ಶನಿವಾರ, ಜೂನ್ 19, 2021
23 °C

ಪ್ರತ್ಯೇಕ ಅಪರಾಧ ಪ್ರಕರಣ:ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯುವಕನ ತಲೆ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಮತ್ತೀಕೆರೆಯ ಚೌಡೇಶ್ವರಿ ಬಸ್ ನಿಲ್ದಾಣದ ಬಳಿ ಶನಿವಾರ ರಾತ್ರಿ ನಡೆದಿದೆ.ಜಾಲಹಳ್ಳಿಯ ಎಚ್‌ಎಂಟಿ ಲೇಔಟ್ ನಿವಾಸಿ ರಮೇಶ್ (25) ಕೊಲೆಯಾದವರು. ಕೂಲಿ ಕೆಲಸ ಮಾಡುತ್ತಿದ್ದ ಅವರು ಮದ್ಯವ್ಯಸನಿ ಆಗಿದ್ದರು.ಕುಟುಂಬ ಸದಸ್ಯರಿಂದ ದೂರವಾಗಿದ್ದ ಅವರು ಚೌಡೇಶ್ವರಿ ಬಸ್ ನಿಲ್ದಾಣದ ಬಳಿ ಲಾರಿಯೊಂದರಲ್ಲಿ ಮಲಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಅವರು ಲಾರಿಯಲ್ಲಿ ರಾತ್ರಿ ನಿದ್ರೆ ಮಾಡುತ್ತಿದ್ದಾಗ ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಯಶವಂತಪುರ ಠಾಣೆಯಲ್ಲಿ ದೂರು ದಾಖಲಾಗಿದೆ.ಯುವಕ ಆತ್ಮಹತ್ಯೆ

ಯುವಕನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಾಜಿನಗರ ಸಮೀಪದ ರಾಜೀವ್‌ಗಾಂಧಿ ಕಾಲೊನಿಯಲ್ಲಿ ಭಾನುವಾರ ನಸುಕಿನಲ್ಲಿ ನಡೆದಿದೆ.  ರಾಜೀವ್‌ಗಾಂಧಿ ಕಾಲೊನಿ ನಿವಾಸಿ ನಾಗಭೂಷಣ್ ಎಂಬುವರ ಪುತ್ರ ಕಿರಣ್(24) ಆತ್ಮಹತ್ಯೆ ಮಾಡಿಕೊಂಡವರು. ತಮಟೆ ಬಾರಿಸುತ್ತ ಜೀವನ ಸಾಗಿಸುತ್ತಿದ್ದ ಅವರು ಸ್ನೇಹಿತರೊಂದಿಗೆ ಶನಿವಾರ ಹೋಳಿ ಹಬ್ಬ ಆಚರಿಸಿ ರಾತ್ರಿ ಒಂದು ಗಂಟೆ ಸುಮಾರಿಗೆ ಮನೆಗೆ ಬಂದು ಮಲಗಿದ್ದರು.ಬೆಳಗಿನ ಜಾವ ಎಚ್ಚರಗೊಂಡ ಅವರು ಮನೆಯ ಸಮೀಪದ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮಹಡಿಯಿಂದ ಬಿದ್ದು ಸಾವು


ಮಾನಸಿಕ ಅಸ್ವಸ್ಥರೊಬ್ಬರು ಮನೆಯ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಾಜಿನಗರ ಬಳಿಯ ಧನಕೋಟಿ ಲೇನ್ ಬಡಾವಣೆಯಲ್ಲಿ ಭಾನುವಾರ ನಡೆದಿದೆ.ಮಹಮ್ಮದ್ ನವಾಬ್ (54) ಮೃತಪಟ್ಟವರು. 20 ವರ್ಷದಿಂದ ಮಾನಸಿಕ ಅಸ್ವಸ್ಥರಾಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬೆಳಿಗ್ಗೆ ಮಾತ್ರೆ ನುಂಗಿದ ನಂತರ ಅವರು ಮನೆಯ ಎರಡನೇ ಮಹಡಿಗೆ ಹೋಗಿದ್ದರು. ಮಹಡಿಯ ಅಂಚಿನಲ್ಲಿ ನಿಂತಿದ್ದ ಅವರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ.ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.ಅವರು ಮಾತ್ರೆ ಸೇವಿಸಿದ್ದರಿಂದ ತಲೆ ಸುತ್ತಿ ಕೆಳಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶಿವಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೋಟೆಲ್‌ನಲ್ಲಿ ಬೆಂಕಿ

ಸುಬ್ರಹ್ಮಣ್ಯನಗರದ ಹೋಟೆಲ್ ಒಂದರ ಅಡುಗೆ ಕೋಣೆಯಲ್ಲಿ ಭಾನುವಾರ ಬೆಳಿಗ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ದೇವಯ್ಯ ಪಾರ್ಕ್ ಬಳಿ ಇರುವ ಹೊಟೇಲ್‌ನ ಚಿಮಣಿಯಲ್ಲಿ ಬೆಂಕಿ ಹೊತ್ತಿಕೊಂಡು ಹೊಗೆ ಬರಲಾರಂಭಿಸಿತು. ಇದರಿಂದ ಆತಂಕಗೊಂಡ ಹೋಟೆಲ್‌ನ ನೌಕರರು ಮತ್ತು ಗ್ರಾಹಕರು ಕೂಡಲೇ ಹೊರಗೆ ಓಡಿ ಬಂದರು.

ನಂತರ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದರು. ಎರಡು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.