ಪ್ರತ್ಯೇಕ ಅಪಘಾತ: ಮಗು ಸೇರಿ ಇಬ್ಬರ ಸಾವು

7

ಪ್ರತ್ಯೇಕ ಅಪಘಾತ: ಮಗು ಸೇರಿ ಇಬ್ಬರ ಸಾವು

Published:
Updated:

ಬೆಂಗಳೂರು: ಎಚ್‌ಎಎಲ್‌ ವಿಮಾನ ನಿಲ್ದಾಣ ಸಮೀಪದ ರಾಮಯ್ಯರೆಡ್ಡಿ ಕಾಲೊನಿಯಲ್ಲಿ ಶನಿವಾರ ಕಾರು ಡಿಕ್ಕಿ ಹೊಡೆದು ಮುನಿಯ ಎಂಬ ಎರಡು ವರ್ಷದ ಗಂಡು ಮಗು ಸಾವನ್ನಪ್ಪಿದ್ದು, ಜೆ.ಪಿ.ನಗರ ಎರೇ ಹಂತದಲ್ಲಿ ಸಂಭವಿಸಿದ ಅಪಘಾತದಲ್ಲಿ ಪ್ರದೀಪ್‌ (25) ಎಂಬುವರು ಮೃತಪಟ್ಟಿದ್ದಾರೆ.ರಾಮಯ್ಯರೆಡ್ಡಿ ಕಾಲೊನಿ ಒಂದನೇ ಅಡ್ಡರಸ್ತೆಯಲ್ಲಿ ವಾಸವಿರುವ ಸೆಲ್ವಂ ಮತ್ತು ಕಸ್ತೂರಿ ದಂಪತಿ ಮಗುವಾದ ಮುನಿಯ, ಮನೆಯ ಮುಂದಿನ ರಸ್ತೆ ಬದಿಯಲ್ಲಿ ಸಂಜೆ ಆಟವಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಕಾರು ಚಾಲಕ ಇಸಾಕ್‌ ಎಂಬುವರು ಮಗುವನ್ನು ಗಮನಿಸದೆ ಹಿಮ್ಮುಖವಾಗಿ ವಾಹನ ಚಾಲನೆ ಮಾಡಿದ್ದಾರೆ. ಆಗ ಕಾರು ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡ ಮಗು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.ತಮಿಳುನಾಡು ಮೂಲದ ಸೆಲ್ವಂ ದಂಪತಿ ಕೂಲಿ ಕಾರ್ಮಿಕರು. ಏರ್‌ಪೋರ್ಟ್‌ ಸಂಚಾರ ಠಾಣೆ ಪೊಲೀಸರು ಇಸಾಕ್‌ನನ್ನು ಬಂಧಿಸಿ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದೂರು ದಾಖಲಾಗಿದೆ.ಮತ್ತೊಂದು ಪ್ರಕರಣ: ಕನಕಪುರ ರಸ್ತೆ ಬಳಿಯ ವಡ್ಡರಪಾಳ್ಯ ನಿವಾಸಿಯಾದ ಪ್ರದೀಪ್‌, ಆಟೊ ಚಾಲಕರಾಗಿದ್ದರು.ಕಾಳಪ್ಪ ಎಂಬುವರ ಆಟೊವನ್ನು ಖರೀದಿಸಲು ಉದ್ದೇಶಿಸಿದ್ದ ಅವರು ಆ ಆಟೊವನ್ನು ಪ್ರಾಯೋಗಿಕ ಚಾಲನೆಗಾಗಿ ತೆಗೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.ಪ್ರದೀಪ್‌, ನಿಯಂತ್ರಣ ತಪ್ಪಿ ರಸ್ತೆ ವಿಭಜಕದಲ್ಲಿನ ವಿದ್ಯುತ್‌ ಕಂಬಕ್ಕೆ ಆಟೊ ಗುದ್ದಿಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದ್ದಾರೆ. ಜಯನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry