ಮಂಗಳವಾರ, ಏಪ್ರಿಲ್ 20, 2021
30 °C

ಪ್ರಥಮ ಬಾರಿಗೆ ಸಮುದಾಯ ಅರಣ್ಯಹಕ್ಕು ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಎಂಟು ಹಾಡಿಗಳ ಅರಣ್ಯವಾಸಿಗಳಿಗೆ ಸಮುದಾಯ ಅರಣ್ಯ ಹಕ್ಕು ನೀಡಲಾಯಿತು.ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಯ ಸಭೆಯಲ್ಲಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ, ಸಮಿತಿಯ ಸದಸ್ಯರು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಣ ಜೆ.ಗಂಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಧನಂಜಯ ಮತ್ತಿತರರ ಉಪಸ್ಥಿತಿಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.ಸಮುದಾಯ ಅರಣ್ಯ ಹಕ್ಕು ಪತ್ರದ ಜೊತೆಗೆ ಹಾಗೂ 78 ವೈಯಕ್ತಿಕ ಅರಣ್ಯ ಹಕ್ಕು ಪತ್ರಗಳನ್ನು ನೀಡಲು ಸಹ ತೀರ್ಮಾನಿಸಲಾಯಿತು.ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮೂಲನಿವಾಸಿಗಳ ಸಂತತಿಯನ್ನು ರಕ್ಷಿಸುವುದು ಹಾಗೂ ಇವರನ್ನು ಒಕ್ಕಲೆಬ್ಬಿಸುವ ಅರಣ್ಯ ಅಧಿಕಾರಿಗಳ ಪ್ರಯತ್ನಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅರಣ್ಯ ಹಕ್ಕು ಕಾಯ್ದೆಯನ್ನು 2006ರಲ್ಲಿ ಜಾರಿಗೆ ತಂದಿತು.ಈ ಕಾಯ್ದೆಯನ್ನು ಜಾರಿಗೊಳಿಸಲು ಕೆಲವು ರಾಜ್ಯಗಳು ಹಿಂದೇಟು ಹಾಕಿದ ಪರಿಣಾಮ ಪುನಃ ಕೇಂದ್ರ ಸರ್ಕಾರವು 2008ರಲ್ಲಿ ಈ ಕಾಯ್ದೆಯನ್ನು ಕಡ್ಡಾಯಗೊಳಿಸಿತು. ಈ ಕಾಯ್ದೆಯಡಿ ಗಿರಿಜನರಿಗೆ ಕಾಡಿನಲ್ಲಿ ವಾಸಿಸಲು ವೈಯಕ್ತಿಕ ಅರಣ್ಯ ಹಕ್ಕು ಹಾಗೂ ತಮ್ಮ ಹೊಟ್ಟೆಹೊರೆಯಲು ಅರಣ್ಯ ಕಿರುಉತ್ಪನ್ನಗಳನ್ನು ಬಳಸಲು ಸಮುದಾಯ ಅರಣ್ಯ ಹಕ್ಕು ದೊರೆಯುತ್ತದೆ.ಅದರ ನಿಮಿತ್ತ ಕೊಡಗಿನಲ್ಲಿ ಇದುವರೆಗೆ 807 ವೈಯಕ್ತಿಕ ಅರಣ್ಯ ಹಕ್ಕುಗಳನ್ನು ನೀಡಲಾಗಿತ್ತು. ಆದರೆ, ಸಮುದಾಯ ಅರಣ್ಯ ಹಕ್ಕಿಗೆ ಸಂಬಂಧಿಸಿದಂತೆ ಸಾಕಷ್ಟು ಅಡೆತಡೆಗಳು ಬಂದ ಹಿನ್ನೆಲೆಯಲ್ಲಿ ಇದುವರೆಗೆ ಇದು ಸಾಧ್ಯವಾಗಿರಲಿಲ್ಲ. ಇದೇ ಪ್ರಥಮವಾಗಿ ಎಂಟು ಹಾಡಿಗಳ ಗಿರಿಜನರಿಗೆ ಸಮುದಾಯ ಅರಣ್ಯ ಹಕ್ಕು ನೀಡಲಾಗಿದೆ.ಹಾಡಿಗಳು: ನಾಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟೆಕೆರೆ (66 ಎಕರೆ), ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜ್ಜಿಗೆಹಳ್ಳಿ ಆನೆ ಕ್ಯಾಂಪ್ (475.25 ಎಕರೆ), ನೊಕ್ಕೆ ಆಯಿರ ಸುಳಿ (233 ಎಕರೆ), ಜಂಗಲ್‌ಹಾಡಿ (85.50 ಎಕರೆ), ಚೆನೆ ಹಡ್ಲು (304. 50 ಎಕರೆ), ಬೊಂಬು ಕಾಡು (232.75 ಎಕರೆ), ಮಜ್ಜಿಗೆ ಹಳ್ಳಿ ಫಾರ್ಮ್ (92.60 ಎಕರೆ), ಕಾರ‌್ಯಕಂಡಿ (192.50 ಎಕರೆ) ಹಾಡಿಯ ಗಿರಿಜನರಿಗೆ ಸಮುದಾಯ ಹಕ್ಕು ನೀಡಲಾಗಿದೆ.57 ಕ್ಲೈಮುಗಳು ಬಾಕಿ: ಜಿಲ್ಲೆಯಲ್ಲಿ ಇನ್ನೂ 57 ಸಮುದಾಯ ಅರಣ್ಯ ಹಕ್ಕು ಕ್ಲೈಮುಗಳು ಬಾಕಿ ಇದ್ದು, ಆಗಸ್ಟ್ 25ರೊಳಗೆ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ಅವರು ಐಟಿಡಿಪಿ ಅಧಿಕಾರಿ ಎಲ್.ಜಿ. ಗಂಟಿ ಅವರಿಗೆ ಸೂಚಿಸಿದ್ದಾರೆ.ಆಗಸ್ಟ್ 5 ರಂದು ವಿರಾಜಪೇಟೆ ತಾಲ್ಲೂಕಿನ ಕುಟ್ಟ ತಾ.ಪಂ.ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಆ ವ್ಯಾಪ್ತಿಯ 6ಸಮುದಾಯದ ಅರಣ್ಯ ಕ್ಲೇಮುಗಳನ್ನು ತಡೆಹಿಡಿಯಲಾಗಿದೆ.ಅರಣ್ಯದಲ್ಲಿ ವಾಸಿಸುತ್ತಿರುವ ಅರ್ಹ ಬುಡಕಟ್ಟು ಕುಟುಂಬಗಳು ಇದುವರೆಗೆ ಅರಣ್ಯ ಹಕ್ಕುಪತ್ರ ಪಡೆಯಲು ಅರ್ಜಿ ಸಲ್ಲಿಸದಿದ್ದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಗಂಟಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಎನ್.ರಾಜಾರಾವ್, ಶಕುಂತಲ ರವೀಂದ್ರ, ಸುಲೋಚನಾ,  ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.