ಮಂಗಳವಾರ, ಏಪ್ರಿಲ್ 20, 2021
32 °C
ಶಿಕ್ಷೆ ಅಮಾನತು ಕೋರಿ ಗೋವಿಂದರಾಜು ಅರ್ಜಿ ವಿಚಾರಣೆ

ಪ್ರತಿ ಹೇಳಿಕೆ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಧಿಸಿರುವ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿಡಬೇಕು, ತಮಗೆ ಜಾಮೀನು ನೀಡಬೇಕು ಎಂದು ಬಿಬಿಎಂಪಿಯ ಗಣೇಶ ಮಂದಿರ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಎಲ್. ಗೋವಿಂದರಾಜು ಅವರು ಸಲ್ಲಿಸಿರುವ ಅರ್ಜಿಗೆ ಪ್ರತಿಹೇಳಿಕೆ ಸಲ್ಲಿಸುವಂತೆ ಹೈಕೋರ್ಟ್, ಲೋಕಾಯುಕ್ತ ಪೊಲೀಸರಿಗೆ ಶುಕ್ರವಾರ ನಿರ್ದೇಶನ ನೀಡಿದೆ.ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಏಕಸದಸ್ಯ ಪೀಠದ ಎದುರು ಹಾಜರಾದ ಲೋಕಾಯುಕ್ತ ಪರ ವಕೀಲರು, `ಅಧೀನ ನ್ಯಾಯಾಲಯದ ಆದೇಶವನ್ನು ಅಮಾನತಿನಲ್ಲಿಡಬೇಕು ಎಂಬ ಕೋರಿಕೆ ಬಂದಾಗ, ಪ್ರತಿವಾದಿಗಳ ವಾದ ಆಲಿಸಬೇಕು. ಸುಪ್ರೀಂ ಕೋರ್ಟ್ ರೂಪಿಸಿರುವ ನಿಯಮಾವಳಿ ಇದನ್ನೇ ಹೇಳುತ್ತದೆ' ಎಂದು ವಾದಿಸಿದರು.ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಪ್ರತಿಹೇಳಿಕೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು. ಶಿಕ್ಷೆಗೆ ಒಳಗಾಗಿರುವ ಗೋವಿಂದರಾಜು ಅವರು ಈಗ ಜೈಲಿನಲ್ಲಿದ್ದಾರೆ.ಟಿ.ವಿ. ವಾಹಿನಿಗಳ ನಿರ್ದೇಶಕರಿಗೆ ನೋಟಿಸ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅನುಮತಿ ಪಡೆಯದೆ, ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರ ಅಂಟಿಸಿರುವ ಮೂರು ಖಾಸಗಿ ದೂರದರ್ಶನ ವಾಹಿನಿಗಳ ನಿರ್ದೇಶಕರಿಗೆ ನೋಟಿಸ್ ಜಾರಿಗೆ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.ರಾಜಾರಾಮ ಎಂಬುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, `ಝೀ ಕನ್ನಡ, ಈಟಿವಿ ಕನ್ನಡ ಮತ್ತು ಸುವರ್ಣ ನ್ಯೂಸ್ ವಾಹಿನಿಗಳ ನಿರ್ದೇಶಕರು ಮುಂದಿನ ವಿಚಾರಣೆ ವೇಳೆ ಹಾಜರಿರಬೇಕು' ಎಂದು ಆದೇಶಿಸಿತು.

ಅಲ್ಲದೆ, `ದಂಡುಪಾಳ್ಯ' ಚಲನಚಿತ್ರದ ನಿರ್ಮಾಪಕರು ಮತ್ತು ವಿತರಕರಿಗೂ ಖುದ್ದು ಹಾಜರಿಗೆ ಸೂಚಿಸಿತು. ವಿಚಾರಣೆಯನ್ನು ಮುಂದೂಡಲಾಗಿದೆ.`ಎಫ್‌ಐಆರ್ ಸರಿಯಿಲ್ಲ'

ರಿಯಲ್ ಎಸ್ಟೇಟ್ ಉದ್ಯಮಿ ಲಿಂಗರಾಜು ಕೊಲೆ ಪ್ರಕರಣದಲ್ಲಿ ಪೊಲೀಸರು ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಸರಿಯಾಗಿಲ್ಲ ಎಂದು ಈ ಪ್ರಕರಣದ ವಿಚಾರಣೆಯಲ್ಲಿ `ಅಮಿಕಸ್ ಕ್ಯೂರಿ' (ನ್ಯಾಯಾಲಯದ ಸಹಾಯಕ) ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಕೀಲ ಹಸ್ಮತ್ ಪಾಷಾ ವರದಿ ಸಲ್ಲಿಸಿದ್ದಾರೆ.ಲಿಂಗರಾಜು ಅವರ ಕೊಲೆ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಆಧರಿಸಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.`ಪ್ರಕರಣದ ಆರೋಪಿಯಾಗಿರುವ ಸಿ.ಗೋವಿಂದರಾಜು ಅವರ ಮೊಬೈಲ್ ದೂರವಾಣಿಯನ್ನು ಪೊಲೀಸರು ವಶಪಡಿಸಿಕೊಂಡಿಲ್ಲ. ಅವರ ಪತ್ನಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಗೌರಮ್ಮ ಅವರನ್ನು ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಹೆಸರಿಸಿಲ್ಲ' ಎಂದು ಪಾಷಾ ವಾದಿಸಿದರು.ಇದನ್ನು ಅಲ್ಲಗಳೆದ ಸರ್ಕಾರದ ಪರ ವಕೀಲರು, ತನಿಖೆ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಪ್ರಕರಣದ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ನ್ಯಾಯಪೀಠ, ಸರ್ಕಾರಕ್ಕೆ ಸೂಚಿಸಿತು. ಈ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಸಾಧ್ಯವೇ ಎಂಬ ಬಗ್ಗೆ ಅಭಿಪ್ರಾಯ ಸಲ್ಲಿಸುವಂತೆ ನಿರ್ದೇಶಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.