ಪ್ರತ್ಯೇಕ ಅಪಘಾತ:ಮೂವರ ಸಾವು

7

ಪ್ರತ್ಯೇಕ ಅಪಘಾತ:ಮೂವರ ಸಾವು

Published:
Updated:

ಬೆಂಗಳೂರು: ನಗರದ ಮಾಗಡಿ ರಸ್ತೆ, ಹಲಸೂರುಗೇಟ್ ಮತ್ತು ಶಿವಾಜಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಯುವತಿ ಸೇರಿದಂತೆ ಮೂರು ಮಂದಿ ಮೃತಪಟ್ಟಿದ್ದಾರೆ.ಡಾ.ರಾಜ್‌ಕುಮಾರ್ ರಸ್ತೆಯ ಪ್ರಸನ್ನ ಜಂಕ್ಷನ್ ಬಳಿ ಮಂಗಳವಾರ ಬೆಳಿಗ್ಗೆ ಬಿಎಂಟಿಸಿ ಬಸ್ ಪಾದಚಾರಿ ಮಾರ್ಗಕ್ಕೆ ನುಗ್ಗಿ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ.ರಾಜಾಜಿನಗರ ಆರನೇ ಬ್ಲಾಕ್ ನಿವಾಸಿ ವಸಂತ್‌ಕುಮಾರ್ ಎಂಬುವರ ಪುತ್ರಿ ಪ್ರೀತಿ (24) ಮೃತಪಟ್ಟವರು. ಬಿ.ಎ ಪದವೀಧರೆಯಾಗಿದ್ದ ಅವರು, ಮನೆಯ ಸಮೀಪದ ಅಂಗಡಿಯಲ್ಲಿ ಹೂವು ತೆಗೆದುಕೊಂಡು ವಾಪಸ್ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಅವರು ಪ್ರಸನ್ನ ಜಂಕ್ಷನ್ ಬಳಿ ರಸ್ತೆ ದಾಟುವ ಉದ್ದೇಶದಿಂದ ಪಾದಚಾರಿ ಮಾರ್ಗದಲ್ಲಿ ನಿಂತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಬಂದ ಬಿಎಂಟಿಸಿ ಬಸ್ ಪಾದಚಾರಿ ಮಾರ್ಗಕ್ಕೆ ನುಗ್ಗಿ ಎರಡು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆಯಿತು. ನಂತರ ರಸ್ತೆ ಬದಿಯ ಅಂಗಡಿಯೊಂದಕ್ಕೆ ಗುದ್ದಿತು. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಪ್ರೀತಿ ಅವರ ಮೇಲೆ ಬಿದ್ದಿತು. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.ಬಸ್ ಚಾಲಕ ಅಜಾಗರೂಕತೆಯಿಂದ ಅತಿ ವೇಗವಾಗಿ ವಾಹನ ಚಾಲನೆ ಮಾಡಿದ ಕಾರಣದಿಂದಲೇ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಅಂಗಡಿ ಹಾಗೂ ಎರಡು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಗಡಿ ರಸ್ತೆ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.ಮತ್ತೊಂದು ಪ್ರಕರಣ: ಕಾರ್ಪೋರೇಷನ್ ವೃತ್ತದ ಬಳಿಯ ನರಸಿಂಹರಾಜ ಚೌಕದ ಸಮೀಪ ಸೋಮವಾರ ರಾತ್ರಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ಡಿಕ್ಕಿ ಹೊಡೆದು ಸುರೇಶ್ (23) ಎಂಬುವರು ಸಾವನ್ನಪ್ಪಿದ್ದಾರೆ.ಮೂಲತಃ ಮಂಡ್ಯ ಜಿಲ್ಲೆಯ ಸುರೇಶ್, ನಗರದ ಖಾಸಗಿ ಕಂಪೆನಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿದ್ದರು. ಮಲ್ಲೇಶ್‌ಪಾಳ್ಯದಲ್ಲಿ ವಾಸವಾಗಿದ್ದ ಅವರು ಸ್ನೇಹಿತ ಉಮೇಶ್ ಎಂಬುವರ ಜತೆ ಬೈಕ್‌ನಲ್ಲಿ ಮೆಜೆಸ್ಟಿಕ್‌ಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್, ಸುರೇಶ್ ಅವರ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಇದರಿಂದಾಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಮಂಗಳವಾರ ನಸುಕಿನಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.ಹಿಂಬದಿ ಸವಾರ ಉಮೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಲಸೂರುಗೇಟ್ ಸಂಚಾರ ಠಾಣೆ ಪೊಲೀಸರು ಬಸ್ ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಶಿವಾಜಿನಗರ: ಇನ್‌ಫೆಂಟ್ರಿ ರಸ್ತೆಯ ಸೆಂಟ್ರಲ್ ಸ್ಟ್ರೀಟ್ ಜಂಕ್ಷನ್ ಬಳಿ ಸೋಮವಾರ ರಾತ್ರಿ ಖಾಸಗಿ ಬಸ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯ ವಯಸ್ಸು ಸುಮಾರು 45 ವರ್ಷ. ಆದರೆ, ಅವರ ಗುರುತು ಪತ್ತೆಯಾಗಿಲ್ಲ. ಘಟನೆ ನಂತರ ಬಸ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಶಿವಾಜಿನಗರ ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry