ಪ್ರದರ್ಶನಕ್ಕೆ ಮೆಚ್ಚುಗೆ; ಅಂಪೈರ್ ತೀರ್ಪಿಗೆ ಕಿಡಿ

7

ಪ್ರದರ್ಶನಕ್ಕೆ ಮೆಚ್ಚುಗೆ; ಅಂಪೈರ್ ತೀರ್ಪಿಗೆ ಕಿಡಿ

Published:
Updated:
ಪ್ರದರ್ಶನಕ್ಕೆ ಮೆಚ್ಚುಗೆ; ಅಂಪೈರ್ ತೀರ್ಪಿಗೆ ಕಿಡಿ

ಮುಂಬೈ (ಪಿಟಿಐ): ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದ ಭಾರತ ಹಾಕಿ ತಂಡದ ಸಾಧನೆಯನ್ನು ಮಾಜಿ ಆಟಗಾರ ಮೆರ್ವಿನ್ ಫರ್ನಾಂಡಿಸ್ ಶ್ಲಾಘಿಸಿದ್ದಾರೆ. ಆದರೆ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ಎದುರು ಅಂಪೈರ್ ನೀಡಿದ ತೀರ್ಪಿನ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.`ಇದೊಂದು ಗಮನಾರ್ಹ ಪ್ರದರ್ಶನ. ರೋಲಂಟ್ ಓಲ್ಟಮನ್ಸ್ ಮುಖ್ಯ ಕೋಚ್ ಆಗಿ ಕೆಲವೇ ದಿನಗಳು ಕಳೆದಿವೆ. ಯುವ ಆಟಗಾರರಾದ ಮನ್‌ದೀಪ್ ಸಿಂಗ್, ರಮಣದೀಪ್ ಹಾಗೂ ನಿಕಿನ್ ತಿಮ್ಮಯ್ಯ ಭರವಸೆ ಮೂಡಿಸಿದ್ದಾರೆ. ಆದರೆ ಅಂಪೈರ್ ತಪ್ಪಿನಿಂದಾಗಿ ಪ್ರಶಸ್ತಿ ಕೈತಪ್ಪಿ ಹೋಯಿತು' ಎಂದಿದ್ದಾರೆ.ಭಾನುವಾರ ನಡೆದ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ 4-3 ಗೋಲುಗಳಿಂದ ಸರ್ದಾರ್ ಸಿಂಗ್ ಸಾರಥ್ಯದ ಭಾರತ ತಂಡವನ್ನು ಮಣಿಸಿತ್ತು. ವಿರಾಮದ ವೇಳೆಗೆ 0-2 ಗೋಲುಗಳಿಂದ ಹಿನ್ನಡೆ ಸಾಧಿಸಿದ್ದ ಭಾರತ ದ್ವಿತೀಯಾರ್ಧದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು.ಆದರೆ ಕೊರಿಯಾ ಪರ ಅಂಪೈರ್ ನೀಡಿದ್ದ ಪೆನಾಲ್ಟಿ ಕಾರ್ನರ್ ತೀರ್ಪು ವಿವಾದಕ್ಕೆ ಕಾರಣವಾಗಿತ್ತು. ಆ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಕೊರಿಯಾ ಯಶಸ್ವಿಯಾಗಿತ್ತು. ಆಗ ಪಂದ್ಯ ಮುಗಿಯಲು ಎರಡು ನಿಮಿಷ ಬಾಕಿ ಇತ್ತು. ಆದರೆ `ಈ ತೀರ್ಪಿನಲ್ಲಿ ಅಂಪೈರ್ ಸಂಪೂರ್ಣವಾಗಿ ಎಡವಿದ್ದಾರೆ. ಈ ಅಂಶವೇ ಭಾರತ ಸೋಲಲು  ಕಾರಣ' ಎಂಬುದು ಫರ್ನಾಂಡಿಸ್ ಅವರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry