ಬುಧವಾರ, ಜೂನ್ 23, 2021
24 °C

ಪ್ರತ್ಯೇಕ ಇಲಾಖೆಗೆ ಶೀಘ್ರ ಪ್ರಸ್ತಾವ: ಮನು ಬಳಿಗಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಪ್ರತ್ಯೇಕ ಇಲಾಖೆಗಳಾಗಿಸುವ ಬಗ್ಗೆ ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಹೇಳಿದರು.ನಗರದಲ್ಲಿ ಭಾನುವಾರ ನಡೆದ ನಿವೃತ್ತ ಐಎಎಸ್ ಅಧಿಕಾರಿ ಬಿ.ಪಾರ್ಥಸಾರಥಿ ಅವರ `ಕಾರ್ಯಭಾರದ ನೆನಪುಗಳು~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂದು ದೊಡ್ಡ ಇಲಾಖೆಯಾಗಿ ಬೆಳೆದಿದೆ. ಬಿ.ಪಾರ್ಥಸಾರಥಿ ಅವರು ತಮ್ಮ ಕೃತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಪ್ರತ್ಯೇಕಗೊಂಡರೆ ಎರಡೂ ಇಲಾಖೆಗಳ ಮೂಲಕ ಇನ್ನೂ ಸಾಕಷ್ಟು ಕೆಲಸಗಳಾಗುವ ಮಾತನ್ನಾಡಿದ್ದಾರೆ. ಹೀಗಾಗಿ ಇಲಾಖೆಯನ್ನು ಪ್ರತ್ಯೇಕವಾಗಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು~ ಎಂದು ಅವರು ನುಡಿದರು.`ಪಾರ್ಥಸಾರಥಿ ಅವರು ದೊಡ್ಡ ಮನಸ್ಸಿನ ದೊಡ್ಡ ಮನುಷ್ಯ. ಸರ್ಕಾರದ ವಿವಿಧ ಇಲಾಖೆಗಳಲ್ಲಿದ್ದುಕೊಂಡು ಅವರು ಮಾಡಿರುವ ಕೆಲಸ ಸಾರ್ವಕಾಲಿಕವಾಗಿ ಉಳಿಯುವಂಥದ್ದು. ತಮ್ಮ ಅಧಿಕಾರಾವಧಿಯ ಅನುಭವಗಳನ್ನು ದಾಖಲಿಸಿರುವ ಅವರ ಪುಸ್ತಕವನ್ನು ಎಲ್ಲ ಸರ್ಕಾರಿ ಅಧಿಕಾರಿಗಳೂ ಓದಿ ತಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳಬೇಕು. ಭಾಷೆ ಒಂದು ಅಸ್ತ್ರವಾಗಿ ಕೆಲಸ ಮಾಡುವ ರೀತಿಯನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ~ ಎಂದರು.ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಮಾತನಾಡಿ, `ಸರ್ಕಾರದಲ್ಲಿ ಹಲವು ಸೂಕ್ಷ್ಮ ಸಂದರ್ಭಗಳು ಎದುರಾದಾಗ ಅದನ್ನು ನಿಯಂತ್ರಿಸುವುದು ಹೇಗೆ ಎಂಬ ಬಗ್ಗೆ ಕೃತಿಯಲ್ಲಿ ಉತ್ತರಗಳಿವೆ. ಎಲ್ಲ ಸರ್ಕಾರಿ ಅಧಿಕಾರಿಗಳೂ ಈ ಕೃತಿಯನ್ನು ಓದಬೇಕು. ಸರ್ಕಾರಿ ಅಧಿಕಾರಿಗಳಿಗೆ ಉಪಯುಕ್ತವಾಗುವ ಈ ಕೃತಿಯನ್ನು ಸರ್ಕಾರದ ಆಡಳಿತ ತರಬೇತಿ ಕೇಂದ್ರದ ಅಭ್ಯರ್ಥಿಗಳಿಗೆ ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು~ ಎಂದರು.ಪುಸ್ತಕದ ಲೇಖಕ ಬಿ.ಪಾರ್ಥಸಾರಥಿ ಮಾತನಾಡಿ, `ರಾಜಕೀಯವಾಗಿ ಏನೇ ವೈರುಧ್ಯಗಳಿದ್ದರೂ ದೇವೇಗೌಡ ನನ್ನ ನೆಚ್ಚಿನ ರಾಜಕಾರಣಿ. ಅವರ ರಾಜಕೀಯ ಬದ್ಧತೆ ಹಾಗೂ ಕಾರ್ಯವೈಖರಿ ಮಾದರಿಯಾಗುವಂಥದ್ದು. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ರೂ. 2.5 ಸಾವಿರ ಕೋಟಿ ಬಿಡುಗಡೆ ಮಾಡಿ ಬೃಹತ್ ನೀರಾವರಿ ಯೋಜನೆಗಳಿಗೆ ಮೇಲ್ಪಂಕ್ತಿ ಹಾಕಿದರು. ಹಾಗೆಯೇ ಸರ್ಕಾರಿ ಅಧಿಕಾರಿಗಳಲ್ಲಿ ಮುಖ್ಯ ಕಾರ್ಯದರ್ಶಿಗಳಾಗಿದ್ದ ನರಸಿಂಹರಾವ್ ಹಾಗೂ ಸತೀಶ್ ಚಂದ್ರನ್ ನನ್ನ ಮೆಚ್ಚಿನ ಅಧಿಕಾರಿಗಳು~ ಎಂದರು.ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಮಾತನಾಡಿ, `ಪಾರ್ಥಸಾರಥಿ ಅವರು ಕೃತಿಯ ಮೂಲಕ ಮನಬಿಚ್ಚಿ ಮಾತನಾಡಿದ್ದಾರೆ. ಅಧಿಕಾರಿಶಾಹಿತನವನ್ನು ಮೀರಿದ ಚಿಂತನೆಗಳು ಅವರ ಬರಹದಲ್ಲಿ ಕಾಣುತ್ತವೆ. ಅವರೊಬ್ಬ ನಿರಂತರ ಕಲಿಕಾ ಮನೋಭಾವದ ಕನ್ನಡ ಪರ ಚಿಂತಕ~ ಎಂದು ಅವರು ತಿಳಿಸಿದರು.ಬಿಬಿಎಂಪಿ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ ಮಾತನಾಡಿ, `ಪಾರ್ಥಸಾರಥಿ ಅವರದ್ದು ಅಧಿಕಾರಕ್ಕೆ ಹೆಚ್ಚು ಅಂಟಿಕೊಳ್ಳದ ಮಾದರಿ ಬದುಕು. ಅಧಿಕಾರಿಗಳು ಇಂದು ರಾಜಕಾರಣಿಗಳ ಮರ್ಜಿ ಹಾಗೂ ದಾಕ್ಷಿಣ್ಯಕ್ಕೆ ಒಳಗಾಗುವುದೇ ಹೆಚ್ಚು. ಆದರೆ ಇದಕ್ಕೆ ವಿರುದ್ಧವಾಗಿ ಬದುಕಿದ ನೇರ ನಡೆ, ನುಡಿಯ ವ್ಯಕ್ತಿ ಅವರು~ ಎಂದರು.ಕವಿ ಎಸ್.ಜಿ.ಸಿದ್ಧರಾಮಯ್ಯ ಕೃತಿ ಪರಿಚಯ ಮಾಡಿದರು. ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಎಂ.ಬೈರೇಗೌಡ ಇತರರು ಉಪಸ್ಥತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.