ಪ್ರಥಮ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ಪಠ್ಯಕ್ರಮ

7

ಪ್ರಥಮ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ಪಠ್ಯಕ್ರಮ

Published:
Updated:

ಉನ್ನತ ಶಿಕ್ಷಣಕ್ಕೆ ಮೂಲ ಆಧಾರವಾದ ಪಿಯುಸಿಗೆ ರಾಷ್ಟ್ರೀಯ ವಿಜ್ಞಾನ ಪಠ್ಯಕ್ರಮ ಅಳವಡಿಸಲು ತೀರ್ಮಾನಿಸಲಾಗಿದ್ದು, ಮುಂಬರುವ ಶೈಕ್ಷಣಿಕ ಸಾಲಿನಿಂದಲೇ (2012-13) ರಾಜ್ಯದಲ್ಲಿನ ಪ್ರಥಮ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ಪಠ್ಯಕ್ರಮ ಜಾರಿಯಾಗಲಿದೆ.ರಾಷ್ಟ್ರೀಯ ಪಠ್ಯಕ್ರಮಕ್ಕೆ ಅನುಗುಣವಾಗಿ ಈಗಾಗಲೇ ಪ್ರಥಮ ಪಿಯುಸಿಯ ಭೌತವಿಜ್ಞಾನ, ರಸಾಯನವಿಜ್ಞಾನ, ಜೀವವಿಜ್ಞಾನ ಮತ್ತು ಗಣಿತ ವಿಷಯಗಳ ಹೊಸ ಪಠ್ಯಕ್ರವನ್ನು ಪದವಿ ಪೂರ್ವ ಇಲಾಖೆ ಸಿದ್ಧಪಡಿಸಿದೆ. ರಾಷ್ಟ್ರೀಯ ಪಠ್ಯಕ್ರಮ ಜಾರಿಗೊಳಿಸುವುದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಇತರ ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ಎದುರಿಸಲು ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯುವ ಪ್ರವೇಶ ಪರೀಕ್ಷೆಗಳನ್ನು ಬರೆಯಲು ಅನುಕೂಲವಾಗಲಿದೆ.ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ನೀಡಲು ನಡೆಸುವ ಎಲ್ಲ ಪ್ರವೇಶ ಪರೀಕ್ಷೆಗಳು ರಾಷ್ಟ್ರೀಯ ಪಠ್ಯಕ್ರಮವನ್ನು ಆಧರಿಸಿರುತ್ತವೆ. ಈಗ ಇದೇ ಪಠ್ಯಕ್ರಮವನ್ನು ರಾಜ್ಯದಲ್ಲೂ ಜಾರಿಗೆ ತರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಸುಲಭವಾಗಲಿದೆ. ವೈದ್ಯಕೀಯ, ಎಂಜಿನಿಯರಿಂಗ್, ವಿಜ್ಞಾನ - ತಂತ್ರಜ್ಞಾನ ಮೊದಲಾದ ವಿಜ್ಞಾನ ಆಧಾರಿತ ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಸೇರಬಯಸುವ ಕರ್ನಾಟಕದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದು ನಿರೀಕ್ಷಿಸಲಾಗಿದೆ.ಸುಪ್ರೀಂಕೋರ್ಟ್ ಆದೇಶ ಮತ್ತು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ನೀತಿಯಂತೆ ರಾಷ್ಟ್ರಮಟ್ಟದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್, ಕಾನೂನು ಮುಂತಾದ ಉನ್ನತ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಒಂದೇ ಪ್ರವೇಶ ಪರೀಕ್ಷೆ ನಡೆಸುವ ಪ್ರಯತ್ನ ನಡೆದಿದ್ದು, ಒಂದೆರಡು ವರ್ಷಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ.ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಒಂದೇ ಪ್ರವೇಶ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಅನೇಕ ಅನುಕೂಲಗಳಿವೆ. ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ಒಂದೇ ಅರ್ಹತಾ ಪಟ್ಟಿಯನ್ನು ತಯಾರು ಮಾಡುವುದರಿಂದ ಆ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ. ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶದ ಅವಕಾಶಗಳು ಹೆಚ್ಚಾಗಿರುತ್ತವೆ.ಒಂದೇ ಪ್ರವೇಶ ಪರೀಕ್ಷೆ ನಡೆಸುವುದರಿಂದ ಮತ್ತೊಂದು ಅನುಕೂಲವೆಂದರೆ ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲಿನ ಮಾನಸಿಕ ಒತ್ತಡ, ಆರ್ಥಿಕ ತೊಂದರೆಗಳು ಕಡಿಮೆಯಾಗುತ್ತವೆ. ವಿದ್ಯಾರ್ಥಿಗಳು ವಿವಿಧ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸಲು ವಿಶೇಷ ತರಬೇತಿಗಾಗಿ ಪೋಷಕರು ಹೆಚ್ಚಿನ ಹಣ ಖರ್ಚು ಮಾಡಬೇಕಾಗಿತ್ತು. ಆದರೆ ರಾಷ್ಟ್ರಮಟ್ಟದಲ್ಲಿ ಒಂದೇ ಪ್ರವೇಶ ಪರೀಕ್ಷೆ ನಡೆಸುವುದರಿಂದ ಹಣದ ವ್ಯಯ ಹಾಗೂ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ.ರಾಷ್ಟ್ರೀಯ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುತ್ತಿರುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ಲಭ್ಯವಾಗುವಂತೆ ಮಾಡಲಾಗುತ್ತಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪುಸ್ತಕಗಳನ್ನು ಮುದ್ರಿಸಲು ಇಲಾಖೆ ಮುಂದಾಗಿದೆ. ಈ ಪಠ್ಯ ಪುಸ್ತಕಗಳಲ್ಲಿ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಅವಶ್ಯಕತೆಗಳನ್ನು ಪೂರೈಸುವುದಕ್ಕೆ ಒತ್ತು ನೀಡಲಾಗಿದೆ.ರಾಜ್ಯದ ಗ್ರಾಮೀಣ ಭಾಗದಲ್ಲಿ ವಿಜ್ಞಾನ ವಿಭಾಗಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಕಡಿಮೆ ಇದೆ. ಅಲ್ಲದೆ ವಿಜ್ಞಾನ ಶಿಕ್ಷಣವು ದುಬಾರಿಯಾಗಿದ್ದು, ಬಡವರಿಗೆ, ಇಂಗ್ಲಿಷ್ ಬಾರದವರಿಗೆ, ಹೆಣ್ಣು ಮಕ್ಕಳಿಗೆ ವಿಜ್ಞಾನ ಶಿಕ್ಷಣ ಮರೀಚಿಕೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಸಾಲಿನಿಂದ ಪದವಿಪೂರ್ವ ಶಿಕ್ಷಣ ಇಲಾಖೆಯು 10ನೇ ತರಗತಿ ಪಾಸು ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಸಮಾನ ರೀತಿಯ ವಿಜ್ಞಾನ ಶಿಕ್ಷಣ ನೀಡುವ ಗುರಿ ಹೊಂದಿದೆ.ವಿಜ್ಞಾನ ಪಥದೆಡೆಗೆ ನಿಮ್ಮ ನಡಿಗೆ

ಪದವಿಪೂರ್ವ ಹಂತದಲ್ಲಿ ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸೇರ್ಪಡೆಯಾಗುವಂತೆ ಮಾಡುವ ದೃಷ್ಟಿಯಿಂದ ಸೇತುಬಂಧ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸರ್ಕಾರಿ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ಹಾಗೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತವರಾಗಿರುತ್ತಾರೆ. ಕಲಿಕಾ ವಸ್ತುಗಳನ್ನು ಪಡೆಯುವ ಚೈತನ್ಯ, ಮನೆ ಪಾಠಗಳಿಗೆ ಹಣ ಖರ್ಚು ಮಾಡುವ ಶಕ್ತಿ ಇರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಥಮ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ಸೇತುಬಂಧ ಕಲಿಕಾ ಕಾರ್ಯಕ್ರಮ ರೂಪಿಸುತ್ತಿದ್ದು, ಇದು ಎರಡು ಹಂತಗಳಲ್ಲಿ ನಡೆಯಲಿದೆ.ಕಲಿಕೆಯಲ್ಲಿ ಹಿಂದುಳಿದವರಿಗೆ ಕೆಲವು ಮೂಲ ಪರಿಕಲ್ಪನೆಗಳು, ತಂತ್ರಗಳು, ಪ್ರಕ್ರಿಯೆಗಳು, ವ್ಯಾಖ್ಯೆಗಳು, ಸಮಸ್ಯೆಗಳು, ಸೂತ್ರಗಳು ಮುಂತಾದವುಗಳಿಗೆ ಹೆಚ್ಚು ಒತ್ತು ನೀಡಿ ಕಲಿಸುವುದು ಮತ್ತು ಪುನರಾವರ್ತನೆ ಮಾಡುವುದು. ಸೇತುಬಂಧ ಕಲಿಕಾ ವಸ್ತು ವಿಷಯವನ್ನು ಪ್ರೌಢಶಾಲೆಯ ಕೇಂದ್ರೀಯ ವಿದ್ಯಾಲಯ ಹಾಗೂ ಕಾಲೇಜಿನ ಕೆಲವು ಅನುಭವಿ ಶಿಕ್ಷಕರು ಹಾಗೂ ಉಪನ್ಯಾಸಕರುಗಳು ಸೇರಿ ರೂಪಿಸುತ್ತಿದ್ದಾರೆ. ಈ ಸೇತುಬಂಧ ಕಲಿಕಾ ವಸ್ತುವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ರೂಪಿಸಲಾಗುತ್ತಿದೆ. ಈ ಕಲಿಕಾ ವಸ್ತುವು, ಕಲಿಕೆ ಮತ್ತು ಕಾರ್ಯ ವಿಷಯಗಳನ್ನು ಒಳಗೊಂಡಿದೆ. ಈ ಸೇತುಬಂಧ ಕಲಿಕಾ ಪುಸ್ತಕಗಳನ್ನು ಸರ್ಕಾರಿ ಕಾಲೇಜುಗಳ ವಿಜ್ಞಾನದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಈ ವಸ್ತು ವಿಷಯಗಳನ್ನು ಇತರ ಕಾಲೇಜು ವಿದ್ಯಾರ್ಥಿಗಳೂ ಸಹ ಪಡೆಯಬಹುದು.ದೂರದರ್ಶನದಲ್ಲಿ ತರಗತಿ

ರಾಷ್ಟ್ರೀಯ ವಿಜ್ಞಾನ ಪಠ್ಯಕ್ರಮವನ್ನು ಜಾರಿಗೆ ತರುತ್ತಿರುವುದರಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ದೂರದರ್ಶನದ ಮೂಲಕ ವಿಜ್ಞಾನದಲ್ಲಿ `ಸೇತುಬಂಧ~ ವಿಷಯವನ್ನು ಬೋಧಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.ದೂರದರ್ಶನದ ಮೂಲಕ ತರಗತಿಗಳು ಏಪ್ರಿಲ್ 25ರಿಂದ ಜುಲೈ ಒಂದರವರೆಗೆ ಪ್ರಸಾರವಾಗಲಿವೆ. ವಿಶೇಷ ತರಗತಿಗಳು ಜುಲೈ ಒಂದರಿಂದ ವರ್ಷ ಪೂರ್ತಿ ದೂರದರ್ಶನದಲ್ಲಿ ಪ್ರಸಾರವಾಗಲಿವೆ.ಇದರಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ಬಗ್ಗೆ ಇರುವ ಭಯ ಹೋಗಲಾಡಿಸಲು ಅನುಕೂಲವಾಗಲಿದೆ. ಅಲ್ಲದೆ ಹಿಂಜರಿಕೆ ಸ್ವಭಾವದ ವಿದ್ಯಾರ್ಥಿಗಳಲ್ಲಿ ಈಗಿರುವ ಜ್ಞಾನವನ್ನು ಮತ್ತಷ್ಟು ಉತ್ತಮ ಪಡಿಸುವುದರ ಜೊತೆಗೆ ಪ್ರಥಮ ಪಿಯುಸಿಯಲ್ಲಿ ಹೊಸದಾಗಿ ಜಾರಿಗೆ ತಂದಿರುವ ರಾಷ್ಟ್ರೀಯ ವಿಜ್ಞಾನ ಪಠ್ಯ ವಿಷಯವನ್ನು ಸಮರ್ಥ ರೀತಿಯಲ್ಲಿ ಕಲಿಯಲು ಮತ್ತು ಮನೆ ಪಾಠಕ್ಕೆ ಶರಣಾಗುವುದನ್ನು ತಡೆಯಲು ಸಹಕಾರಿಯಾಗಲಿದೆ.ಉಪನ್ಯಾಸಕರ ಸಾಮರ್ಥ್ಯ ವೃದ್ಧಿ

ವಿಜ್ಞಾನ ಉಪನ್ಯಾಸಕರ ಬೋಧನಾ ಸಾಮರ್ಥ್ಯ ವೃದ್ಧಿಸಲು ಮತ್ತು ನೂತನ ಪಠ್ಯ ವಿಷಯವನ್ನು ಪರಿಣಾಮಕಾರಿಯಾಗಿ ಬೋಧಿಸಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಇಲಾಖೆಯು ಉಪನ್ಯಾಸಕರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ತರಬೇತಿ ಕಾರ್ಯಕ್ರಮಗಳು ಮಾರ್ಚ್ 2012ರಿಂದ ಪ್ರಾರಂಭವಾಗಲಿವೆ.ಹೊಸದಾಗಿ ವಿಜ್ಞಾನ ಬೋಧನೆ ಮಾಡುತ್ತಿರುವ ಬಹುತೇಕ ಕಾಲೇಜುಗಳಲ್ಲಿ ವಿಜ್ಞಾನ ಬೋಧನೆಗೆ ಅಗತ್ಯವಿರುವ ಸೌಲಭ್ಯಗಳ ಕೊರತೆ ಇರುವುದರಿಂದ ವಿಜ್ಞಾನದ ಪರಿಣಾಮಕಾರಿ ಬೋಧನೆ ಮತ್ತು ಕಲಿಕೆಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನ ವಿಷಯಗಳ ಬೋಧನೆಗೆ ಅಗತ್ಯವಾದ ಸೌಲಭ್ಯಗಳನ್ನು ಉತ್ತಮ ಪಡಿಸಲು ಇಲಾಖೆ ಮುಂದಾಗಿದೆ ಎನ್ನುತ್ತಾರೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರಾದ ವಿ.ರಶ್ಮಿ.ಪ್ರಯೋಗಾಲಯಗಳ ಸೌಲಭ್ಯಗಳನ್ನು ಉತ್ತಮ ಪಡಿಸಲು ಅಗತ್ಯವಿರುವ ಹಣವನ್ನು ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ಬಿಡುಗಡೆ ಮಾಡುವುದು. ಉಪನ್ಯಾಸಕರಿಗೆ ತರಬೇತಿ ನೀಡುವ ಮೂಲಕ ಅವರ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಪಾಳಿಯಲ್ಲಿ ನಡೆಯುವ ಕಾಲೇಜುಗಳಿಗೆ ಹಂತ ಹಂತವಾಗಿ ಸ್ವಂತ ಕಟ್ಟಡಗಳ ವ್ಯವಸ್ಥೆ ಮಾಡಲು ಸರ್ಕಾರ ಕ್ರಮಕೈಗೊಂಡಿದೆ. ಬರುವ ದಿನಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry