ಬುಧವಾರ, ಏಪ್ರಿಲ್ 21, 2021
30 °C

ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೈದರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಯನ್ನು ಕಡೆಗಣಿಸಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ, ಪ್ರತ್ಯೇಕ ರಾಜ್ಯ ಸ್ಥಾನಮಾನಕ್ಕೆ ಒತ್ತಾಯಿಸಿ ಹೈ.ಕ. ಪ್ರತ್ಯೇಕ ರಾಜ್ಯ ಹೋರಾಟ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ನೀರಾವರಿ, ಕೈಗಾರಿಕೆ, ರಸ್ತೆ, ಆರೋಗ್ಯ, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳು ಅನಭಿವೃದ್ಧಿ ಸ್ಥಿತಿಯಲ್ಲಿವೆ ಎಂಬುದು ಸರ್ಕಾರಕ್ಕೆ ಮನವರಿಕೆಯಾಗಿದೆ. ಈ ಅನಭಿವೃದ್ಧಿ ಪಟ್ಟ ಹೋಗಲಾಡಿಸಲು 371 ವಿಧಿ ಜಾರಿಗೊಳಿಸಬೇಕು ಎಂದು ಅನೇಕ ಸಂಘಟನೆಗಳು ನಿರಂತರ ಹೋರಾಟ ಮಾಡಿಕೊಂಡು ಬಂದಿವೆ. ರಾಜ್ಯ ಸರ್ಕಾರದ ನೇತೃತ್ವದಲ್ಲಿ ವಿವಿಧ ಪಕ್ಷಗಳ ಮುಖಂಡರ ನಿಯೋಗವು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಭೇಟಿ ಕೂಡಾ ನೀಡಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.ವಾಜಪೇಯಿ ಅವರು ಪ್ರಧಾನಿಯಾಗಿದ್ದ ವೇಳೆಯಲ್ಲಿ ಹೈ.ಕ. ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತು ಪ್ರಸ್ತಾಪವಾಗಿತ್ತು. ಅನಂತರ ಬಂದ ಎರಡೂ ಸರ್ಕಾರಗಳು ಈ ಪ್ರಸ್ತಾವಕ್ಕೆ ಕಿಂಚಿತ್ತು ಬೆಲೆ ನೀಡಿಲ್ಲ. ಫೆಬ್ರುವರಿ 25ರಂದು ಹೈ.ಕ. ಭಾಗದಲ್ಲಿ 371 ಜಾರಿಗೊಳಿಸಬೇಕು ಎಂದು ರಾಜ್ಯಸಭೆಯಲ್ಲಿ ಮಸೂದೆ ಮಂಡನೆಗೆ ಮುಂದಾದಾಗ, ಕೇಂದ್ರ ಗೃಹ ಸಚಿವರು ನಿರ್ದಯವಾಗಿ ಮಸೂದೆಯನ್ನು ತಳ್ಳಿಹಾಕಿದ್ದಾರೆ. ಈ ಮೂಲಕ ಹೈ.ಕ. ಭಾಗದ ಜನರ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಎಂದು ಕಿಡಿಕಾರಿದರು.ಹೈ.ಕ. ಅಭಿವೃದ್ಧಿ ಕೈಬಿಟ್ಟ ಸರ್ಕಾರದ ನೀತಿಯನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು, ವ್ಯಾಪಾರಿಗಳ ಸಂಘಟನೆ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಅನ್ಯ ಮಾರ್ಗ ಹಿಡಿಯುವುದು ಅನಿವಾರ್ಯವಾಗಿದ್ದು, ಹೈ.ಕ. ಭಾಗಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕು. ಇಲ್ಲವಾದರೆ, ಮುಂಬರುವ ದಿನಗಳಲ್ಲಿ ಹೋರಾಟವನ್ನು ವ್ಯಾಪಕಗೊಳಿಸಲಾಗುವುದು. ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಿದೆ ಎಂದು ದಕ್ಷಿಣ ಮಧ್ಯೆ ರೈಲ್ವೆ ವ್ಯವಸ್ಥಾಪಕರ ಮೂಲಕ ಪ್ರಧಾನಮಂತ್ರಿ ಕಚೇರಿಗೆ ರವಾನಿಸಿದ ಮನವಿ ಪತ್ರದಲ್ಲಿ ಪ್ರತಿಭಟನಾಕಾರರು ಉಲ್ಲೇಖಿಸಿದ್ದಾರೆ.ಹೈ.ಕ.ಯುವ ಹೋರಾಟ ಸಮಿತಿಯ ರಾಜು ಕುಳಗೇರಿ, ಜಯ ಕರ್ನಾಟಕ ಸಂಘಟನೆಯ ವೀರಣ್ಣ ಕೊರಳ್ಳಿ, ದಲಿತ ಸೇನಾದ ಹಣಮಂತ ಯಳಸಂಗಿ, ಕನ್ನಡ ಭೂಮಿ ಜಾಗೃತಿ ವೇದಿಕೆಯ ಲಿಂಗರಾಜ ಸಿರ್ಗಾಪುರ ಮತ್ತು ವಿಶಾಲ ಕರ್ನಾಟಕ ಜಾಗೃತಿ ಸಮಿತಿಯ ಹಜ್ಜಿ ಸಾಬ್ ಭಾಗವಾನ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.