಸಿಯ ಪ್ರಧಾನ ಸಂಶೋಧಕ ಡಾ.ಬಿ. ಎಸ್. ಕೊಡ್ಕಿಣಿ, ಸಂಶೋಧನಾ ಸಂಯೋಜಕ ಶಿವಪ್ರಸಾದ ಗೌಡರ, ತಾಪಂ ಮಾಜಿ ಉಪಾಧ್ಯಕ್ಷೆ ರೂಪಾ ಯಲಿಗೋಡ ಮುಂತಾದವರು ಮಾತನಾಡಿದರು.ಜಿಲ್ಲಾ ಪಂಚಾಯಿತಿ  ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ರತ್ನಾ ಯಾದವಾಡ, ತಾ.ಪಂ. ಸದಸ್ಯರಾದ ನಿಂಗವ್ವ ಪೈಲಿ, ಶಾಂತವ್ವ ಬೊಮ್ಮನವರ, ಆರ್. ಎಫ್. ಸೋಮಗೊಂಡ, ದುಂಡಯ್ಯ ಹಿರೇಮಠ, ಗ್ರಾ.ಪಂ. ಅಧ್ಯಕ್ಷ  ಶ್ರೀಶೈಲ ಮೆಳ್ಳಿಕೇರಿ, ಜಾನವ್ವ ಹುಲ್ಲಿಕೇರಿ, ತಿರಕಪ್ಪ ಬಾಡಗಾರ, ಪಾರ್ವತೆವ್ವ ಭಜಂತ್ರಿ, ಶಾರವ್ವ ಅಸೂಟಿ, ಪ್ರಭಾವತಿ ಮಳಲಿ, ಶಾರದಾ ಸೋಮಗೊಂಡ, ಜೆಎನ್‌ಎಂಸಿಯ ವೈದ್ಯರಾದ ಎಂ.ಕೆ.ಸ್ವಾಮಿ, ಕಮಲ ಪಾಟೀಲ, ಎನ್.ವಿ.ಹೊನ್ನುಂಗರ  ಭಾಗವಹಿಸಿದ್ದರು.ಅವರಾದಿ ಮಠದ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಶಂಕ್ರಯ್ಯ ಚಿಕ್ಕಮಠ ಮಮತೆ ಯೋಜನೆ ಅನುಷ್ಠಾನ ಮಾಡಿದ ಕುರಿತು  ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ಕಮ್ಮೋರ ಸ್ವಾಗತಿಸಿದರು.

Post Comments (+)