ಪ್ರಥಮ ಪದಕದ ಸಂಭ್ರಮ ತಂದ ಸಾಕ್ಷಿ

ರಿಯೊ ಡಿ ಜನೈರೊ (ಪಿಟಿಐ): ಸಾಕ್ಷಿ ಮಲಿಕ್ ಅವರು ರಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಪಾಳಯದಲ್ಲಿ ಸಂಭ್ರಮ ತಂದರು. ಹನ್ನೊಂದು ದಿನಗಳ ನಂತರ ಭಾರತ ಕೊನೆಗೂ ಪದಕದ ಖಾತೆ ತೆರೆಯಿತು.
ಗುರುವಾರ ಬೆಳಗಿನ ಜಾವ (ಭಾರತೀಯ ಕಾಲಮಾನದ ಪ್ರಕಾರ) ವನಿತೆಯರ 58 ಕೆಜಿ ವಿಭಾಗದಲ್ಲಿ ಕಂಚು ಗೆದ್ದ ಹರಿಯಾಣದ ಸಾಕ್ಷಿ ಭಾರತದ ಮಟ್ಟಿಗೆ ಇತಿಹಾಸ.
ಕ್ವಾರ್ಟರ್ಫೈನಲ್ನಲ್ಲಿ ಸೋತಿದ್ದ ಸಾಕ್ಷಿ ಅವರು ನಂತರ ರೆಪೆಚೇಜ್ನಲ್ಲಿ 8–5ರಿಂದ ಕಿರ್ಗಿಸ್ತಾನದ ಟೈನಿಬೆ ಕೊವಾ ಐಸುಲು ಅವರನ್ನು ಮಣಿಸಿ ದರು. ಅಖಾಡಕ್ಕೆ ನುಗ್ಗಿದ ಕೋಚ್ ಕುಲದೀಪ್ ಸಿಂಗ್ ಅವರು ಸಾಕ್ಷಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಕುಣಿದಾಡಿ ಸಂಭ್ರಮಿಸಿದರು. ತ್ರಿವರ್ಣ ಧ್ವಜ ಹೊದ್ದುಕೊಂಡಿದ್ದ 23 ವರ್ಷದ ಸಾಕ್ಷಿ ಸಂತಸದ ಉತ್ತುಂಗದಲ್ಲಿದ್ದರು.
ಒಲಿಂಪಿಕ್ಸ್ನ ವನಿತೆಯರ ಕುಸ್ತಿಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎಂಬ ಶ್ರೇಯ ವನ್ನು ತಮ್ಮದಾಗಿಸಿಕೊಂಡರು. ಪದಕ ಸಾಧನೆ ಮಾಡಿದ ಭಾರತದ ನಾಲ್ಕನೇ ಮಹಿಳಾಪಟು ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.
ಕರ್ಣಂ ಮಲ್ಲೇಶ್ವರಿ (ವೇಟ್ ಲಿಫ್ಟಿಂಗ್; 2000,ಸಿಡ್ನಿ ). ಎಂ.ಸಿ. ಮೇರಿ ಕೋಮ್ (ಬಾಕ್ಸಿಂಗ್– 2012, ಲಂಡನ್ ) ಮತ್ತು ಸೈನಾ ನೆಹ್ವಾಲ್ (ಬ್ಯಾಡ್ಮಿಂಟನ್–2012, ಲಂಡನ್) ಅವರು ಪದಕದ ಸಾಧನೆ ಮಾಡಿದ್ದರು.
ನಿರಾಸೆ ಮರೆಸಿದ ಕ್ಷಣ: ರಿಯೊ ಒಲಿಂಪಿಕ್ಸ್ ಆರಂಭವಾಗಿ ಕಳೆದ 11 ದಿನಗಳಿಂದ ನಿರಾಸೆಯನ್ನೇ ಅನುಭವಿ ಸಿದ್ದ ಭಾರತದ ಕ್ರೀಡಾಭಿಮಾನಿಗಳಲ್ಲಿ ಸಂಭ್ರಮ ಪುಟಿದೇಳುವಂತೆ ಮಾಡಿದರು.
ಕ್ವಾರ್ಟರ್ಫೈನಲ್ನಲ್ಲಿ ಸಾಕ್ಷಿ ಅವರು 2–9ರಿಂದ ರಷ್ಯಾದ ವೆಲೇರಿಯಾ ಕೊಬೊಲವಾ ವಿರುದ್ಧ ಸೋತಿದ್ದರು. ಕೊಬೊಲವಾ ಅವರು ನಂತರ ಸೆಮಿಫೈನಲ್ನ ಲ್ಲಿಯೂ ಗೆದ್ದು ಫೈನಲ್ಗೆ ಲಗ್ಗೆ ಹಾಕಿದರು. ಇದರಿಂದಾಗಿ ಸಾಕ್ಷಿಗೆ ರೆಪೆಚೇಜ್ (ಪ್ಲೇ ಆಫ್ ಬೌಟ್) ಅವಕಾಶ ಸಿಕ್ಕಿತು.
ಕಿರ್ಗಿಸ್ತಾನದ ಟೈನಿಬೆಕೊವಾ ಐಸುಲು ಆರಂಭದಿಂದಲೇ ಸಾಕ್ಷಿ ಮೇಲೆ ಒತ್ತಡ ಹೇರಿದ್ದರು. 5–0 ಮುನ್ನಡೆ ಯನ್ನೂ ಸಾಧಿಸಿದ್ದರು.ಆದರೆ ಅವರನ್ನು ಸಾಕ್ಷಿ 8–5ರಿಂದ ಹಣಿದಿದ್ದು ರೋಚಕ ಗಾಥೆ. ಐಸುಲು ಅವರು ಪಂದ್ಯದ ಆರಂಭದ 2 ನಿಮಿಷ, 20 ಸೆಕೆಂಡುಗಳು ಆಗಿದ್ದಾಗ 3 ಪಾಯಿಂಟ್ ಗಳಿಸಿದ್ದರು. 27 ಸೆಕೆಂಡುಗಳ ನಂತರ ಸಾಕ್ಷಿಯ ಕಾಲೆಳೆದ ಐಸುಲು ಮತ್ತೆರಡು ಅಂಕಗಳನ್ನು ಪಡೆದುಕೊಂಡರು. ಆದರೆ ಅದರ ನಂತರ ಅವರಿಗೆ ಅಂಕಗಳು ಒಲಿಯಲಿಲ್ಲ. ಎರಡನೇ ಗೇಮ್ನಲ್ಲಿ ಸಾಕ್ಷಿ ತಮ್ಮ ಅಂಕಗಳ ಖಾತೆ ತೆರೆದರು. ಎದುರಾಳಿ ಯನ್ನು ಮ್ಯಾಟ್ನಿಂದ ಹೊರಗೆ ಎತ್ತಿ ಹಾಕಿ ಎರಡು ಅಂಕಗ ಳನ್ನು ಗಳಿಸಿದರು. ನಂತರ ಮತ್ತೆರಡು ಪಾಯಿಂಟ್ಗಳನ್ನು ತಮ್ಮ ಬುಟ್ಟಿಗೆ ಸೇರಿಸಿಕೊಂಡರು.
ಪಂದ್ಯ ಮುಗಿಯಲು ಹತ್ತು ಸೆಕೆಂಡುಗಳು ಬಾಕಿಯಿದ್ದಾಗ ಐದು ಪಾಯಿಂಟ್ ಗಳೊಂದಿಗೆ ಸಮಬಲ ಸಾಧಿಸಿದ್ದರು. ಪಂದ್ಯ ಮುಗಿಯಲು ಒಂಬತ್ತು ಸೆಕೆಂಡುಗಳು ಬಾಕಿಯಿದ್ದಾಗ ಐಸುಲು ಅವರನ್ನು ‘ಡಬಲ್ ಲೆಗ್’ ಪಟ್ಟು ಹಾಕಿ ಮಕಾಡೆ ಮಲಗಿಸಿದ ಸಾಕ್ಷಿ ಮೂರು ಪಾಯಿಂಟ್ಸ್ ಪಡೆದರು. ಜಯದ ಸಂಭ್ರಮ ಗರಿಗೆದರಿತು. ಒಲಿಂಪಿಕ್ಸ್ನ ಕುಸ್ತಿಯಲ್ಲಿ ಭಾರತಕ್ಕೆ ಸಂದ ಐದನೇ ಪದಕ ಇದಾಗಿದೆ. ಕೆ.ಡಿ. ಜಾಧವ್ (1952), ಸುಶೀಲ್ ಕುಮಾರ್ (2008 ಮತ್ತು 2012), ಯೋಗೇಶ್ವರ್ ದತ್ (2012) ಪದಕ ಜಯಿಸಿದ್ದರು.
ಸಾಧನೆಗೆ ಮೆಚ್ಚುಗೆಯ ಹೊಳೆ, ಬಹುಮಾನಗಳ ಸುರಿಮಳೆ; ₹ 2.5 ಕೋಟಿ ಹಣ
ಚಂಡಿಗಡ (ಪಿಟಿಐ): ರಿಯೊ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದು ದೇಶದ ಹಿರಿಮೆ ಹೆಚ್ಚಿಸಿರುವ ಸಾಕ್ಷಿ ಮಲಿಕ್ಗೆ ಹರಿಯಾಣ ಸರ್ಕಾರ ₹ 2.5 ಕೋಟಿ ನಗದು ಹಾಗೂ ಸರ್ಕಾರಿ ಉದ್ಯೋಗ ನೀಡಲು ನಿರ್ಧರಿಸಿದೆ.
ಹರಿಯಾಣ ಸರ್ಕಾರ ಒಲಿಂಪಿಕ್ಸ್ಗೂ ಮುನ್ನವೇ ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದವರಿಗೆ ಕ್ರಮವಾಗಿ ₹6, ₹4 ಮತ್ತು ₹ 2.5 ಕೋಟಿ ನಗದು ಬಹುಮಾನ ಘೋಷಿಸಿತ್ತು.
ಕ್ರೀಡಾ ಸಚಿವಾಲಯ ವಿಶೇಷ ಬಹುಮಾನದ ಅಡಿಯಲ್ಲಿ ಸಾಕ್ಷಿಗೆ ₹ 20 ಲಕ್ಷ ನೀಡಲಿದ್ದು, ರೈಲ್ವೆ ಇಲಾಖೆ ₹ 60 ಲಕ್ಷ ಹಾಗೂ ಭಾರತ ಒಲಿಂಪಿಕ್ ಸಂಸ್ಥೆ ₹ 20 ಲಕ್ಷ ಬಹುಮಾನ ಪ್ರಕಟಿಸಿವೆ. ಸಾಕ್ಷಿ ಅವರು ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದಾರೆ.
ಖೇಲ್ ರತ್ನ ಗೌರವ?
ನವದೆಹಲಿ (ಪಿಟಿಐ): ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿರುವ ಸಾಕ್ಷಿ ಮಲಿಕ್ ಅವರ ಹೆಸರನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ.
ಸರ್ಕಾರದ ನೂತನ ನಿಯಮದ ಪ್ರಕಾರ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದವರು ನೇರವಾಗಿ ‘ಖೇಲ್ ರತ್ನ’ ಗೌರವಕ್ಕೆ ಅರ್ಹರಾಗಲಿದ್ದಾರೆ. ಸಾಕ್ಷಿ ಅವರಿಗೆ ಇನ್ನೂ ಅರ್ಜುನ ಪ್ರಶಸ್ತಿ ಸಿಕ್ಕಿಲ್ಲ. ಹೀಗಿದ್ದರೂ ಒಲಿಂಪಿಕ್ಸ್ ಸಾಧನೆಯ ಆಧಾರದಲ್ಲಿ ಅವರ ಹೆಸರನ್ನು ಖೇಲ್ ರತ್ನ ಗೌರವಕ್ಕೆ ಶಿಫಾರಸು ಮಾಡಬಹುದಾಗಿದೆ. ಕ್ರೀಡಾ ಸಚಿವಾಲಯದಿಂದ ನೇಮಕವಾಗಿರುವ 12 ಸದಸ್ಯರ ಆಯ್ಕೆ ಸಮಿತಿ ಬುಧವಾರ ಈ ಗೌರವಕ್ಕೆ ಒಲಿಂಪಿಯನ್ ಶೂಟರ್ ಜಿತು ರಾಯ್ ಮತ್ತು ಜಿಮ್ನಾಸ್ಟಿಕ್ಸ್ ಸ್ಪರ್ಧಿ ದೀಪಾ ಕರ್ಮಾಕರ್ ಅವರ ಹೆಸರನ್ನು ಅಂತಿಮಗೊಳಿಸಿತ್ತು.
ಮೋದಿ ಅಭಿನಂದನೆ
ನವದೆಹಲಿ (ಪಿಟಿಐ): ರಿಯೊದಲ್ಲಿ ಕಂಚಿನ ಸಾಧನೆ ಮಾಡಿರುವ ಸಾಕ್ಷಿ ಮಲಿಕ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಭಿನಂದಿಸಿದ್ದಾರೆ.
‘ರಕ್ಷಾ ಬಂಧನದ ದಿನವೇ ಸಾಕ್ಷಿ ಕಂಚು ಗೆದ್ದಿರುವುದು ಖುಷಿಯ ವಿಚಾರ. ಅವರು ದೇಶದ ಹೆಮ್ಮೆಯ ಪುತ್ರಿ. ಒಲಿಂಪಿಕ್ಸ್ನಲ್ಲಿ ಪದಕ ಗೆದ್ದು ನಾವೆಲ್ಲ ಹೆಮ್ಮೆಯಿಂದ ಬೀಗುವಂತೆ ಮಾಡಿದ್ದಾರೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ‘ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು. ನಿಮ್ಮ ಸಾಧನೆ ಹೀಗೆ ಮುಂದುವರಿಯಲಿ’ ಎಂದು ಪ್ರಣವ್ ಮುಖರ್ಜಿ ತಮ್ಮ ಟ್ವಿಟರ್ ಹೇಳಿದ್ದಾರೆ.
ಪ್ರಶಸ್ತಿಯ ಗರಿ
ಪ್ರಶಸ್ತಿ (ಲಖನೌ ವರದಿ): ಸಾಕ್ಷಿ ಅವರಿಗೆ ‘ರಾಣಿ ಲಕ್ಷ್ಮಿಬಾಯಿ’ ಪ್ರಶಸ್ತಿ ನೀಡಿ ಗೌರವಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಈ ಪ್ರಶಸ್ತಿ ರಾಣಿ ಲಕ್ಷ್ಮಿಬಾಯಿ ಅವರ ಕಂಚಿನ ಮೂರ್ತಿ ಮತ್ತು ₹3.11 ಲಕ್ಷ ನಗದು ಬಹುಮಾನವನ್ನು ಹೊಂದಿದೆ.
ಮುಖ್ಯಾಂಶಗಳು
* ಸತತ ನಾಲ್ಕನೇ ಒಲಿಂಪಿಕ್ಸ್ ನಲ್ಲಿ ಪದಕದ ಕಾಣಿಕೆ ನೀಡಿದ ಕುಸ್ತಿಪಟುಗಳು
* ಕುಸ್ತಿಯಲ್ಲಿ ಪದಕ ಗೆದ್ದ ಭಾರತದ ನಾಲ್ಕನೇ ಪಟು
* ಕಿರ್ಗಿಸ್ತಾನದ ಟೈನಿಬೆಕೊವಾ ಐಸುಲು ಅವರನ್ನು ಮಣಿಸಿದ ಸಾಕ್ಷಿ
***
* ‘ಮುಂಜಾನೆ ಎದ್ದ ಕೂಡಲೇ ನೀವು ಕಂಚು ಗೆದ್ದ ಸುದ್ದಿ ಕೇಳಿ ತುಂಬಾ ಆನಂದ ವಾಯಿತು. ನಿಮ್ಮ ಸಾಧನೆ ಅನನ್ಯ. ನೀವು ದೇಶಕ್ಕೆ ಹೆಮ್ಮೆ ತಂದಿದ್ದೀರಿ. ನಿಮಗೆ ಅಭಿನಂದನೆಗಳು’
-ಸಚಿನ್ ತೆಂಡೂಲ್ಕರ್
* ‘ಅಭಿನಂದನೆಗಳು ಸಾಕ್ಷಿ. ನಿಮ್ಮಿಂದ ಮೂಡಿಬಂದ ಪ್ರದರ್ಶನ ಅಮೋಘ ವಾದುದು. ನಿಮ್ಮ ಸಾಧನೆ ಯುವ ಸಮುದಾಯಕ್ಕೆ ಪ್ರೇರಣೆಯಾಗಲಿ’
-ಅಭಿನವ್ ಬಿಂದ್ರಾ
* ಭಾರತದ ಯಾವ ಹೆಣ್ಣು ಮಕ್ಕಳೂ ಮಾಡದ ಸಾಧನೆಯನ್ನು ಸಾಕ್ಷಿ ಮಾಡಿದ್ದಾರೆ. ಅವರು ನಿಜವಾದ ಹೀರೊ.
-ಸುಶೀಲ್ ಕುಮಾರ್, ಒಲಿಂಪಿಯನ್ ಕುಸ್ತಿಪಟು
* ಸಾಕ್ಷಿ ನಿಮಗೆ ಅಭಿನಂದನೆ. ನಿಮ್ಮ ಛಲ ಮತ್ತು ಧೈರ್ಯ ಮೆಚ್ಚುವಂತಹದ್ದು
-ಮೇರಿಕೋಮ್, ಒಲಿಂಪಿಯನ್ ಬಾಕ್ಸರ್
* ತಮ್ಮ ಮಗಳನ್ನು ಶ್ರೇಷ್ಠ ಕುಸ್ತಿಪಟುವಾಗಿ ರೂಪಿಸಿದ ಸಾಕ್ಷಿ ಅವರ ತಾಯಿಗೆ ಎಷ್ಟು ಅಭಿನಂದನೆ ಹೇಳಿದರೂ ಸಾಲದು. ಸಾಕ್ಷಿ ಸಾಧನೆಯಿಂದ ಇಡೀ ದೇಶವೇ ಹೆಮ್ಮೆಯಿಂದ ಬೀಗುವಂತಾಗಿದೆ
-ವಿಜೇಂದರ್ ಸಿಂಗ್, ಒಲಿಂಪಿಯನ್ ಬಾಕ್ಸರ್
* ಸಾಕ್ಷಿ ಗೆದ್ದ ಕಂಚು ಚಿನ್ನಕ್ಕಿಂತಲೂ ಅಮೂಲ್ಯವಾದುದು
-ಗಗನ್ ನಾರಂಗ್, ಒಲಿಂಪಿಯನ್ ಶೂಟರ್
* ಸಾಕ್ಷಿ ಈ ಬಾರಿ ಒಲಿಂಪಿಕ್ಸ್ನಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದು ಕೊಟ್ಟಿದ್ದಾರೆ. ತ್ಯಾಗ ಮತ್ತು ಅರ್ಪಣಾ ಮನೋಭಾವದಿಂದ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅವರು ನಿದರ್ಶನ
-ಮಹೇಂದ್ರ ಸಿಂಗ್ ದೋನಿ
* ರಕ್ಷಾ ಬಂಧನದ ದಿನವೇ ಸಾಕ್ಷಿ ಕಂಚು ಜಯಿಸಿರುವುದರಿಂದ ಸಂತೋಷವಾಗಿದೆ.
-ನರೇಂದ್ರ ಮೋದಿ, ಪ್ರಧಾನಿ
* ಸಾಕ್ಷಿ ನೀವು ದೇಶದ ಹೆಮ್ಮೆ. ನಿಮ್ಮ ಸಾಧನೆ ಹೀಗೆ ಮುಂದುವರಿಯಲಿ
-ಅನಿಲ್ ಕುಂಬ್ಳೆ, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್
* ನಿಮ್ಮ ಧೈರ್ಯ ಮತ್ತು ಕೆಚ್ಚೆದೆಯ ಹೋರಾಟಕ್ಕೆ ಸಂದ ಫಲ ಇದು. ನಿಮ್ಮ ಸಾಧನೆಗೆ ಸಲಾಂ
-ರೂಪಿಂದರ್ ಪಾಲ್ ಸಿಂಗ್, ಒಲಿಂಪಿಯನ್ ಹಾಕಿ ಆಟಗಾರ
* ನಡು ರಾತ್ರಿಯಲ್ಲಿ ನಡೆದ ನಿಮ್ಮ ಪಂದ್ಯ ನೋಡಿದೆ. ನೀವು ಹೋರಾಡಿದ ರೀತಿ ನೋಡಿ ತುಂಬಾ ಖುಷಿಯಾಯಿತು.
-ಹೀನಾ ಸಿಧು, ಒಲಿಂಪಿಯನ್ ಶೂಟರ್
* ಸಾಕ್ಷಿ ನಿಮ್ಮ ಸಾಧನೆ ಅದ್ಭುತವಾದುದು
-ಜ್ವಾಲಾ ಗುಟ್ಟಾ, ಬ್ಯಾಡ್ಮಿಂಟನ್ ಆಟಗಾರ್ತಿ
* ದೇಶಕ್ಕೆ ಮೊದಲ ಪಂದ್ಯ ಗೆದ್ದುಕೊಟ್ಟಿದ್ದೀರಿ. ನಿಮ್ಮ ಸಾಧನೆ ಅಸಾಮಾನ್ಯವಾದುದು
-ವಿಜಯ್ ಗೋಯೆಲ್, ಕ್ರೀಡಾ ಸಚಿವ
* ರಿಯೊದಲ್ಲಿ ನೀವು ದೇಶದ ಕೀರ್ತಿ ಬೆಳಗಿದ್ದೀರಿ. ನಿಮ್ಮ ಸಾಧನೆ ವಿಶಿಷ್ಟವಾದುದು
-ವಿವಿಎಸ್ ಲಕ್ಷ್ಮಣ್, ಕ್ರಿಕೆಟಿಗ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.