ಪ್ರತ್ಯೇಕ ಪ್ರಕರಣ: 6 ಹಂತಕರ ಸೆರೆ

7

ಪ್ರತ್ಯೇಕ ಪ್ರಕರಣ: 6 ಹಂತಕರ ಸೆರೆ

Published:
Updated:

ಬೆಂಗಳೂರು: ರಾಜ್ಯದ ವಿವಿಧೆಡೆ ನಡೆದಿದ್ದ ಕೊಲೆಗಳು ಹಾಗೂ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ನಗರದ ಪೀಣ್ಯ ಪೊಲೀಸರು ಮೂರು ಕೊಲೆ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.ಟಿ.ದಾಸರಹಳ್ಳಿಯ ಎಸ್.ಕೆ.ಪರಮೇಶಗೌಡ (28), ಎಚ್.ಎಂ.ಮಹೇಶ (23), ರಾಜೇಶ ಅಲಿಯಾಸ್ ಯೋಗೀಶ (26), ಅಂಧ್ರಹಳ್ಳಿ ಮುಖ್ಯರಸ್ತೆಯ ಎನ್.ಕೆ.ಉಮೇಶ ಅಲಿಯಾಸ್ ಜೋಗಿ (23), ಚಿಕ್ಕಸಂದ್ರದ ಹನುಮಂತರಾಜು (26) ಮತ್ತು ಅಬ್ಬಿಗೆರೆ ಕ್ರಾಸ್‌ನ ನಂಜೇಗೌಡ ಬಡಾವಣೆಯ ಸಿ.ನಾಗೇಶ (23) ಬಂಧಿತರು.`ಬೆಂಗಳೂರಿನ ವಿದ್ಯಾರಣ್ಯಪುರ ಮತ್ತು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಗಳನ್ನು ಭೇದಿಸಿರುವ ಸಿಬ್ಬಂದಿ ಆರು ಆರೋಪಿಗಳನ್ನು ಬಂಧಿಸಿ ಕಾರು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕೊಲೆಯಾದ ವ್ಯಕ್ತಿಗಳು ಮತ್ತು ಆರೋಪಿಗಳು ಸ್ನೇಹಿತರೇ ಆಗಿದ್ದು, ಒಟ್ಟಿಗೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಆ ದಂಧೆಯಿಂದ ಸಂಪಾದಿಸಿದ ಹಣ ಹಾಗೂ ಆಭರಣಗಳನ್ನು ಹಂಚಿಕೊಳ್ಳುವ ವಿಷಯವಾಗಿ ಭಿನ್ನಾಭಿಪ್ರಾಯ ಉಂಟಾಗಿ ಆರೋಪಿಗಳು ಸ್ನೇಹಿತರಾದ ಶ್ರೀನಿವಾಸ್, ಉಮೇಶ್ ಮತ್ತು ಮಧು ಎಂಬುವರನ್ನು ಕೊಲೆ ಮಾಡಿದ್ದರು. ಅಲ್ಲದೇ ಗಿರಾಕಿಗಳಿಗೆ ಮಾರಕಾಸ್ತ್ರಗಳಿಂದ ಬೆದರಿಸಿ ಹಣ ಮತ್ತು ಚಿನ್ನಾಭರಣ ದರೋಡೆ ಮಾಡಿದ್ದರು ಎಂದರು.ಮೂಲತಃ ಕುಣಿಗಲ್ ಮತ್ತು ಚನ್ನರಾಯಪಟ್ಟಣ ತಾಲ್ಲೂಕಿನ ಆರೋಪಿಗಳು ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಮೋಜಿನ ಜೀವನ ನಡೆಸುವ ಉದ್ದೇಶಕ್ಕಾಗಿ ಅವರು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಪ್ರಕರಣದ ಮತ್ತೊಬ್ಬ ಆರೋಪಿ ಚಲಪತಿ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಮಿರ್ಜಿ ಮಾಹಿತಿ ನೀಡಿದರು.ಉತ್ತರ ವಿಭಾಗದ ಡಿಸಿಪಿ ಎಚ್. ಎಸ್.ರೇವಣ್ಣ, ಯಶವಂತಪುರ ಉಪ ವಿಭಾಗದ ಎಸಿಪಿ ಎನ್.ಹನುಮಂತಪ್ಪ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಬಿ.ಎನ್.ಶಾಮಣ್ಣ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ಗಳಾದ ಬಿ.ದಯಾನಂದ, ಪ್ರಣವ್ ಮೊಹಾಂತಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.ಕೊಲೆ ಪ್ರಕರಣಗಳು: ತುಮಕೂರು ರಸ್ತೆಯ ಎಂಟನೇ ಮೈಲಿ ಕ್ರಾಸ್ ಬಳಿ ವಾಸವಾಗಿದ್ದ ಶ್ರೀನಿವಾಸ್ (27) ಎಂಬುವರನ್ನು 2010ರ ನವೆಂಬರ್‌ನಲ್ಲಿ ಕೊಲೆ ಮಾಡಿದ್ದ ಆರೋಪಿಗಳು, ಶವವನ್ನು ಚನ್ನರಾಯಪಟ್ಟಣ ಸಮೀಪದ ಹೇಮಾವತಿ ನಾಲೆಗೆ ಎಸೆದುಬಂದಿದ್ದರು.ಈ ಬಗ್ಗೆ ಶ್ರೀನಿವಾಸ್ ಪತ್ನಿ ಯಶೋಧಾ ಅವರು ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮೂಲತಃ ಕುಣಿಗಲ್ ತಾಲ್ಲೂಕಿನ ಶ್ರೀನಿವಾಸ್ ಆಟೊ ಚಾಲಕರಾಗಿದ್ದರು.ಸುಂಕದಕಟ್ಟೆ ನಿವಾಸಿ ಉಮೇಶ್ (24) ಎಂಬುವರನ್ನು ಹೆಗ್ಗನಹಳ್ಳಿ ಕ್ರಾಸ್‌ನಲ್ಲಿ 2011ರ ಡಿ.5ರಂದು ಕೊಲೆ ಮಾಡಿ ಶವವನ್ನು ಹೇಮಾವತಿ ನಾಲೆಗೆ ಎಸೆದಿದ್ದರು. ಈ ಬಗ್ಗೆ ಚನ್ನರಾಯಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿತ್ತು.ಚಿಕ್ಕಬಾಣಾವರ ನಿವಾಸಿ ಮಧು (28) ಎಂಬುವರನ್ನು ಫೆ.5ರಂದು ಚನ್ನರಾಯಪಟ್ಟಣ ಸಮೀಪದ ಹೊಂಬಾಳಕೊಪ್ಪಲು ಗ್ರಾಮಕ್ಕೆ ಕರೆಸಿಕೊಂಡು ಕೊಲೆ ಮಾಡಿದ್ದರು. ನಂತರ ಶವವನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಈ ಸಂಬಂಧ ಮಧು ಪತ್ನಿ ಶಶಿಕಲಾ ಅವರು ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry