ಪ್ರತ್ಯೇಕ ಅಪಘಾತ: ಬಾಲಕ ಸೇರಿ ಇಬ್ಬರ ಸಾವು

7

ಪ್ರತ್ಯೇಕ ಅಪಘಾತ: ಬಾಲಕ ಸೇರಿ ಇಬ್ಬರ ಸಾವು

Published:
Updated:

ಬೆಂಗಳೂರು: ಬನ್ನೇರುಘಟ್ಟ ರಸ್ತೆ ಸಮೀಪದ ಸಿ.ಕೆ.ಪಾಳ್ಯ ಮುಖ್ಯರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಖಾಸಗಿ ಬಸ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಸುಧಾಕರ್‌ (25) ಎಂಬುವರು ಸಾವನ್ನಪ್ಪಿದ್ದು, ಕೋಣನಕುಂಟೆ ಕ್ರಾಸ್‌ ಬಳಿ ಭಾನುವಾರ ರಾತ್ರಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ ಸೈಕಲ್‌ಗೆ ಡಿಕ್ಕಿ ಹೊಡೆದು ವಸೀಂ (16) ಎಂಬ ಬಾಲಕ ಮೃತಪಟ್ಟಿದ್ದಾನೆ.ಹೊಸಕೋಟೆ ತಾಲ್ಲೂಕಿನ ಕೆ.ಮಲ್ಲಸಂದ್ರ ಗ್ರಾಮದ ಸುಧಾಕರ್‌, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಿ.ಕೆ.ಪಾಳ್ಯ ಸಮೀಪದ ಹೊಮ್ಮದೇವನಹಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಅವರು ಬೈಕ್‌ನಲ್ಲಿ ಕೆ.ಮಲ್ಲಸಂದ್ರಕ್ಕೆ ವಾಪಸ್‌ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಬಸ್‌ ಅವರ ಬೈಕ್‌ಗೆ ಎದುರುಗಡೆಯಿಂದ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಬಸ್‌ನ ಮೇಲೆ ಕಲ್ಲು ತೂರಾಟ ನಡೆಸಿ, ವಾಹನದ ಗಾಜುಗಳನ್ನು ಪುಡಿಪುಡಿ ಮಾಡಿದರು. ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.ಬಸ್‌ ಚಾಲಕ ಪರಾರಿಯಾಗಿದ್ದು, ಹುಳಿಮಾವು ಸಂಚಾರ ಠಾಣೆ ಪೊಲೀಸರು ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದೂರು ದಾಖಲಾಗಿದೆ.ಮತ್ತೊಂದು ಪ್ರಕರಣ: ಉತ್ತರಹಳ್ಳಿ ನಿವಾಸಿ ಅನ್ವರ್‌ ಎಂಬುವರ ಮಗನಾದ ವಸೀಂ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ. ಆತ ಸ್ನೇಹಿತರನ್ನು ಭೇಟಿಯಾಗಿ ಸೈಕಲ್‌ನಲ್ಲಿ ಮನೆಗೆ ವಾಪಸ್‌ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.ವಸೀಂ, ಅಡ್ಡರಸ್ತೆಯಿಂದ ಮುಖ್ಯರಸ್ತೆಗೆ ತಿರುವು ಪಡೆದುಕೊಳ್ಳುವ ಯತ್ನದಲ್ಲಿದ್ದಾಗ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಆತನನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಆತ ಸಾವನ್ನಪ್ಪಿದ ಎಂದು ಪೊಲೀಸರು ಹೇಳಿದ್ದಾರೆ.ಬಸ್‌ ನಗರದ ಕಲಾಸಿಪಾಳ್ಯದಿಂದ ಕನಕಪುರಕ್ಕೆ ಹೋಗುತ್ತಿತ್ತು. ಕುಮಾರಸ್ವಾಮಿಲೇಔಟ್‌ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್‌ ಚಾಲಕನನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry