ಪ್ರತ್ಯೇಕ ಪ್ರಕರಣ; ಇಬ್ಬರ ಭೀಕರ ಕೊಲೆ

7

ಪ್ರತ್ಯೇಕ ಪ್ರಕರಣ; ಇಬ್ಬರ ಭೀಕರ ಕೊಲೆ

Published:
Updated:

ಬೆಂಗಳೂರು: ನಗರದ ಜ್ಞಾನಭಾರತಿ ಮತ್ತು ತ್ಯಾಗರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಇಬ್ಬರನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ.ಎರಡು ಗುಂಪಿನ ಮಧ್ಯೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಾಗರಬಾವಿ ಸಮೀಪದ ಕೆಂಗುಂಟೆಯಲ್ಲಿ ಶನಿವಾರ ರಾತ್ರಿ ನಡೆದಿದೆ.ಮರಿಯಪ್ಪನಪಾಳ್ಯದ ನಿವಾಸಿಯಾಗಿದ್ದ ಸುನಿಲ್ (35) ಕೊಲೆಯಾದವರು. ಸುನಿಲ್ ಅವರ ಸ್ನೇಹಿತರಾದ ನರಸಿಂಹಮೂರ್ತಿ ಮತ್ತು ಮೇಘರಾಜ್ ಎಂಬುವರು ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಮಂಜ ಉರುಫ್ ಗೊಲ್ಲ ಮಂಜ ಮತ್ತು ಆತನ ಸಹಚರರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸುನಿಲ್, ಮೇಘರಾಜ್ ಮತ್ತು ನರಸಿಂಹಮೂರ್ತಿ ಮೂರೂ ಮಂದಿ ರಾತ್ರಿ ಒಟ್ಟಿಗೆ ಮದ್ಯಪಾನ ಮಾಡಿದ್ದಾರೆ. ಖಾಸಗಿ ಶಾಲೆಯೊಂದರಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಅವರು ರಾತ್ರಿ 11.30ರ ಸುಮಾರಿಗೆ ಕೆಂಗುಂಟೆಗೆ ಹೋದಾಗ ಮಂಜ ಮತ್ತು ಆತನ ಏಳೆಂಟು ಮಂದಿ ಸಹಚರರು ಕಾರನ್ನು ಅಡ್ಡಗಟ್ಟಿದ್ದಾರೆ.

ಹತ್ತು ಸಾವಿರ ನೀಡುವಂತೆ ಮಂಜ, ಸುನಿಲ್ ಅವರನ್ನು ಕೇಳಿದ್ದಾನೆ. ನಾಳೆ ನೀಡುವುದಾಗಿ ಅವರು ಹೇಳುತ್ತಿರುವಾಗ ಮಂಜನ ಗುಂಪಿನಲ್ಲಿದ್ದವನೊಬ್ಬ ದೊಣ್ಣೆಯಿಂದ ಮೇಘರಾಜ್ ಅವರ ತಲೆಗೆ ಹೊಡೆದಿದ್ದಾನೆ. ಈ ಸಂದರ್ಭದಲ್ಲಿ ಎರಡೂ ಗುಂಪಿನ ಮಧ್ಯೆ ಹೊಡೆದಾಟವಾಗಿದೆ. ಸುನಿಲ್ ಅವರನ್ನು ಅಟ್ಟಾಡಿಸಿಕೊಂಡು ಹೊಡೆದ ದುಷ್ಕರ್ಮಿಗಳು ಕೆಳಗೆ ಬಿದ್ದ ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.`ಸುನಿಲ್, ಮೇಘರಾಜ್ ಮತ್ತು ಮಂಜ ಎಲ್ಲರೂ ಪರಿಚಿತರೇ ಆಗಿದ್ದಾರೆ. ಯಾವ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ ಎಂದು ನಿಖರವಾಗಿ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ~ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್. ಸಿದ್ದರಾಮಪ್ಪ ತಿಳಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತ್ಯಾಗರಾಜನಗರ: ಯುವಕನೊಬ್ಬನನ್ನು ಕತ್ತು ಕೊಯ್ದು ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ತ್ಯಾಗರಾಜನಗರದ ಬೈರಪ್ಪ ಬ್ಲಾಕ್ ಸಮೀಪ ಎಸೆದು ಪರಾರಿಯಾಗಿರುವ ಘಟನೆ ಭಾನುವಾರ ನಡೆದಿದೆ.

ಆಟೊ ಚಾಲಕರಾಗಿದ್ದ ನಾರಾಯಣಸ್ವಾಮಿ (26) ಕೊಲೆಯಾದವರು. ಅವರು ಬನಶಂಕರಿ ನಿವಾಸಿಯಾಗಿದ್ದರು.ಬೇರೆ ಸ್ಥಳದಲ್ಲಿ ಅವರ ಕತ್ತು ಸೀಳಿ ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ಬೆಡ್‌ಶಿಟ್‌ನಲ್ಲಿ ಸುತ್ತಿ ಅದನ್ನು ಗೋಣಿ ಚೀಲಕ್ಕೆ ತುಂಬಿ ಬೈರಪ್ಪ ಬ್ಲಾಕ್‌ನಲ್ಲಿ ಎಸೆದು ಪರಾರಿಯಾಗಿದ್ದರು. ಅನುಮಾನಾಸ್ಪದವಾಗಿ ಬಿದ್ದಿದ್ದ ಗೋಣಿ ಚೀಲವನ್ನು ಗಮನಿಸಿದ ಸಾರ್ವಜನಿಕರು ಮಾಹಿತಿ ನೀಡಿದರು. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ನಾರಾಯಣಸ್ವಾಮಿ ಕೊಲೆಯಾಗಿದ್ದು ಗೊತ್ತಾಯಿತು. ಕೊಲೆಗೆ ಕಾರಣ ಏನೆಂದು ಗೊತ್ತಾಗಿಲ್ಲ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತ್ಯಾಗರಾಜನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry