ಪ್ರತ್ಯೇಕ ರೈಲ್ವೆ ವಿಭಾಗ ಇಲ್ಲ

7
ಮಂಗಳೂರು, ಗುಲ್ಬರ್ಗ: ಸಚಿವ ಖರ್ಗೆ ಸ್ಪಷ್ಟನೆ

ಪ್ರತ್ಯೇಕ ರೈಲ್ವೆ ವಿಭಾಗ ಇಲ್ಲ

Published:
Updated:

ನವದೆಹಲಿ: ‘ಮಂಗಳೂರು ಮತ್ತು ಗುಲ್ಬರ್ಗ ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪಿಸುವ ಯಾವುದೇ ಪ್ರಸ್ತಾವ ಇಲ್ಲ’ ಎಂದು ರೈಲ್ವೆ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ಗುರುವಾರ ಸ್ಪಷ್ಟಪಡಿಸಿದರು.ರೈಲ್ವೆ ಸಚಿವರಾಗಿ ನೂರು ದಿನ ಪೂರೈಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಮಂಗಳೂರು ಮತ್ತು ಗುಲ್ಬರ್ಗ ರೈಲ್ವೆ ವಿಭಾಗಗಳಿಗೆ ಬೇಡಿಕೆ ಬಂದಿತ್ತು. ಆದರೆ, ಉನ್ನತಾಧಿಕಾರಿಗಳ ಸಮಿತಿ ಹೊಸ ವಿಭಾಗ ಸ್ಥಾಪನೆ ಬೇಡವೆಂದು ವರದಿ ಕೊಟ್ಟಿದೆ ಎಂದರು.ಆಡಳಿತಾತ್ಮಕ ಮತ್ತು ಆರ್ಥಿಕ ದೃಷ್ಟಿಯಿಂದ ಹೊಸ ವಿಭಾಗಗಳ ಸ್ಥಾಪನೆ ಕಾರ್ಯ ಸಾಧುವಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ರೈಲ್ವೆ ಮಂಡಳಿಯೂ ಇದೇ ನಿಲುವು ತಳೆದಿದೆ ಎಂದು ಖರ್ಗೆ ಹೇಳಿದರು. ರೈಲ್ವೆ ಸಚಿವರ ಹೇಳಿಕೆಯಿಂದಾಗಿ ಎರಡೂ ಭಾಗದ ಜನರ ನಿರೀಕ್ಷೆಗಳು ಹುಸಿಯಾದಂತಾಗಿದೆ.ಹೊಸ ವಿಭಾಗಗಳ ಸ್ಥಾಪನೆಗೆ ಅಗತ್ಯ ಪ್ರಮಾಣದ ರೈಲ್ವೆ ಮಾರ್ಗ ಮಂಗಳೂರು ಮತ್ತು ಗುಲ್ಬರ್ಗದಲ್ಲಿ ಇಲ್ಲ. ಕೇವಲ ಆದಾಯದ ಮಾನದಂಡದ ಮೇಲೆ ಹೊಸ ವಿಭಾಗ ಸ್ಥಾಪನೆ ಮಾಡಲು ಸಾಧ್ಯವಿಲ್ಲ ಎಂದು ಖರ್ಗೆ ವಿವರಿಸಿದರು.ಕೊಂಕಣ ರೈಲ್ವೆ ನಿಗಮಕ್ಕೆ ಮಂಗಳೂರು ಸೇರ್ಪಡೆ ಮಾಡುವ ಆಲೋಚನೆ ಇತ್ತು. ಅದಕ್ಕೆ ಕೇರಳ ವಿರೋಧ ವ್ಯಕ್ತಪಡಿಸಿತು ಎಂದು ರೈಲ್ವೆ ಸಚಿವರು ತಿಳಿಸಿದರು. ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೊಳ್ಳಲಾಗಿರುವ ರಾಜ್ಯದ ಯೋಜನೆಗಳಿಗೆ ರೈಲ್ವೆ 650ಕೋಟಿ ರೂಪಾಯಿ ನಿಗದಿ ಮಾಡಿದೆ. ಇದರಲ್ಲಿ ಈಗಾಗಲೇ 300 ಕೋಟಿ ರೂಪಾಯಿ ಖರ್ಚು ಮಾಡಿದೆ. ರಾಜ್ಯವೂ 650 ಕೋಟಿ ಕೊಡಬೇಕಿದ್ದು, ಆರು ತಿಂಗಳಲ್ಲಿ ಕೇವಲ 50 ಕೋಟಿ ಬಿಡುಗಡೆ ಮಾಡಿದೆ.ರಾಜ್ಯ ತಕ್ಷಣ ಹಣ ಬಿಡುಗಡೆ ಮಾಡಿದರೆ ಪ್ರಗತಿ­ಯಲ್ಲಿ­ರುವ ಕೆಲ ಯೋಜನೆಗಳನ್ನು ತ್ವರಿತವಾಗಿ ಮುಗಿಸಬಹುದು. ಟಿಪ್ಪು ಶಸ್ತ್ರಾಗಾರ ಸ್ಥಳಾಂತರ ವಿವಾದ, ಮದ್ದೂರು ಬಳಿ ಜಮೀನು ಸ್ವಾಧೀನ ಸಮಸ್ಯೆಯಿಂದ ಬೆಂಗಳೂರು– ಮೈಸೂರು ಜೋಡಿ ರೈಲು ಮಾರ್ಗ ವಿಳಂಬವಾಗಿದೆ. ರಾಜ್ಯ ಸರ್ಕಾರ ಸಮಸ್ಯೆ ಬಗೆಹರಿಸಿಕೊಟ್ಟರೆ ತಕ್ಷಣ ಕೆಲಸ ಮುಗಿಸಲು ಸಿದ್ಧ ಎಂದು ಖರ್ಗೆ ತಿಳಿಸಿದರು.ಬೆಂಗಳೂರು– ಮೈಸೂರು ಜೋಡಿ ಮಾರ್ಗ ಪೂರ್ಣ­ಗೊಂಡರೆ ಎರಡು ನಗರಗಳ ಮಧ್ಯೆ ತಡೆರಹಿತ ರೈಲು ಓಡಿ­ಸುವ ಚಿಂತನೆ ಇದೆ. ತಾವು ರೈಲ್ವೆ ಸಚಿವರಾದ ಮೇಲೆ ಐದು ಹೊಸ ರೈಲುಗಳನ್ನು ರಾಜ್ಯಕ್ಕೆ ಕೊಡಲಾಗಿದೆ. ಐದು ಟ್ರೈನುಗಳು ಬಜೆಟ್‌ ಹೊರತಾಗಿ ಕೊಟ್ಟಿರುವುದು ಎಂದರು.ರೈಲ್ವೆ ಪ್ರಯಾಣ ದರ ಏರಿಸುವ ಯಾವುದೇ ಪ್ರಸ್ತಾವ ಸಚಿವಾಲಯದ ಮುಂದಿಲ್ಲ. ಪ್ರಯಾಣ ದರ ಏರಿಸುವುದಕ್ಕೆ ವ್ಯಾಪಕವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಒಂದು ಸಲ ದರ ಏರಿಸಿ ಆಮೇಲೆ ಹಿಂತೆಗೆದುಕೊಂಡರೆ ಪ್ರಯೋಜನ­ವಿಲ್ಲ ಎಂದು  ಅಭಿಪ್ರಾಯಪಟ್ಟರು. ರೈಲ್ವೆ ನಷ್ಟದಲ್ಲಿದೆ. ಪ್ರಯಾ­ಣಿಕರ ವಿಭಾಗದಲ್ಲಿ ಪ್ರತಿ ವರ್ಷ 20 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ. ಸರಕು ಸಾಗಣೆ ವಿಭಾಗ­ದಿಂದ ಬರುವ ಆದಾಯದಿಂದಾಗಿ ಸ್ವಲ್ಪ ಪ್ರಮಾಣದಲ್ಲಿ ನಷ್ಟವನ್ನು ತುಂಬಿಕೊಳ್ಳಲಾಗುತ್ತಿದೆ.ಹತ್ತು ವರ್ಷದ ಹಿಂದೆ ರೈಲ್ವೆ ಹಣಕಾಸು ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿರಲಿಲ್ಲ. ಆ ಸಮಯದಲ್ಲಿ ಸಿಮೆಂಟ್‌, ಕಲ್ಲಿದ್ದಲು ಮತ್ತು ಅದಿರನ್ನು ದೊಡ್ಡ ಪ್ರಮಾಣದಲ್ಲಿ ಸಾಗಣೆ ಮಾಡಲಾಗುತಿತ್ತು. ಈಗ ಬೇರೆ ಬೇರೆ ಕಾರಣಗಳಿಂದಾಗಿ ಸರಕು ಸಾಗಣೆ ಇಳಿಮುಖವಾಗಿದೆ. ಅಲ್ಲದೆ ರೂಪಾಯಿ ಮೌಲ್ಯವೂ ಕುಸಿದಿದೆ ಎಂದು ಖರ್ಗೆ ವಿಶ್ಲೇಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry