ಪ್ರತ್ಯೇಕ ಹಾಲು ಒಕ್ಕೂಟ: ಧರಣಿ ಎಚ್ಚರಿಕೆ
ಕೊಪ್ಪ: ಹಾಸನ ಹಾಲು ಉತ್ಪಾದಕರ ಒಕ್ಕೂಟ ಜಿಲ್ಲೆಯ ರೈತರಿಂದ ಹಾಲು ಸಂಗ್ರಹಿಸಲು ಕ್ರಮಕೈಗೊಳ್ಳದಿದ್ದಲ್ಲಿ ಕೆಎಂಎಫ್ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿ ಶಾಸಕ ಡಿ.ಎನ್.ಜೀವರಾಜ್ ಹೇಳಿದರು.ಅವರು ಇಲ್ಲಿನ ಪುರಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಕೃಷಿ ಉತ್ಸವದಲ್ಲಿ ಮಾತನಾಡಿದರು.
ಹಾಸನ ಹಾಲು ಉತ್ಪಾದಕರ ಒಕ್ಕೂಟ ಜಿಲ್ಲೆಯಲ್ಲಿ ಹಾಲು ಮಾರುತ್ತಿದರೂ ಇಲ್ಲಿಯ ರೈತರಿಂದ ಹಾಲು ಪಡೆಯುತ್ತಿಲ್ಲ. ವಿದರ್ಭ ಯೋಜನೆಯ ನೆರವನ್ನು ಜಿಲ್ಲೆಯ ರೈತರಿಗೆ ಒದಗಿಸಿಲ್ಲ ಎಂದು ದೂರಿದ ಅವರು, ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ರಚನೆಗೆ ಸರ್ಕಾರ ಅನುಮತಿ ನೀಡುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದರು.
ಹಳದಿ ಎಲೆರೋಗ ಪೀಡಿತ ಬೆಳೆಗಾರರಿಗೆ ಪರಿಹಾರ ಒದಗಿಸಲು ಸದನದಲ್ಲಿ ಧ್ವನಿ ಎತ್ತಿದ್ದೇನೆ, ಗುಟ್ಕಾದಲ್ಲಿ ಪ್ಲಾಸ್ಟಿಕ್ ನಿಷೇಧಿಸಿರುವ ಕ್ರಮದ ವಿರುದ್ದ ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿ ಬಳಿಗೆ ಕೊಂಡೊಯ್ಯಲು ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದರು. ಸಂಸದ ಸದಾನಂದಗೌಡ ಮಾತನಾಡಿ, ಅಡಿಕೆ ಬೆಳೆಗಾರರ ಪರವಾಗಿ ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದ್ದು, ವಿತ್ತ ಸಚಿವರಿಗೆ ಬೆಳೆಗಾರರ ಸಂಕಷ್ಟ ಮನವರಿಕೆ ಮಾಡಲಾಗಿದ್ದು, ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ತಡೆನೀಡಲು ಸರ್ಕಾರ ಕೋರಿಕೆ ಸಲ್ಲಿಸಲು ಒಪ್ಪಿಸಲಾಗಿದೆ ಎಂದರು.
ಕೃಷಿ ಉತ್ಸವದ ಅಂಗವಾಗಿ ಪಟ್ಟಣ ಪಂಚಾಯಿತಿ ಕ್ರೀಡಾಂಗಣದಿಂದ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಉತ್ಸವದ ಅಂಗವಾಗಿ ತೋಟಗಾರಿಕೆ, ಪಶು ಸಂಗೋಪನೆ, ಜಲಾನಯನ, ಕೃಷಿ, ಅರಣ್ಯ ವಿವಿಧ ಇಲಾಖೆಗಳು ಏರ್ಪಡಿಸಿದ್ದ ವಸ್ತು ಪ್ರದರ್ಶನ ಗಮನ ಸೆಳೆಯಿತು.ಕೃಷಿ ಸಾಧಕರಾದ ಹಿರೆಕೊಡಿಗೆ ಸಚಿನ್, ಫ್ರಾನ್ಸಿಸ್ಡಿಸೋಜ, ಅಗಲಿ ನಾಗೇಶ್ರಾವ್, ಅಶೋಕ್ಕುಮಾರ್, ಕೆ.ಎನ್.ಕಾಡಪ್ಪಗೌಡ, ಕಾಳಮ್ಮ ಶೆಡ್ತಿ, ಅರೆಹಳ್ಳ ರಾಮಮೂರ್ತಿ, ಹೆಗಡೆಕೊಪ್ಪ ಸೂರಪ್ಪನಾಯಕ, ಜೋಗಿನ ಹಿತ್ತಲು ಮಂಜಯ್ಯ, ನಾರ್ವೆ ಮಂಜುನಾಥ್ರನ್ನು ಸನ್ಮಾನಿಸಲಾಯಿತು.
ಜಿ.ಪಂ.ಅಧ್ಯಕ್ಷೆ ಪ್ರಪುಲ್ಲಾ, ಜಿ.ಪಂ. ಸದಸ್ಯರಾದ ರವೀಂದ್ರ ಕುಕ್ಕುಡಿಗೆ, ಸುಚೇತ ನರೇಂದ್ರ, ಅನ್ನಪೂರ್ಣ, ತಾ.ಪಂ.ಅಧ್ಯಕ್ಷೆ ಪ್ರೇಮಾ ದಾಮೋಧರ್, ಉಪಾಧ್ಯಕ್ಷ ಜಯಂತ್, ಸದಸ್ಯರಾದ ಪೂರ್ಣಚಂದ್ರ, ಪದ್ಮಾವತಿ, ಪಳನಿ,ಸುಭದ್ರಮ್ಮ, ನಾರಾಯಣ, ಬೆಳಗುಳ ರಮೇಶ್, ಜಿ.ಪಂ.ಮಾಜಿ ಸದಸ್ಯ ಎಸ್.ಎನ್.ರಾಮಸ್ವಾಮಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ.ನರೇಂದ್ರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಸೀನಪ್ಪ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.