ಪ್ರತ್ಯೇಕ ಪ್ರಕರಣ: ಯುವತಿ ಸೇರಿ 3 ಮಂದಿ ಆತ್ಮಹತ್ಯೆ

7

ಪ್ರತ್ಯೇಕ ಪ್ರಕರಣ: ಯುವತಿ ಸೇರಿ 3 ಮಂದಿ ಆತ್ಮಹತ್ಯೆ

Published:
Updated:

ಬೆಂಗಳೂರು: ನಗರದ ಕಾಡುಗೋಡಿ, ಯಶವಂತಪುರ ಮತ್ತು ವಿಜಯನಗರದಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಯುವತಿ ಸೇರಿದಂತೆ ಮೂರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಜೀವನದಲ್ಲಿ ಜಿಗುಪ್ಸೆಗೊಂಡ ಅನಿತಾ (19) ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಡುಗೋಡಿಯಲ್ಲಿ ಸೋಮವಾರ ನಡೆದಿದೆ.ಮಾಲೂರಿನ ಚಿನ್ನಪ್ಪ ಎಂಬುವರ ಮಗಳಾದ ಅನಿತಾ ಅವರು ಸಹೋದರಿ ಕಾಂತಮ್ಮ ಎಂಬುವರ ಮನೆಯಲ್ಲಿ ವಾಸವಿದ್ದರು. ಕಾಂತಮ್ಮ ಕಾಡುಗೋಡಿಯಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡಿದ್ದಾರೆ. ಬಡತನದಿಂದ ಮನನೊಂದಿದ್ದ ಅನಿತಾ ಕುಟುಂಬ ಸದಸ್ಯರೆಲ್ಲ ಹೊರಗೆ ಹೋಗಿದ್ದ ಸಂದರ್ಭದಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಕಾಡುಗೋಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಪತಿಯ ಕಿರುಕುಳ ಆತ್ಮಹತ್ಯೆ: ಪತಿಯ ಕಿರುಕುಳದಿಂದ ಮನನೊಂದು ಆರ್.ರಾಧಾ (38) ಎಂಬುವರು ವಿಜಯನಗರದ ಆರ್.ಪಿ.ಸಿ.ಲೇಔಟ್‌ನಲ್ಲಿ ಮಂಗಳವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪತಿ ಕೇಶವ್ ಅವರು ಸಣ್ಣಪುಟ್ಟ ವಿಷಯಕ್ಕೂ ರಾಧಾ ಅವರೊಂದಿಗೆ ಜಗಳವಾಡುತ್ತಿದ್ದರು. ಸೋಮವಾರ ರಾತ್ರಿಯೂ ದಂಪತಿ ನಡುವೆ ಇದೇ ರೀತಿ ಜಗಳವಾಗಿತ್ತು. ಇದರಿಂದ ಮನನೊಂದ ಅವರು ಪತಿ ಮತ್ತು ಮಕ್ಕಳು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕೇಶವ್ ಅವರು ಬಿಎಚ್‌ಇಎಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.‘ಸಣ್ಣಪುಟ್ಟ ವಿಷಯಕ್ಕೂ ಕೇಶವ್ ಸಹೋದರಿಯ ಜತೆ ಜಗಳವಾಡಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸರಗೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ರಾಧಾ ಅವರ ಅಣ್ಣ ಜಗದೀಶ್ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕೇಶವ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿಜಯನಗರ ಪೊಲೀಸರು ಹೇಳಿದ್ದಾರೆ.ಕೌಟುಂಬಿಕ ಕಲಹದಿಂದ ಆತ್ಮಹತ್ಯೆ: ಯಶವಂತಪುರ ಸಮೀಪದ ಮೋಹನ್‌ಕುಮಾರ್ ನಗರ ನಿವಾಸಿ ಲಕ್ಷ್ಮಿ (30) ಎಂಬುವರು ಕೌಟುಂಬಿಕ ಕಲಹದಿಂದ ಬೇಸರಗೊಂಡು ಮಂಗಳವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷ್ಮಿ, ಆಂಟೊ ಎಂಬುವರನ್ನು ಏಳು ತಿಂಗಳ ಹಿಂದೆ ವಿವಾಹವಾಗಿದ್ದರು. ಆಂಟೊ ವೆಲ್ಡಿಂಗ್ ಕೆಲಸ ಮಾಡುತ್ತಾರೆ.ಗರ್ಭಿಣಿಯಾಗಿದ್ದ ಲಕ್ಷ್ಮಿ ಅವರಿಗೆ ಇತ್ತೀಚೆಗಷ್ಟೇ ಗರ್ಭಪಾತವಾಗಿತ್ತು. ಇದರಿಂದ ಮನನೊಂದ ಅವರು ಮಲಗುವ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆಂಟೊ ಮತ್ತು ಪೋಷಕರು ಬೇರೆ ಕೊಠಡಿಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry