ಪ್ರತ್ಯೇಕ ಅಪಘಾತ: ವೃದ್ಧೆ ಸೇರಿ ಇಬ್ಬರ ಸಾವು

7

ಪ್ರತ್ಯೇಕ ಅಪಘಾತ: ವೃದ್ಧೆ ಸೇರಿ ಇಬ್ಬರ ಸಾವು

Published:
Updated:

ಬೆಂಗಳೂರು: ನಗರದ ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ವೃದ್ಧೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.ರಾಮಮೂರ್ತಿನಗರ ವರ್ತುಲ ರಸ್ತೆಯ ಹೊರಮಾವು ಸೇತುವೆ ಸಮೀಪ ಲಾರಿ ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಲೋಹಿತ್ (25) ಎಂಬುವರು ಮೃತಪಟ್ಟಿದ್ದಾರೆ.ಮೂಲತಃ ತುಮಕೂರಿನ ಅವರು ಕ್ಯಾಂಟರ್ ಚಾಲಕರಾಗಿದ್ದರು. ಘಟನೆಯಲ್ಲಿ ಕ್ಯಾಂಟರ್ ಕ್ಲೀನರ್ ರಾಮಣ್ಣ ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಲೋಹಿತ್, ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ವಾಹನ ಗುದ್ದಿಸಿದ್ದಾರೆ. ಇದರಿಂದಾಗಿ ಅಡ್ಡಾದಿಡ್ಡಿ ಚಲಿಸಿದ ಕ್ಯಾಂಟರ್, ಪಕ್ಕದ ರಸ್ತೆಗೆ ನುಗ್ಗಿದೆ. ಅದೇ ವೇಳೆಗೆ ಎದುರುಗಡೆಯಿಂದ ಬಂದ ಲಾರಿ, ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಲೋಹಿತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದ್ದಾರೆ.

ಮತ್ತೊಂದು ಪ್ರಕರಣ: ಕೆ.ಆರ್.ಪುರ ರೈಲು ನಿಲ್ದಾಣದ ಬಳಿ ಲಾರಿ ಡಿಕ್ಕಿ ಹೊಡೆದು ಎ.ನಾರಾಯಣಪುರ ನಿವಾಸಿ ಜಯಮೇರಿ (95) ಎಂಬುವರು ಮೃತಪಟ್ಟಿದ್ದಾರೆ.ಜಯಮೇರಿ ಅವರು ಕೆ.ಆರ್.ಪುರ ರೈಲು ನಿಲ್ದಾಣ ಸಮೀಪದ ಖಾಸಗಿ ಕಾಲೇಜಿನಲ್ಲಿ ಉದ್ಯೋಗಿಯಾಗಿರುವ ಮಗಳನ್ನು ಭೇಟಿ ಮಾಡಲು ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ರಸ್ತೆ ದಾಟುವ ಯತ್ನದಲ್ಲಿದ್ದ ಅವರಿಗೆ ಲಾರಿ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ಪುರ ಸಂಚಾರ ಠಾಣೆಯಲ್ಲಿ ಎರಡೂ ಪ್ರಕರಣಗಳು ದಾಖಲಾಗಿವೆ.ಕಾರಿಗೆ ಬೈಕ್ ಡಿಕ್ಕಿ- ವ್ಯಕ್ತಿ ಬಂಧನ:

ನಗರದ ನೆಟ್ಟಕಲ್ಲಪ್ಪ ವೃತ್ತದ ಸಿಗ್ನಲ್ ಬಳಿ ಮಣಿಪುರ ಮೂಲದ ಸ್ವರ್ ಥೌನೋಜಂ ಎಂಬ ಮಹಿಳೆಯ ಕಾರಿಗೆ ಬೈಕ್ ಗುದ್ದಿಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಆದರೆ, ಪೊಲೀಸರು ಆತನ ಹೆಸರನ್ನು ಬಹಿರಂಗಪಡಿಸಿಲ್ಲ.ಸ್ವರ್ ಅವರು ಘಟನೆ ಸಂಬಂಧ ಬಸವನಗುಡಿ ಸಂಚಾರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ, ಅಪಘಾತ ನಡೆದ ಸಂದರ್ಭದಲ್ಲಿ ಪಾನಮತ್ತ ವ್ಯಕ್ತಿಗಳ ಗುಂಪೊಂದು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಲೈಂಗಿಕ ಕಿರುಕುಳ ನೀಡಿತ್ತು ಎಂದು ಅವರು ಬಸವನಗುಡಿ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗೆ ಪ್ರತ್ಯೇಕ ದೂರು ಕೊಟ್ಟಿದ್ದರು.`ಪ್ರಕರಣ ವಿಚಾರಣೆಗಾಗಿ ಸ್ಥಳಕ್ಕೆ ಬಂದಿದ್ದ ಬಸವನಗುಡಿ ಸಂಚಾರ ಠಾಣೆ ಕಾನ್‌ಸ್ಟೇಬಲ್ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಸ್ವರ್ ದೂರಿದ್ದಾರೆ. ಹೀಗಾಗಿ ಸಿಬ್ಬಂದಿಯ ವಿಚಾರಣೆ ನಡೆಸಲಾಗುತ್ತಿದೆ. ಆ ಮಹಿಳೆ ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದ್ದರಿಂದ ವಾಹನ ದಟ್ಟಣೆ ಉಂಟಾಗಿತ್ತು. ಹೀಗಾಗಿ ಸ್ಥಳದಿಂದ ಕಾರು ತೆಗೆಯುವಂತೆ ಅವರಿಗೆ ಸೂಚಿಸಿದೆ. ಅದನ್ನೇ ತಪ್ಪಾಗಿ ಗ್ರಹಿಸಿಕೊಂಡು ನನ್ನ ಮೇಲೆಯೇ ದೂರು ನೀಡಿದ್ದಾರೆ ಎಂದು ಸಿಬ್ಬಂದಿ ವಿಚಾರಣೆ ವೇಳೆ ಹೇಳಿದ್ದಾರೆ' ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

`ಘಟನೆಯ ದೃಶ್ಯಗಳನ್ನು ನಾನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದೇನೆ. ಅದರ ಆಧಾರದ ಮೇಲೆ ಶೀಘ್ರವೇ ಎಲ್ಲಾ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ' ಎಂದು ಸ್ವರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry